ADVERTISEMENT

ಸಂತೇಮರಹಳ್ಳಿ: ಹಾಳಾದ ರಸ್ತೆ, ಸಂಚಾರಕ್ಕೆ ತೊಂದರೆ

ಮಸ್ಕಿ ತಾಲ್ಲೂಕಿನ ತುಪ್ಪದೂರು ಗ್ರಾಮದಲ್ಲಿ ಸಮಸ್ಯೆಗಳು ಹಲವು

​ಪ್ರಜಾವಾಣಿ ವಾರ್ತೆ
Published 14 ಜೂನ್ 2020, 12:29 IST
Last Updated 14 ಜೂನ್ 2020, 12:29 IST
ಕವಿತಾಳ ಸಮೀಪದ ತುಪ್ಪದೂರು ಗ್ರಾಮದಲ್ಲಿ ರಸ್ತೆ ಹಾಳಾಗಿರುವುದು
ಕವಿತಾಳ ಸಮೀಪದ ತುಪ್ಪದೂರು ಗ್ರಾಮದಲ್ಲಿ ರಸ್ತೆ ಹಾಳಾಗಿರುವುದು   

ಕವಿತಾಳ: ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಪ್ಪದೂರು ಗ್ರಾಮವು ಕುಡಿಯುವ ನೀರು, ಚರಂಡಿ, ರಸ್ತೆ, ಶೌಚಾಲಯ ಮತ್ತು ಬಸ್‍ ವ್ಯವಸ್ಥೆ ಸೇರಿದಂತೆ ಹಲವು ಮೂಲಸೌಲಭ್ಯಗಳಿಂದ ವಂಚಿತವಾಗಿದೆ.

ಅಂದಾಜು 1500 ಜನಸಂಖ್ಯೆ, 800 ಮತದಾರರನ್ನು ಒಳಗೊಂಡ ಗ್ರಾಮದಲ್ಲಿ ಹಲವರಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಇದುವರೆಗೂ ಸಾಧ್ಯವಾಗಿಲ್ಲ. ಹೀಗಾಗಿ ಬಯಲು ಶೌಚಾಲಯ ವ್ಯವಸ್ಥೆ ಮುಂದುವರೆದಿದೆ.

ಶುದ್ಧೀಕರಣ ಘಟಕ ಇಲ್ಲದ ಕಾರಣ ಫ್ಲೋರೈಡ್‍ ಯಕ್ತ ಕೊಳವೆಬಾವಿ ನೀರು ಕುಡಿಯುವುದು ಜನರಿಗೆ ಅನಿವಾರ್ಯವಾಗಿದೆ. ಶುದ್ಧ ಕುಡಿಯುವ ನೀರು ಬೇಕೆಂದರೆ 1 .ಕಿ.ಮೀ. ದೂರದ ಹರ್ವಾಪುರ ಗ್ರಾಮಕ್ಕೆ ಹೋಗಬೇಕು. ದಶಕದ ಹಿಂದೆ ಕೆಲವು ಓಣಿಗಳಲ್ಲಿ ನಿರ್ಮಿಸಿದ್ದ ಚರಂಡಿ ಬಹುತೇಕ ಕಿತ್ತು ಹೋಗಿದ್ದು ಬಚ್ಚಲು ಮತ್ತು ಬಟ್ಟೆ ತೊಳೆದ ನೀರು ರಸ್ತೆ ಮೇಲೆ ಹರಿದು ಗಲೀಜು ಉಂಟಾಗುತ್ತಿದೆ.

ADVERTISEMENT

ಜನತಾ ಓಣಿಯಲ್ಲಿ ರಸ್ತೆ ಹದಗೆಟ್ಟಿದ್ದು ಸ್ವಲ್ಪ ಮಳೆಯಾದರೂ ಸಾಕು ರಸ್ತೆ ಗದ್ಧೆಯಂತಾಗುತ್ತದೆ. ಕೆಸರಿನಲ್ಲಿಯೇ ತಿರುಗಾಡ ಬೇಕಾದಂತಹ ಪರಿಸ್ಥಿತಿ ಇದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಬಸ್‍ ವ್ಯವಸ್ಥೆ ಇಲ್ಲದಿರುವುದರಿಂದ ಶಾಲಾ ಕಾಲೇಜುಗಳಿಗೆ ಪಟ್ಟಣಗಳಿಗೆ ಹೋಗುವ ವಿದ್ಯಾರ್ಥಿಗಳು ಪಾಮನಕಲ್ಲೂರು ವರೆಗೆ ಬರಲು ಟಂ ಟಂ ವಾಹನ ಅವಲಂಬಿಸಿದ್ದಾರೆ. ಅದೇ ರೀತಿ ಆಸ್ಪತ್ರೆ ಮತ್ತಿತರ ತುರ್ತು ಸಂದರ್ಭಗಳಲ್ಲಿ ಗ್ರಾಮದ ಜನತೆಗೆ ಟಂಟಂ ವಾಹನ ಅಥವಾ ಬೈಕ್‍ ಆಸರೆಯಾಗಿದೆ.

ಈಚೆಗೆ ಸುರಿದ ಮಳೆಯಿಂದ ರಸ್ತೆ ಸಂಪೂರ್ಣ ಕೆಸರಾಗಿದ್ದು ಬೈಕ್‍ ಸವಾರರು, ಮಕ್ಕಳು, ವೃದ್ಧರು ಓಡಾಡಲು ಪರದಾಡುತ್ತಿದ್ದಾರೆ ಎಂದು ಗ್ರಾಮದ ಹನುಮಂತ ಹೇಳುತ್ತಾರೆ.

ಕಾಂಕ್ರೀಟ್‍ ರಸ್ತೆ, ಚರಂಡಿ, ನಿರ್ಮಾಣ, ಕುಡಿಯುವ ನೀರಿನ ಶುದ್ಧೀಕರಣ ಘಟಕ ಸ್ಥಾಪನೆ, ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಸಹಾಯಧನ ನೀಡುವುದು ಮತ್ತು ಬಸ್‍ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.