ADVERTISEMENT

26 ರಿಂದ ಸಿರಿಧಾನ್ಯ ಸಮಾವೇಶ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 15:24 IST
Last Updated 19 ಆಗಸ್ಟ್ 2022, 15:24 IST

ರಾಯಚೂರು: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಇದೇ ಆಗಸ್ಟ್ 26 ಮತ್ತು 27ರಂದು ನಬಾರ್ಡ್ ಹಾಗೂ ಕೃಷಿಗೆ ಸಂಬಂಧಪಟ್ಟ ಇಲಾಖೆಗಳ ಸಹಯೋಗದೊಂದಿಗೆ ಸಿರಿಧಾನ್ಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

ವಿಶ್ವ ಸಂಸ್ಥೆಯು 2023ನೇ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಿದೆ. ಈ ಅಂತರಾಷ್ಟ್ರೀಯ ವರ್ಷಾಚರಣೆಗೆ ಪೂರಕವಾದ ಅಭಿಯಾನವು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದಲೇ ಪ್ರಾರಂಭವಾಗುತ್ತಿರುವುದು ವಿಶೇಷ. ಈ ಸಮಾವೇಶವನ್ನು ಕೇಂದ್ರ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಗಸ್ಟ್‌ 27ರಂದು ಉದ್ಘಾಟಿಸಿ ‘ಸಿರಿಧಾನ್ಯ‘ ಉತ್ಪಾದನೆ ಮತ್ತು ಮೌಲ್ಯಾವರ್ಧನೆಗೆ ಸಂಬಂಧಿಸಿದಂತೆ ರೈತರಿಗೆ, ಸಿರಿಧಾನ್ಯ ಉದ್ದಿಮೆದಾರರು, ಪ್ರಾರಂಭದಾರರು ರೈತ ಉತ್ಪಾದಕರ ಸಂಘಗಳು, ಹೂಡಿಕೆದಾರರು, ರಫ್ತುದಾರರು, ಕೃಷಿ ತಜ್ಞರು, ಬ್ಯಾಂಕ್ ಸಿಬ್ಬಂದಿ ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿ ಮಾಡಲಿದ್ದಾರೆ.

ಕೇಂದ್ರದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರಾಜ್ಯ ಖಾತೆ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೃಷಿ ಸಚಿವ ಬಿ.ಸಿ.ಪಾಟೀಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಬಿ.ಪಾಟೀಲ, ಶಾಸಕ ಡಾ. ಶಿವರಾಜ ಪಾಟೀಲ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುವರು.

ADVERTISEMENT

ಈ ಸಮಾವೇಶದಲ್ಲಿ ಸುಮಾರು 50ಕ್ಕಿಂತಲೂ ಹೆಚ್ಚು ಸಿರಿಧಾನ್ಯಗಳಿಗೆ ಸಂಬಂಧಿಸಿದ ವಸ್ತು ಪ್ರದರ್ಶನದ ಮಳಿಗೆಗಳನ್ನು ಹಾಕಲಾಗುವುದು. ಈ ಕಾರ್ಯಕ್ರಮಕ್ಕೆ ಸುಮಾರು 600 ರೈತರು ಅಥವಾ ವಿಜ್ಞಾನಿಗಳು ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಬಿ.ಕೆ.ದೇಸಾಯಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.