
ಮಾನ್ವಿ (ರಾಯಚೂರು ಜಿಲ್ಲೆ): ಪಟ್ಟಣದ ಅಕ್ಬರಿ ಮಸೀದಿಯಲ್ಲಿ ಭಾನುವಾರ ಪ್ರಥಮ ದರ್ಜೆ ಸಿವಿಲ್ ಗುತ್ತಿಗೆದಾರ ಸೈಯದ್ ಅಕ್ಬರ್ ಪಾಷಾ ಅವರು ತಮ್ಮ ಪುತ್ರನ ಮದುವೆ ಅಂಗವಾಗಿ ದಾರುಸ್ಸಲಾಂ ಫೌಂಡೇಶನ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ಮದುವೆಯಲ್ಲಿ ಮುಸ್ಲಿಂ ಸಮುದಾಯದ 121 ಜೋಡಿಗಳು ದಾಂಪತ್ಯಕ್ಕೆ ಪದಾರ್ಪಣೆ ಮಾಡಿದವು.
ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ಮುಸ್ಲಿಂ ಸಮುದಾಯದ ಅತೀ ಹೆಚ್ಚಿನ ಸಂಖ್ಯೆಯ ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ ಜಿಲ್ಲೆಯ ಮುಸ್ಲಿಂ ವಧು–ವರರು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು.
ಮದುವೆ ಕಾರ್ಯದಲ್ಲಿ ಟ್ರಸ್ಟ್ ವತಿಯಿಂದ ಎಲ್ಲ ನವ ವಧುಗಳಿಗೆ ತಲಾ 2 ಜೊತೆ ಸೀರೆ, ವರರಿಗೆ ಜುಬ್ಬಾ, ಪೈಜಾಮ, ಜಾಕೆಟ್ ಹಾಗೂ ಟೋಪಿ, ಮನೆಗೆ ಅಲ್ಮೇರಾ, ಪಲ್ಲಂಗ, ಗಾದಿ ಹಾಗೂ ಹೊದಿಕೆಗಳು, ದಿನಬಳಕೆಯ ಪಾತ್ರೆಗಳನ್ನು ಉಡುಗೊರೆಯಾಗಿ ನೀಡಲಾಯಿತು.
ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಸಚಿವರಾದ ಸತೀಶ ಜಾರಕಿಹೊಳಿ, ಎನ್.ಎಸ್. ಬೋಸರಾಜು, ಶಾಸಕರಾದ ಜಿ.ಹಂಪಯ್ಯ ನಾಯಕ, ಹಂಪನಗೌಡ ಬಾದರ್ಲಿ, ವಿಜಯಾನಂದ ಕಾಶಪ್ಪನವರ ಸೇರಿದಂತೆ ಹಲವಾರು ಗಣ್ಯರು, ಧರ್ಮಗುರುಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.