ADVERTISEMENT

51 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ

ಕುರುಕುಂದಾದಲ್ಲಿ ಪೊಲೀಸರೊಂದಿಗೆ ಕಾಂಗ್ರೆಸ್ ಕಾರ್ಯಕರ್ತರ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 13:57 IST
Last Updated 17 ಏಪ್ರಿಲ್ 2021, 13:57 IST
ಸಿಂಧನೂರು ತಾಲ್ಲೂಕಿನ ಕುರುಕುಂದಾ ಗ್ರಾಮದ ಮತಗಟ್ಟೆ ಮುಂದೆ ಯುವತಿ ಪದ್ಮಾವತಿ ಬಿಜೆಪಿ ಕಾರ್ಯಕರ್ತರನ್ನು ಒಳ ಬಿಡುತ್ತಿದ್ದ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು
ಸಿಂಧನೂರು ತಾಲ್ಲೂಕಿನ ಕುರುಕುಂದಾ ಗ್ರಾಮದ ಮತಗಟ್ಟೆ ಮುಂದೆ ಯುವತಿ ಪದ್ಮಾವತಿ ಬಿಜೆಪಿ ಕಾರ್ಯಕರ್ತರನ್ನು ಒಳ ಬಿಡುತ್ತಿದ್ದ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು   

ಸಿಂಧನೂರು: ಸಿಂಧನೂರು ತಾಲ್ಲೂಕು ವ್ಯಾಪ್ತಿಯ 27 ಹಳ್ಳಿಗಳಲ್ಲಿ ಬರುವ 51 ಮತಗಟ್ಟೆಗಳಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಶನಿವಾರ ಶಾಂತಿಯುತವಾಗಿ ನಡೆಯಿತು.

ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಯಿತು. ವಿವಿಧ ಹಳ್ಳಿಗಳಲ್ಲಿ ಮಹಿಳೆಯರು, ಪುರುಷರು, ಯುವಕ, ಯುವತಿಯರು ಗುರುತಿನ ಚೀಟಿ ಹಿಡಿದು ಮತಗಟ್ಟೆಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಕೆಲ ವೃದ್ದರನ್ನು ಯುವಕರು ವ್ಹೀಲ್ ಚೇರ್‌ಗಳ ಮೂಲಕ ಕರೆದುಕೊಂಡು ಬಂದ ಮತ ಹಾಕಿಸಿದ ದೃಶ್ಯಗಳು ಕಂಡು ಬಂದವು.

ತಾಲ್ಲೂಕಿನ ತುರ್ವಿಹಾಳ ಸಮೀಪದ ಶ್ರೀನಿವಾಸ ಕ್ಯಾಂಪಿನ 50 ಜನ ಮತದಾರರನ್ನು ಯಾದಿಯಿಂದ ಈ ಬಾರಿ ತೆಗೆದು ಹಾಕಿದ್ದಾರೆ ಎಂದು ಬಿಜೆಪಿ ಪಕ್ಷದ ಕಾರ್ಯಕರ್ತರಾದ ಚನ್ನಬಸವ ದೇಸಾಯಿ, ಸುಕುಮುನಿ ಆರೋಪಿಸಿದರು.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್ ಕವಿತಾ ಅವರು, ‘50 ಮತದಾರರನ್ನು ಯಾದಿಯಿಂದ ಕೈಬಿಡುವ ಪ್ರಶ್ನೆಯೇ ಇಲ್ಲ. ಆದರೆ 16 ಹೊಸ ಮತದಾರರು ತಮ್ಮ ದಾಖಲೆಗಳನ್ನು ಸಮರ್ಪಕವಾಗಿ ನೀಡದಿರುವುದರಿಂದ ಮತದಾರರ ಯಾದಿಯಲ್ಲಿ ಸೇರಿಸಲಾಗಿಲ್ಲ. ಹೊಸದಾಗಿ ಸೇರ್ಪಡೆಯಾಗುವ ಮತದಾರರ ಅಂತಿಯ ಯಾದಿ ಇನ್ನೂ ಪೂರ್ಣಗೊಳಿಸಿಲ್ಲ’ ಎಂದರು.

ಕುರುಕುಂದಾದಲ್ಲಿ ವಾಗ್ವಾದ

ತಾಲ್ಲೂಕಿನ ಕುರುಕುಂದಾ ಗ್ರಾಮದಲ್ಲಿ ಮತಗಟ್ಟೆ ಹತ್ತಿರ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಿಡುತ್ತಿದ್ದರು. ಆದರೆ ವ್ಯಕ್ತಿಯೊಬ್ಬರನ್ನು ಮತಗಟ್ಟೆ ಕೇಂದ್ರದಿಂದ ಪೊಲೀಸರು ಎಳೆದು ಕರೆತಂದರು.

ಇದರಿಂದ ಆಕ್ರೋಶಗೊಂಡ ಆ ವ್ಯಕ್ತಿಯ ಸಹೋದರಿ ಪದ್ಮಾವತಿ ಅವರು, ‘ಬಿಜೆಪಿಯವರಿಗೊಂದು ನ್ಯಾಯ, ಕಾಂಗ್ರೆಸ್‍ನವರಿಗೊಂದು ನ್ಯಾಯ ಸರಿಯೇ? ಬಿಜೆಪಿಯವರು ಮತಗಟ್ಟೆ ಬಳಿ ಕುಳಿತರೂ ಅವರನ್ನು ಮಾತನಾಡಿಸದೆ ತಮ್ಮ ಸಹೋದರನನ್ನು ಎಳೆದು ಕರೆತಂದಿರುವುದು ಸರಿಯಲ್ಲ. ಪೊಲೀಸರು ಒಂದು ಪಕ್ಷದ ಪರವಾಗಿ ಕೆಲಸ ಮಾಡಬಾರದು’ ದೂರಿದರು.

ಇದರಿಂದ ಕೆಲಕಾಲ ಮತಗಟ್ಟೆ ಮುಂದೆ ಉದ್ರಿಕ್ತ ಸ್ಥಿತಿ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.