ADVERTISEMENT

‘ಬಿಜೆಪಿ ಸಾಮಾಜಿಕ ನ್ಯಾಯದ ಪರವಿಲ್ಲ’

ಹಿಂದುಳಿದ ವರ್ಗಗಳ ಸಮಾಲೋಚನಾ ಸಭೆಯಲ್ಲಿ ಸಿದ್ದರಾಮಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 13:02 IST
Last Updated 11 ಏಪ್ರಿಲ್ 2021, 13:02 IST
ಸಿಂಧನೂರಿನ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ಭಾನುವಾರ  ನಡೆದ ಹಿಂದುಳಿದ ವರ್ಗಗಳ ಸಮಾಲೋಚನಾ ಸಭೆ ಹಾಗೂ ಜ್ಯೋತಿಬಾ ಫುಲೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮಾತನಾಡಿದರು
ಸಿಂಧನೂರಿನ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ಭಾನುವಾರ  ನಡೆದ ಹಿಂದುಳಿದ ವರ್ಗಗಳ ಸಮಾಲೋಚನಾ ಸಭೆ ಹಾಗೂ ಜ್ಯೋತಿಬಾ ಫುಲೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮಾತನಾಡಿದರು   

ಸಿಂಧನೂರು: ‘ಸ್ವಾತಂತ್ರ್ಯ ಪೂರ್ವದಿಂದಲೂ ಕಾಂಗ್ರೆಸ್ ಪಕ್ಷ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಹಿತರಕ್ಷಣೆಯೊಂದಿಗೆ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿದು ಮೀಸಲಾತಿಯನ್ನು ಕಾಪಾಡುತ್ತಿದೆ. ಆದರೆ, ಮೀಸಲಾತಿ ವಿರೋಧಿಯಾಗಿರುವ ಬಿಜೆಪಿ ಸಾಮಾಜಿಕ ನ್ಯಾಯದ ಪರವಾಗಿ ಇರುವ ಒಂದೇ ಒಂದು ನಿದರ್ಶನ ತೋರಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲ್ ಹಾಕಿದರು.

ನಗರದ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಸಮಾಲೋಚನಾ ಸಭೆ ಹಾಗೂ ಜ್ಯೋತಿಬಾ ಫುಲೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿರು.

‘1978 ರವರೆಗೆ ಭಾರತ ದೇಶದಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಇರಲಿಲ್ಲ. ಈ ಮಧ್ಯೆ ಮೀಸಲಾತಿಗಾಗಿ 1954 ರಲ್ಲಿ ಕಾಕಾ ಕಾಲೇಲ್ಕರ್, 1977 ರಲ್ಲಿ ಬಿ.ಪಿ.ಮಂಡಲ್ ಆಯೋಗ ವರದಿ ಸಲ್ಲಿಸಿತ್ತು. ಅವುಗಳನ್ನು ಬಿಜೆಪಿ ವಿರೋಧಿಸಿತು. 1994 ರಲ್ಲಿ ರಾಜೀವ್‍ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಮಹಿಳೆಯರಿಗೆ ಶೇ 30, ಬಿಸಿಎಂ-ಎ ಮತ್ತು ಬಿಸಿಎಂಬಿಗೆ ಶೇ 6.6, ಹಿಂದುಳಿದ ವರ್ಗಗಳಿಗೆ ಶೇ 26.6, ಎಸ್‍ಸಿ ಮತ್ತು ಎಸ್‍ಟಿ ವರ್ಗದವರಿಗೆ ಶೇ 18 ರಷ್ಟು ಮೀಸಲಾತಿಯನ್ನು ಜಾರಿಗೊಳಿಸಲಾಯಿತು. ರಾಜೀವ್‍ಗಾಂಧಿ ಹಿಂದುಳಿದವರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿದ ಫಲವಾಗಿಯೇ ಸಾಕಷ್ಟು ಜನ ಶಾಸಕರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದಾರೆ. ಇದನ್ನು ಯಾರು ಮರೆಯಬಾರದು ಎಂದು ಹೇಳಿದರು.

ADVERTISEMENT

‘ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಸ್‍ಇಪಿಟಿ, ಟಿಎಸ್‍ಪಿ ಯೋಜನೆಗೆ ಪ್ರತಿವರ್ಷ ₹ 30 ಸಾವಿರ ಕೋಟಿಯಂತೆ ಐದು ವರ್ಷಕ್ಕೆ ₹ 86 ಸಾವಿರ ಕೋಟಿ ಅನುದಾನ ನೀಡಲಾಯಿತು. ಆದರೆ ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ ವರ್ಷಕ್ಕೆ ₹ 26 ಸಾವಿರ ಕೋಟಿ ನೀಡಿ, ₹ 4 ಸಾವಿರ ಕೋಟಿ ಕಡಿತಗೊಳಿಸಿದ್ದಾರೆ. ಅಲ್ಲದೆ ಎಸ್‍ಸಿ, ಎಸ್‍ಟಿ ಕಲ್ಯಾಣಕ್ಕೆ ಮೀಸಲಿಟ್ಟ ಹಣವನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ಸಚಿವ ಶ್ರೀರಾಮುಲು ಅಸಹಾಯಕರಾಗಿದ್ದಾರೆ. ಅವರಿಗೆ ವಿರೋಧಿಸುವ ತಾಕತ್ತು ಇಲ್ಲವೆಂದರೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

‘ಮಾತೆತ್ತಿದರೆ ನಾನು ಬಡವರ ಪರ ಎಂದು ಹೇಳುವ ಯಡಿಯೂರಪ್ಪ ಲಿಂಗಾಯತ ಹಾಗೂ ಒಕ್ಕಲಿಗ ಅಭಿವೃದ್ದಿ ನಿಗಮಗಳಿಗೆ ತಲಾ ₹ 500 ಕೋಟಿ ಘೋಷಿಸಿ, 16 ಹಿಂದುಳಿದ ವರ್ಗಗಳ ನಿಗಮಗಳಿಗೆ ಕೇವಲ ₹ 120 ಕೋಟಿ ಕೊಟ್ಟಿರುವುದು ಸಾಮಾಜಿಕ ನ್ಯಾಯವೇ’ ಎಂದು ಪ್ರಶ್ನಿಸಿದರು.

‘ಅನ್ನಭಾಗ್ಯ ಯೋಜನೆಯಡಿ 7 ಕೆಜಿ ಅಕ್ಕಿಯನ್ನು 4 ಕೆಜಿ ಇಳಿಸಲಾಗಿದೆ. ಬಡವರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್ ಮುಚ್ಚುವ ಹುನ್ನಾರ ನಡೆದಿದೆ. ಸಂಗೊಳ್ಳಿರಾಯಣ್ಣ ಹುಟ್ಟಿದ ಸಂಗೊಳ್ಳಿ, ಹುತಾತ್ಮವಾದ ನಂದಗಡದ ಅಭಿವೃದ್ದಿಗಾಗಿ ₹ 272 ಕೋಟಿ ನೀಡಲಾಗಿತ್ತು. ವಾಲ್ಮೀಕಿ ಮತ್ತು ಕನಕದಾಸರ ತಪೋವನ ನಿರ್ಮಿಸಿ, ಪ್ರತಿಮೆ ಅನಾವರಣ ಮಾಡಲಾಗಿದೆ. ಅಂಬೇಡ್ಕರ್, ವಾಲ್ಮೀಕಿ, ದೇವರಾಜು ಅರಸು, ಅಂಬಿಗರು, ಮಡಿವಾಳ, ಉಪ್ಪಾರ, ಕ್ಷೌರಿಕ ಹೀಗೆ ಎಲ್ಲ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಲ್ಲಿ ಬಾಕಿಯಿದ್ದ ಸಾಲ ಮತ್ತು ಬಡ್ಡಿಯನ್ನು ಸಂಪೂರ್ಣವಾಗಿ ಏಕಕಾಲದಲ್ಲಿ ಮನ್ನಾ ಮಾಡಲಾಗಿದೆ. ಇಷ್ಟೆಲ್ಲ ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ನೀಡಬೇಕಾದರೆ ಮಸ್ಕಿ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ ಅವರಿಗೆ ಮತ ನೀಡಬೇಕು. ಬಸನಗೌಡರನ್ನು ಗೆಲ್ಲಿಸಿದರೆ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿದಂತೆ’ ಎಂದರು.

ಮಸ್ಕಿ ಚುನಾವಣೆ ಉಸ್ತುವಾರಿ ಆರ್.ಧ್ರುವನಾರಾಯಣ, ಮಹಿಳಾ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಿ.ನಾಯಕ, ಮಸ್ಕಿ ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ ಮಾತನಾಡಿದರು.

ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಾಜಿ ಸಚಿವ ಶಿವರಾಜ ತಂಗಡಗಿ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಡಾ.ಯತೀಂದ್ರ, ಅನಿಲ ಚಿಕ್ಕಮಾದು, ಮಾಜಿ ಶಾಸಕ ಶ್ರೀನಿವಾಸ ತರಿಕೇರ, ವಿಧಾನ ಪರಿಷತ್ ಮಾಜಿ ಸದಸ್ಯ ಶರಣಪ್ಪ ಮಟ್ಟೂರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್, ಕಾಂಗ್ರೆಸ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎ.ವಸಂತಕುಮಾರ, ಹಿಂದುಳಿದ ವರ್ಗಗಳ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಪ್ಪ, ಅಹಿಂದ ತಾಲ್ಲೂಕು ಅಧ್ಯಕ್ಷ ಜೆ.ರಾಯಪ್ಪ ಇದ್ದರು. ನಿರುಪಾದೆಪ್ಪ ಗುಡಿಹಾಳ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಜ್ಯೋತಿ ಬಾಪುಲೆ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು.

ಸಂಗೊಳ್ಳಿರಾಯಣ್ಣ ಬ್ರಿಗೇಡ್ ಏನಾಯಿತು?:

‘ಕೆ.ಎಸ್.ಈಶ್ವರಪ್ಪ ಮತ್ತು ಕೆ.ವಿರೂಪಾಕ್ಷಪ್ಪ ಜೊತೆಗೂಡಿ ಕಟ್ಟಿದ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಏನಾಯಿತು? ನಾನು ಬೂಟಾಟಿಕೆಗಾಗಿ ಹೋರಾಟ ಮತ್ತು ರಾಜಕಾರಣ ಮಾಡಲ್ಲ. ನನ್ನ ಜೀವ ಇರುವವರಿಗೂ ಮೀಸಲಾತಿ ಪರವಾಗಿಯೇ ಹೋರಾಟ ಮಾಡುತ್ತೇನೆ. ಸುಳ್ಳು ಹೇಳುವ ಮನುಷ್ಯ ನಾನಲ್ಲ. ಈ ಬಗ್ಗೆ ಯಡಿಯೂರಪ್ಪ, ಈಶ್ವರಪ್ಪ ಚರ್ಚೆಗೆ ಬರಲಿ. ವಿರೂಪಾಕ್ಷಪ್ಪ ಬಂದರೂ ಪರವಾಗಿಲ್ಲ. ಸತ್ಯ ಹೇಳುವುದಕ್ಕೆ ಎಂದಿಗೂ ಹೆದರಬಾರದು’ ಎಂದು ಸಿದ್ದರಾಮಯ್ಯ ಟೇಬಲ್ ಗುದ್ದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.