
ಮಸ್ಕಿ: ಪಟ್ಟಣದಲ್ಲಿ ಭಾನುವಾರ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡಿದ್ದರಿಂದ ರಾಷ್ಟ್ರೀಯ ಹೆದ್ದಾರಿ–150ಎ ಮೇಲೆ ಗಂಟೆಗಟ್ಟಲೆ ಸಂಚಾರ ದಟ್ಟಣೆ ಉಂಟಾಯಿತು. ಇದರಿಂದ ಜನರು ತೊಂದರೆ ಅನುಭವಿಸಿದರು.
ಸರ್ವಿಸ್ ರಸ್ತೆಯಲ್ಲಿರುವ ಗಡಿಗಿ ಹೋಟೆಲ್‌ಗಳಿಗೆ ಬಂದ ಗ್ರಾಹಕರು ತಮ್ಮ ಬೈಕ್ ಹಾಗೂ ಕಾರುಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿದ ಕಾರಣ ಸಂಚಾರ ದಟ್ಟಣೆ ಉಂಟಾಯಿತು. ಕಿಲೋ ಮೀಟರ್‌ಗಳಷ್ಟು ದೂರ ವಾಹನಗಳ ಸಾಲು ಕಂಡುಬಂದಿತು.
ಸಂಚಾರ ದಟ್ಟಣೆಯಲ್ಲಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರ ವಾಹನವೂ ಸಿಲುಕಿಕೊಂಡಿತು. ಅವರು ವಾಹನದಿಂದ ಇಳಿದು ಸುಮಾರು ಒಂದು ಕಿಲೋ ಮೀಟರ್‌ವರೆಗೆ ನಡೆದುಕೊಂಡೇ ಸಾಗಿದರು.
ಬಸ್‌ಗಳು, ಲಾರಿಗಳು, ಆಂಬುಲೆನ್ಸ್ ಸೇರಿದಂತೆ ಅಗತ್ಯ ಸೇವೆಗಳ ವಾಹನಗಳಲ್ಲಿದ್ದವರೂ ತೊಂದರೆಗೆ ಸಿಲುಕಿದರು. ದೂರದ ಊರುಗಳಿಗೆ ಪ್ರಯಾಣಿಸಬೇಕಿದ್ದವರೂ ಪರದಾಡಿದರು. ಕೆಲವರು ಪರ್ಯಾಯ ಮಾರ್ಗಗಳತ್ತ ತಿರುಗಿದರೂ, ಅಲ್ಲಿ ಸಹ ಗದ್ದಲದ ಪರಿಸ್ಥಿತಿ ನಿರ್ಮಾಣವಾಯಿತು.
ಸರ್ವಿಸ್ ರಸ್ತೆಯಲ್ಲಿ ನಿರ್ದಿಷ್ಟ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದು ಹಾಗೂ ಪೊಲೀಸರು ಸಮರ್ಪಕವಾಗಿ ನಿಗಾ ವಹಿಸದಿರುವುದೇ ಅವ್ಯವಸ್ಥೆಗೆ ಕಾರಣ ಎನ್ನಲಾಗಿದೆ.
‘ವಾರಾಂತ್ಯದಲ್ಲಿ ಈ ಭಾಗದಲ್ಲಿ ಇದೇ ಸಮಸ್ಯೆ ಮರುಕಳಿಸುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಅಗತ್ಯ’ ಎಂದು ಸಾರ್ವಜನಿಕರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.