ADVERTISEMENT

ಮಸ್ಕಿ: ಮನೆ ಬಾಗಿಲಲ್ಲೇ ತ್ಯಾಜ್ಯ ಸಂಗ್ರಹ

ಮಸ್ಕಿ ಪುರಸಭೆ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

ಪ್ರಕಾಶ ಮಸ್ಕಿ
Published 17 ನವೆಂಬರ್ 2023, 5:22 IST
Last Updated 17 ನವೆಂಬರ್ 2023, 5:22 IST
ಮಸ್ಕಿ ಪಟ್ಟಣದಲ್ಲಿ ಮನೆ–ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸಿದ ಪುರಸಭೆ ವಾಹನ
ಮಸ್ಕಿ ಪಟ್ಟಣದಲ್ಲಿ ಮನೆ–ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸಿದ ಪುರಸಭೆ ವಾಹನ   

ಮಸ್ಕಿ: ಸ್ವಚ್ಛ ಪಟ್ಟಣ ನಿರ್ಮಾಣಕ್ಕೆ ಮುಂದಾಗಿರುವ ಪುರಸಭೆಯು ಇದೀಗ ಮನೆ–ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಕ್ಕೆ ಮುಂದಾಗಿದ್ದು, ಈ ಕ್ರಮಕ್ಕೆ ನಾಗರಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪುರಸಭೆಯ 23 ವಾರ್ಡ್‌ಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ ಹಾಕಿ ಸ್ವಚ್ಛತೆಯೇ ಇಲ್ಲದಂತಾಗಿತ್ತು. ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಆದರೆ, ಪಟ್ಟಣದ ಸ್ವಚ್ಛತೆಗೆ ಮುಂದಾದ ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ, ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಬಂದ ಐದಕ್ಕೂ ಹೆಚ್ಚು ತ್ಯಾಜ್ಯ ವಿಲೇವಾರಿ ವಾಹನಗಳು, ಟ್ರ್ಯಾಕ್ಟರ್‌ಗಳನ್ನು  ತ್ಯಾಜ್ಯ ಸಂಗ್ರಹಿಸುವ ಕೆಲಸಕ್ಕೆ ನಿಯೋಜಿಸಿದ್ದಾರೆ. ಅದಕ್ಕೆ ಬೇಕಾದ ಚಾಲಕರನ್ನೂ ನೇಮಿಸಿಕೊಂಡಿದ್ದಾರೆ. ಪ್ರತಿ ವಾರ್ಡ್‌ಗಳ ಮನೆ–ಮನೆಗೆ ವಾಹನಗಳನ್ನು ಹಾಗೂ ಪುರಸಭೆಯ ಸಿಬ್ಬಂದಿ ಕಳಿಸಿ ಒಣ ಕಸ ಹಾಗೂ ಹಸಿ ಕಸ ಸಂಗ್ರಹಿಸುವಂತೆ ಮಾಡಿದ್ದಾರೆ.

ADVERTISEMENT

ಬೆಳಿಗ್ಗೆ 5ರಿಂದಲೇ ತ್ಯಾಜ್ಯ ಸಂಗ್ರಹಿಸುವ ವಾಹನಗಳು ಸಿಬ್ಬಂದಿಯೊಂದಿಗೆ ಸ್ವಚ್ಛ ಭಾರತ ಯೋಜನೆ ಕುರಿತ ಜಾಗೃತಿ ಹಾಡು–ಜಿಂಗಲ್ಸ್‌ಗಳನ್ನು ಹಾಕಿಕೊಂಡು ವಾರ್ಡ್‌ಗಳ ಓಣಿಗಳಲ್ಲಿ ಸುತ್ತಾಡುತ್ತಿವೆ. ನಿವಾಸಿಗಳು ಮನೆಯಲ್ಲಿನ ಹಸಿ ಕಸ ಹಾಗೂ ಒಣ ಕಸವನ್ನು ವಾಹನಗಳ ಸಿಬ್ಬಂದಿಗೆ ನೀಡುತ್ತಿದ್ದಾರೆ. ಈ ಬೆನ್ನಲೆ ರಸ್ತೆಯ ಅಕ್ಕಪಕ್ಕ ಹಾಗೂ ಖಾಲಿ ಜಾಗದಲ್ಲಿ ತ್ಯಾಜ್ಯ ಬಿಸಾಡುತ್ತಿರುವುದು ವಾರದಿಂದ ಬಹುತೇಕ ಸ್ಥಗಿತಗೊಂಡಿದೆ.

ಬಾಡಿಗೆ ಜಾಗದಲ್ಲಿ ವಿಲೇವಾರಿ:

ಪಟ್ಟಣದ ವಿವಿಧ ವಾರ್ಡ್‌ಗಳಿಂದ ಸಂಗ್ರಹಿಸುತ್ತಿರುವ ಒಣ ಹಾಗೂ ಹಸಿ ಕಸವನ್ನು ಸದ್ಯ ಖಾಸಗಿ ವ್ಯಕ್ತಿಯೊಬ್ಬರ ಹೊಲದಲ್ಲಿ ಪುರಸಭೆ ವಿಲೇವಾರಿ ಮಾಡುತ್ತಿದೆ.

‘ತ್ಯಾಜ್ಯ ವಿಲೇವಾರಿಗಾಗಿ ಭೂಮಿ ಖರೀದಿಸುವ ಪ್ರಸ್ತಾವ ಹಲವಾರು ವರ್ಷಗಳಿಂದ ಜಿಲ್ಲಾಧಿಕಾರಿ ಮುಂದಿದೆ. ತಾತ್ಕಾಲಿಕವಾಗಿ ಖಾಸಗಿ ವ್ಯಕ್ತಿಯೊಬ್ಬರ ಹೊಲ ಬಾಡಿಗೆ ಪಡೆದು ಅದರಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿ ಅವರು ಭೂಮಿ ಖರೀದಿಗೆ ಅನುಮತಿ ನೀಡಿದರೆ ಪುರಸಭೆಯ ಬಹುದಿನದ ಬೇಡಿಕೆ ಈಡೇರಲಿದ್ದು, ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ’ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ಮಸ್ಕಿ ಪಟ್ಟಣದಲ್ಲಿ ಮನೆ–ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸಿದ ಪುರಸಭೆ ವಾಹನ
ನರಸರೆಡ್ಡಿ ಮುಖ್ಯಾಧಿಕಾರಿ ಪುರಸಭೆ ಮಸ್ಕಿ

ತ್ಯಾಜ್ಯಮುಕ್ತ ಪಟ್ಟಣದ ಗುರಿ

ಪುರಸಭೆಯ 23 ವಾರ್ಡ್‌ಗಳಲ್ಲಿನ ಮನೆ–ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸ್ಥಳೀಯ ಶಾಸಕರು ಹಾಗೂ ಹಿರಿಯ ಅಧಿಕಾರಿಗಳ ಸಹಕಾರ ಪಡೆದು ಮತ್ತಷ್ಟು ಕಸ ಸಂಗ್ರಹ ವಾಹನಗಳನ್ನು ಹೆಚ್ಚಿಸಿ ಮಸ್ಕಿಯನ್ನು ತ್ಯಾಜ್ಯಮುಕ್ತ ಪಟ್ಟಣವನ್ನಾಗಿ ಮಾಡಲಾಗುವುದು ಎಂದು ಮಸ್ಕಿ ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.