ADVERTISEMENT

ಮಸ್ಕಿ ವಿಧಾನಸಭಾ ಕ್ಷೇತ್ರ: ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ

ಗೊಂದಲಗಳಿಗೆ ಪುಷ್ಟಿ ನೀಡಿದ ಬಸನಗೌಡ ತುರ್ವಿಹಾಳ ಗೈರುಹಾಜರಿ

ನಾಗರಾಜ ಚಿನಗುಂಡಿ
Published 23 ಅಕ್ಟೋಬರ್ 2020, 3:07 IST
Last Updated 23 ಅಕ್ಟೋಬರ್ 2020, 3:07 IST
   

ರಾಯಚೂರು: ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಉಪಚುನಾವಣೆ ಘೋಷಣೆ ಯಾಗುವ ಪೂರ್ವದಲ್ಲಿಯೇ ಬಿಜೆಪಿ ನಾಯಕರಲ್ಲಿ ಭಿನ್ನಮತ ಭುಗಿಲೇಳುವ ಲಕ್ಷಣಗಳು ಆರಂಭವಾಗಿವೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಅವರು ಮಸ್ಕಿಯಲ್ಲಿ ಈಚೆಗೆ ನಡೆಸಿದ ಸಭೆಗೆ ತುಂಗಭದ್ರಾ ಎಡದಂಡೆ ಕಾಲುವೆ (ಟಿಎಲ್‌ಬಿಸಿ) ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಕಾಡಾ) ಅಧ್ಯಕ್ಷ ಬಸನಗೌಡ ತುರ್ವಿಹಾಳ ಅವರು ಗೈರುಹಾಜರಿಯಾಗಿದ್ದು, ಕ್ಷೇತ್ರದಲ್ಲಿ ಗೊಂದಲಗಳಿಗೆ ಎಡೆಮಾಡಿದೆ.

ಮುಖ್ಯವಾಗಿ ಬಿಜೆಪಿ ಕಾರ್ಯಕರ್ತರಲ್ಲಿಯೂ ಎರಡು ಬಣಗಳಾಗುತ್ತಿವೆ ಎಂಬುದು ಸ್ಪಷ್ಟವಾಗುತ್ತಿದೆ. ಪ್ರತಾಪಗೌಡ ಪಾಟೀಲ ಅವರನ್ನು ಬೆಂಬಲಿಸದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಈಗಾಗಲೇ ಕಾಂಗ್ರೆಸ್‌ ಸೇರ್ಪಡೆ ಆಗುತ್ತಿದ್ದಾರೆ.

ADVERTISEMENT

ಬಸನಗೌಡ ಅವರನ್ನು ಬೆಂಬಲಿಸು ವವರು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮತದಾರರ ಎದುರು ತಮ್ಮ ನಾಯಕನನ್ನು ಬೆಂಬಲಿಸುವಂತೆ ಕೋರುತ್ತಿದ್ದಾರೆ. ಕಾಡಾ ಅಧ್ಯಕ್ಷರಾಗುವ ಪೂರ್ವದಲ್ಲಿ ಬಸನಗೌಡ ಅವರು ಬೆಂಬಲಿಗರ ಅಭಿಪ್ರಾಯ ಸಂಗ್ರಹ ಕೆಲಸ ಮಾಡಿದ್ದರು. ಕೊನೆ ಗಳಿಗೆಯಲ್ಲಿ ಅಭಿಪ್ರಾಯಕ್ಕೆ ವಿರುದ್ಧವಾಗಿ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಬಸನಗೌಡ ಅವರು ಬೆಂಬಲಿಗರ ಅಭಿಪ್ರಾಯದತ್ತ ಮುಖ ಮಾಡಿದ್ದಾರೆ. ಒಂದು ವೇಳೆ ಅಭಿಪ್ರಾಯಕ್ಕೆ ಮನ್ನಣೆ ನೀಡಿದರೆ, ಉಪಚುನಾವಣೆಯಲ್ಲಿ ಸ್ಪರ್ಧಿಸುವುದು ನಿಶ್ಚಿತ. ಆದರೆ, ಪಕ್ಷದ ಚಿಹ್ನೆ ಯಾವುದಾಗುತ್ತದೆ ಎನ್ನುವುದು ಕುತೂಹಲ ಕೆರಳಿಸಿದೆ.

ಸದ್ಯಕ್ಕೆ ಬಿಜೆಪಿಯಲ್ಲಿ ಇದ್ದರೂ ಟಿಕೆಟ್‌ ನೀಡದ ಹೊರತಾಗಿ ಬಸನಗೌಡ ಅವರು ಅದೇ ಪಕ್ಷದಲ್ಲಿ ಮುಂದುವರಿ ಯುತ್ತಾರೆಯೇ ಎನ್ನುವುದು ಅನಿಶ್ಚಿತ. ಚುನಾವಣೆಗೆ ಸ್ಪರ್ಧಿಸುವಂತೆ ಬೆಂಬಲಿಗರ ಒತ್ತಾಯ ಇರುವುದರಿಂದ ಬಸನಗೌಡ ಅವರೆದುರು ಪಕ್ಷ ಹಾಗೂ ಬೆಂಬಲಿಗರು ಎನ್ನುವ ಎರಡು ಆಯ್ಕೆಗಳು ಎದುರಾಗಿವೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣಿಕರ್ತರಲ್ಲಿ ಪ್ರತಾಪಗೌಡ ಪಾಟೀಲ ಒಬ್ಬರು. ಬಿಜೆಪಿಯಿಂದ ಪ್ರತಾಪಗೌಡರಿಗೆ ಟಿಕೆಟ್‌ ನೀಡುವುದು ನಿಶ್ಚಿತ. ಆದರೆ, ಬಸನಗೌಡರು ಚುನಾವಣೆಗೆ ಸ್ಪರ್ಧಿಸುವ ಹುಮ್ಮಸ್ಸು ಬಿಟ್ಟುಕೊಡುವುದಿಲ್ಲ ಎನ್ನುವ ಕಾರಣಕ್ಕಾಗಿಯೇ ಈಗಾಗಲೇ ಕಾಂಗ್ರೆಸ್‌ ಪಕ್ಷದ ವರಿಷ್ಠರು, ಮುಕ್ತವಾದ ಆಹ್ವಾನ ನೀಡಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ಜಿಲ್ಲಾ ಕಾಂಗ್ರೆಸ್‌ ಮುಖಂಡರು ಈಗಾಗಲೇ ಬಸನಗೌಡ ತುರ್ವಿಹಾಳ ಅವರನ್ನು ಗುಪ್ತವಾಗಿ ಮನವೊಲಿಸುವ ಕೆಲಸ ಮಾಡಿದ್ದಾರೆ. ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಯಾವ ನಾಯಕರು ಯಾವ ಪಕ್ಷದಲ್ಲಿ ಇರುತ್ತಾರೆ ಎನ್ನುವುದು ಮುಂಬರುವ ದಿನಗಳಲ್ಲಿ ಸ್ಪಷ್ಟವಾಗಲಿದೆ. ಬಿಜೆಪಿಯಲ್ಲಿ ಸೃಷ್ಟಿಯಾಗಿರುವ ಭಿನ್ನಮತದ ಹೊರತಾಗಿಯೂ ಪ್ರತಾಪಗೌಡ ಪಾಟೀಲ ಅವರು ಗೆಲ್ಲುವ ವಿಶ್ವಾಸದಿಂದ ಈಗಾಗಲೇ ತಮ್ಮ ಬೆಂಬಲಿಗರನ್ನು ಒಟ್ಟಾಗಿಸಿ ಸರಣಿ ಸಭೆಗಳನ್ನು ಮಾಡುತ್ತಿದ್ದಾರೆ. ಒಟ್ಟಾರೆ, 2018 ರಲ್ಲಿ ನಡೆದಿದ್ದ
ವಿಧಾನಸಭೆ ಚುನಾವಣೆ ರೀತಿಯಲ್ಲಿಯೇ ಈ ಬಾರಿ ಉಪಚುನಾವಣೆಯೂ ನಡೆಯುವ ಲಕ್ಷಣಗಳು
ಗೋಚರಿಸುತ್ತಿವೆ.

ಕೆಲವೇ ಮತಗಳ ಅಂತರದಿಂದ ಜಯ ಸಾಧಿಸಿದ್ದ ಪ್ರತಾಪಗೌಡರು, ಈ ಚುನಾವಣೆಯಲ್ಲಿ ಹೆಚ್ಚಿನಅಂತರ ಸಾಧಿಸುವುದಕ್ಕಾಗಿ ಇನ್ನಷ್ಟು ಮತದಾರರ ಮನವೊಲಿಸುವ ಕೆಲಸ ಆರಂಭಿಸಿದ್ದಾರೆ. ಗೆಲ್ಲುವುದಕ್ಕೆ ಇನ್ನು ಕೆಲವು ಮತದಾರರ ಒಲವು
ಸಿಕ್ಕರೆ ಸಾಕಾಗುತ್ತದೆ ಎನ್ನುವ ವಿಶ್ವಾಸದಲ್ಲಿ ಬಸನಗೌಡ ತುರ್ವಿಹಾಳ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.