ADVERTISEMENT

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 5ಎ ಕಾಲುವೆ

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 15:29 IST
Last Updated 6 ಏಪ್ರಿಲ್ 2021, 15:29 IST
ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 5ಎ ಕಾಲುವೆಗಾಗಿ 138 ದಿನಗಳಿಂದ ಹೋರಾಟ ಮಾಡುತ್ತಿರುವ ರೈತರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಂಗಳವಾರ ಭೇಟಿ ಮಾಡಿ ಬೇಡಿಕೆ ಆಲಿಸಿದರು
ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 5ಎ ಕಾಲುವೆಗಾಗಿ 138 ದಿನಗಳಿಂದ ಹೋರಾಟ ಮಾಡುತ್ತಿರುವ ರೈತರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಂಗಳವಾರ ಭೇಟಿ ಮಾಡಿ ಬೇಡಿಕೆ ಆಲಿಸಿದರು   

ಪಾಮನಕಲ್ಲೂರು (ರಾಯಚೂರು): ‘ಒಂದು ಸಮೀಕ್ಷೆ ಪ್ರಕಾರ 2023 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ‌ ಬರುವುದು ನಿಶ್ಚಿತ. 5ಎ ಕಾಲುವೆ ಯೋಜನೆ ವೆಚ್ಚ ₹ 5 ಸಾವಿರ ಕೋಟಿಯಾದರೂ ಮಾಡಿಕೊಡುತ್ತೇವೆ.ಒಂದು ಸಲ ಮಾತು ಕೊಟ್ರೆ ಆಕಾಶವೆ ಕಳಚಿದರೂ ಮಾತು ತಪ್ಪುವುದಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರದಲ್ಲಿ ನೀರಾವರಿಯು ಆದ್ಯತೆಯಾಗಿತ್ತು. ನೀರಾವರಿ ವಿಚಾರ ಮುಂದಿಟ್ಟುಕೊಂಡು 134 ಕಿಲೋ ಮೀಟರ್ ಪಾದಯಾತ್ರೆ ಮಾಡಿದ್ದೆ.ಐದು‌ ವರ್ಷಗಳಲ್ಲಿ ₹ 50 ಸಾವಿರ ಕೋಟಿ ನೀರಾವರಿಗೆ ಖರ್ಚು ಮಾಡಿದ್ದೇವೆ. ಪ್ರತಾಪಗೌಡ ಅವರು ಒಂದು ದಿನವೂ ಈ ಬೇಡಿಕೆ ಕುರಿತು ಚರ್ಚಿಸಿಲ್ಲ’ ಎಂದರು.

‘ನಂದವಾಡಗಿ ಏತ ನೀರಾವರಿಗೆ ₹ 3 ಸಾವಿರ ಕೋಟಿ ಕೊಟ್ಟಿದ್ದೆ. ಗಮನಕ್ಕೆ‌ ಬಂದಿದ್ದರೆ ಖಂಡಿತ‌ ಅನುದಾನ ಕೊಡುತ್ತಿದ್ದೆ. ವೇತನ ಕೊಡಲು ಬಿಜೆಪಿ ಸರ್ಕಾರದಲ್ಲಿ ಹಣವಿಲ್ಲ. ಸಾಲ‌ ತಂದು ವೇತನ ಕೊಡುತ್ತಿದ್ದಾರೆ. ₹ 70 ಸಾವಿರ ಕೋಟಿ ಸಾಲ‌ ತಂದಿದ್ದಾರೆ. ಹಣಕಾಸು ಪರಿಸ್ಥಿತಿ ಹಾಳಾಗಿದೆ. 5ಎ ಕಾಲುವೆಗಾಗಿ ಹೋರಾಟ ಮಾಡುತ್ತಿರುವ ರೈತರ ಪರವಾಗಿ ಧ್ವನಿ ಎತ್ತುತ್ತೇವೆ’ ಎಂದು ಭರವಸೆ ನೀಡಿದರು.

ADVERTISEMENT

‘138 ದಿನಗಳಿಂದ ನಡೆಸುತ್ತಿರುವ ಹೋರಾಟ ಕೈಬಿಡಬೇಕು. ಬಿಜೆಪಿಯವರು ರೈತರ ಹೋರಾಟ ಬೆಂಬಲಿಸುವುದಿಲ್ಲ. ದೆಹಲಿಯಲ್ಲಿ ರೈತರು ಹೋರಾಟ ನಡೆಸಿ ಸಾಯುತ್ತಿದ್ದರೂ ಸ್ಪಂದಿಸುತ್ತಿಲ್ಲ’ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿ, ‘ಕಾಂಗ್ರೆಸ್‌ ರೈತರ ಪರವಾಗಿದೆ. ಈ ಹಿಂದೆ ನಾನು ನೀರಾವರಿ ಸಚಿವ ಇದ್ದಾಗ ರೈತರಿಂದ ಮನವಿ ಪಡೆದಿದ್ದೇನೆ. ಕೂಡಲೇ ಎಂಜಿನಿಯರ್‌ ಕಡೆಯಿಂದ‌ ವರದಿ ಪಡೆದಿದ್ದೇವೆ. ಶಾಸಕರಾಗಿದ್ದ ಪ್ರತಾಪಗೌಡ ಇದಕ್ಕೆ ಸ್ಪಂದಿಸಲಿಲ್ಲ. ನಿಮ್ಮ ಧ್ವನಿಯಾಗಿ‌ ಬಸನಗೌಡ ಕೆಲಸ ಮಾಡುತ್ತಾರೆ’ ಎಂದರು.

ರೈತ ಮುಖಂಡ ಬಸವರಾಜಪ್ಪಗೌಡ ಹರ್ವಾಪುರ ಮಾತನಾಡಿ, ‘5ಎ ನಾಲೆ ನಿರ್ಮಾಣಕ್ಕಾಗಿ ಕಳೆದ 13 ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಯಾವುದೇ ಸರ್ಕಾರ ಗಮನಹರಿಸಿಲ್ಲ ರೈತರ ಜೀವನಾಡಿಯಾದ ಕಾಲುವೆ ನಿರ್ಮಾಣ ಬೇಡಿಕೆ ಈಡೇರಿಸಬೇಕು’ ಎಂದು ಆಗ್ರಹಿಸಿದರು.

ರೈತ ಮುಖಂಡ ಶಿವನಗೌಡ ವಟಗಲ್ ಮಾತನಾಡಿ, ‘ಪದೇ ಪದೇ ಪಕ್ಷ ಬದಲಿಸಿದರೂ 13 ವರ್ಷಗಳಿಂದ ಪ್ರತಾಪಗೌಡ ಪಾಟೀಲ್‍ ಅವರನ್ನು ರೈತರು ಬೆಂಬಲಿಸಿದ್ದಾರೆ. 5ಎ ನಾಲೆ ನಿರ್ಮಾಣದ ಬಗ್ಗೆ ನಕಾರಾತ್ಮಕ ಧೋರಣೆ ಹೊಂದಿದ ಪ್ರತಾಪಗೌಡ ಪಾಟೀಲ್‍ ಅವರಿಗೆ ಪಾಠ ಕಲಿಸುವ ಸಮಯ ಬಂದಿದೆ’ ಎಂದರು.

ನಾಗರಡ್ಡಿ ದೇವರಮನಿ, ತಿಮ್ಮನಗೌಡ ಚಿಲ್ಕರಾಗಿ, ಬಸವರಾಜ ಬುಂಕಲದೊಡ್ಡಿ, ವೆಂಕಟೇಶ, ಮಂಜೂರುಪಾಶಾ, ರಂಜಾನ್‍ ಸಾಬ್‍ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.