ADVERTISEMENT

ಮಸ್ಕಿ ಉಪಚುನಾವಣೆ ದಿಕ್ಸೂಚಿ: ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 5:23 IST
Last Updated 12 ಏಪ್ರಿಲ್ 2021, 5:23 IST
ಕಾಂಗ್ರೆಸ್‌ ಬಹಿರಂಗ ಪ್ರಚಾರ ಸಭೆಯಲ್ಲಿ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು
ಕಾಂಗ್ರೆಸ್‌ ಬಹಿರಂಗ ಪ್ರಚಾರ ಸಭೆಯಲ್ಲಿ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು   

ಮಸ್ಕಿ (ರಾಯಚೂರು): ‘ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿಕ್ಸೂಚಿಯಾಗಿದ್ದು, ರಾಜ್ಯ ಮತ್ತು ರಾಷ್ಟ್ರದ ದೃಷ್ಟಿಯಿಂದ ಮಹತ್ವದ್ದಾಗಿದೆ’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಪಟ್ಟಣದ ಭ್ರಮರಾಂಭ ದೇವಸ್ಥಾನ ಪಕ್ಕದ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್‌ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದರು.

‘ಈ ಭಾಗದ ಅಭಿವೃದ್ಧಿಗೆ ‌371- ಜೆ ಜಾರಿಗೆ ತಂದಿದ್ದೇವೆ.‌ ಚುನಾವಣೆಯಲ್ಲಿ ಬಿಜೆಪಿಯವರು ಕೊಡುವ ಹಣಕ್ಕೆ ಯಾರೂ ಕೈ ಒಡ್ಡಬಾರದು.‌ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿಯನ್ನು‌ ನೀಡುವ ಕೆಲಸ ಕಾಂಗ್ರೆಸ್‌ ಮಾಡಿದೆ. ಸಿದ್ದರಾಮಯ್ಯ ಅವರ ಕಾಲದಲ್ಲಾದ ರಸ್ತೆಗಳ ದುರಸ್ತಿ ಮಾಡುವುದಕ್ಕೆ ‌ಬಿಜೆಪಿಗೆ ಆಗುತ್ತಿಲ್ಲ. ಪ್ರತಿಯೊಂದಕ್ಕೂ ಹಣವಿಲ್ಲ ಎನ್ನುತ್ತಾರೆ. ತೆರಿಗೆ ಹಣ ಎಲ್ಲಿ ಹೋಯಿತು ಎಂಬುದು ಗೊತ್ತಾಗುತ್ತಿಲ್ಲ’ ಎಂದರು.

ADVERTISEMENT

‘ಬಿಜೆಪಿಯಲ್ಲಿ ಒಬ್ಬರ ಮೇಲೆ ಒಬ್ಬರು ಆರೋಪ ಮಾಡುತ್ತಿದ್ದಾರೆ. ಯಡಿಯೂರಪ್ಪ ‌ಮತ್ತು‌ ಅವರ ಮಗನ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಪಕ್ಷದವರೇ ಮಾಡುತ್ತಿದ್ದಾರೆ. ಆರೋಪ‌ ಮಾಡಿದವರನ್ನು ತೆಗೆದುಹಾಕಿಲ್ಲ ಎಂದರೆ, ಅವರು ಆರೋಪಿಸುತ್ತಿರುವುದು ಸತ್ಯವಾಗಿದೆ ಎಂದರ್ಥ’ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ’ಪ್ರತಾಪಗೌಡ ಮಸ್ಕಿ‌ ಜನರ ಸ್ವಾಭಿಮಾನ ಮಾರಿಕೊಂಡಿದ್ದಾರೆ. ಶಾಸಕನಾಗಿ ಉಳಿಯುವ ಪುಣ್ಯ ಪ್ರತಾಪಗೌಡ ಅವರಿಗೆ ಇರಲಿಲ್ಲ. ಬೇಗನೆ ಸ್ಥಾನ ಖಾಲಿ ಮಾಡಿಕೊಂಡಿದ್ದಾರೆ. ಈಗ‌ ಜನರೆದುರು ಒಳ್ಳೆಯ ಅವಕಾಶ ಒದಗಿ ಬಂದಿದೆ. ಬಸನಗೌಡ ಅವರನ್ನು ಆಯ್ಕೆ ಮಾಡಿ‘ ಎಂದು ಕೋರಿದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ‌‌ ಬಿ.ವೈ.ವಿಜಯೇಂದ್ರ ಮಸ್ಕಿಯಲ್ಲಿ ಠಿಕಾಣಿ ಹೊಡೆದಿದ್ದಾರೆ. ಸರಿಯಾಗಿ ಅಭಿವೃದ್ಧಿ ಕೆಲಸ‌ ಮಾಡಿದ್ದರೆ ಠಿಕಾಣಿ ಹೊಡೆಯುವ ಅಗತ್ಯ ಬೀಳುತ್ತಿರಲಿಲ್ಲ’ ಎಂದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣಜಿತಸಿಂಗ್ ಸುರ್ಜಾವಾಲಾ, ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ, ಕಾಂಗ್ರೆಸ್‌ ಅಭ್ಯರ್ಥಿ ಬಸನಗೌಡ ತುರ್ವಿಹಾಳ, ಮುಖಂಡರಾದ ವೀಣಾ ಕಾಶೆಪ್ಪನ್ನವರ, ವಿಜಯ ಕಾಶೆಪ್ಪನವರ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ನಾಯಕ ಸ್ವಾಗತಿಸಿದರು. ಶಾಸಕರಾದ ಡಿ.ಎಸ್‌.ಹುಲಗೇರಿ, ಅಮರೇಗೌಡ ಬಯ್ಯಾಪುರ, ಬಸನಗೌಡ ದದ್ದಲ, ಗಣೇಶ, ಮುಖಂಡರಾದ ಹಂಪನಗೌಡ ಬಾದರ್ಲಿ, ಎನ್‌.ಎಸ್‌.ಬೋಸರಾಜ ಮತ್ತಿತರರು ಇದ್ದರು.

ಮಸ್ಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ನಿರೂಪಿಸಿದರು.

ಮೋದಿ ಗಡ್ಡಬಿಟ್ಟರೆ ಟ್ಯಾಗೋರ್ ಆಗೋದಿಲ್ಲ: ಖರ್ಗೆ

ಪ್ರಧಾನಿ ನರೇಂದ್ರ ಮೋದಿ ಗಡ್ಡಬಿಟ್ಟರೆ ರವೀಂದ್ರನಾಥ ಟ್ಯಾಗೋರ್ ಆಗೋದಿಲ್ಲ.‌ ಪಶ್ಚಿಮ ಬಂಗಾಳ ಚುನಾವಣೆ ಗಮನದಲ್ಲಿಟ್ಟುಕೊಂಡು ಮಾಡಿರುವ ನಕಲು ಇದಾಗಿದೆ' ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ‌ ಮಲ್ಲಿಕಾರ್ಜುನ ‌ಖರ್ಗೆ ಅವರು ಹೇಳಿದರು.

ಮಸ್ಕಿಯಲ್ಲಿ ಭಾನುವಾರ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ಪಶ್ಚಿಮ ‌ಬಂಗಾಳಕ್ಕೆ ಹೋಗಿದ್ದ ಪ್ರಧಾನಿ ಪಕ್ಷದ ನೀತಿ‌ಗಳನ್ನು ಹೇಳುವ ಬದಲು ಮಮತಾ‌ ಬ್ಯಾನರ್ಜಿ‌ ಅವರನ್ನು ವ್ಯಂಗ್ಯ ಮಾಡಿದ್ದಾರೆ. ಪ್ರಧಾನಿ ಜೋಕರ್ ರೀತಿ‌ ವರ್ತನೆ ತೋರಿಸಿದ್ದಾರೆ' ಎಂದು ಹರಿಹಾಯ್ದರು.

'ದೇಶದಲ್ಲಿ ಕೋವಿಡ್‌ನಿಂದ ಜನರು ಸಾಯುತ್ತಿದ್ದಾರೆ.‌ ಆದರೆ ಪ್ರಧಾನಿ ಬೇರೆ ಬೇರೆ ರಾಜ್ಯಗಳಿಗೆ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ' ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.