
ಸಿರಿಧಾನ್ಯಗಳಿಗೆ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ | ಸಿರಿಧಾನ್ಯ ಬೆಳೆಯುವ ರೈತರಿಗೆ ಕೃವಿವಿ ಯಿಂದ ಮಾರ್ಗದರ್ಶನ | ಸಿರಿಧಾನ್ಯ ಮೌಲ್ಯವರ್ಧನೆ ಉತ್ತೇಜಿಸಲು ರೈತರಿಗೆ ತರಬೇತಿ
ರಾಯಚೂರು: ‘ಆಧುನಿಕ ಆಹಾರ ಪದ್ದತಿ, ಒತ್ತಡದ ಜೀವನ ಶೈಲಿಯಿಂದ ಅನೇಕ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಸೇವನೆ ಅಗತ್ಯ’ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಂ. ಹನುಮಂತಪ್ಪ ಹೇಳಿದರು.
ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಜಿಲ್ಲಾ ಕೃಷಿಕ ಸಮಾಜ, ಕೃಷಿ ತಂತ್ರಜ್ಞರ ಸಂಸ್ಥೆ ವತಿಯಿಂದ ರೈತ ದಿನಾಚರಣೆ ಅಂಗವಾಗಿ ನಗರದ ಕೃಷಿ ವಿವಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಿರಿಧಾನ್ಯ ಹಾಗೂ ವಾಣಿಜ್ಯ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
‘ಪೌಷ್ಟಿಕಾಂಶಗಳ ಆಗರವಾದ ಸಿರಿಧಾನ್ಯಗಳು ನವಣೆ, ರಾಗಿ, ಸಾಮೆ, ಬರಗು, ಕೊರಲೆ, ಜೋಳ ಸೇವನೆಯಿಂದ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ನಿಯಂತ್ರಣ ಸಾಧ್ಯ ಎನ್ನುವುದು ಸಂಶೋಧನೆಗಳಿಂದ ದೃಢಪಟ್ಟಿದೆ. ಸಿರಿಧಾನ್ಯಗಳು ಬರ ನಿರೋಧಕ ಶಕ್ತಿ ಹೊಂದಿದ್ದು, ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಕಡಿಮೆ ಖರ್ಚಿನಲ್ಲಿ ಉತ್ತಮ ಬೆಳೆ ಬೆಳೆಯಲು ಸಾಧ್ಯ ಮತ್ತು ಮಾರುಕಟ್ಟೆಯಲ್ಲಿ ಸಿರಿಧಾನ್ಯಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಅಧಿಕ ಲಾಭವೂ ಪಡೆಯಬಹುದು’ ಎಂದರು.
ಜಂಟಿ ಕೃಷಿ ನಿರ್ದೇಶಕ ಪ್ರಕಾಶ ಚವ್ಹಾಣ,‘ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆ ಉತ್ಫಾದನೆ ಹೆಚ್ಚಿಸಲು ಇಲಾಖೆ ಹಲವು ಯೋಜನೆಗಳನ್ನು ರೂಪಿಸಿದೆ. ಕೃಷಿ ವಿಶ್ವವಿಧ್ಯಾಲಯದ ಜೊತೆಯಲ್ಲಿ ಸಿರಿಧಾನ್ಯ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಉತ್ತೇಜಿಸುವ ಸಲುವಾಗಿ ಜಿಲ್ಲೆಯಾದ್ಯಂತ ವಿವಿಧ ರೈತ ಉತ್ಫಾದಕ ಸಂಘಗಳು ಮತ್ತು ಸ್ವ-ಸಹಾಯ ಗುಂಪುಗಳಿಗೆ ತರಬೇತಿಯ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ, ಕೆಪೆಕ್ ಹಾಗೂ ನಬಾರ್ಡನಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿ ಗ್ರೇಡಿಂಗ್, ಪ್ಯಾಕಿಂಗ್, ಮತ್ತು ಮಾರುಕಟ್ಟೆಗೆ ಸಾಗಿಸಲು ಸಹಾಯ ಮಾಡುತ್ತಿದೆ ಎಂದು ತಿಳಿಸಿದರು.
ಆಡಳಿತ ಮಂಡಳಿ ಸದಸ್ಯ ಮಲ್ಲಿಕಾರ್ಜುನ ಡಿ, ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ವಿಜಯಕುಮಾರ, ಜಿಲ್ಲಾಘಟಕದ ಅಧ್ಯಕ್ಷ ಸುರೇಂದ್ರಗೌಡ ಪಾಟೀಲ, ರಾಯಚೂರು ಘಟಕದ ಅಧ್ಯಕ್ಷ ಸಿದ್ಧಾರೆಡ್ಡಿ, ಸಿಂಧನೂರು ಘಟಕದ ಅಧ್ಯಕ್ಷ ಹೊನ್ನನಗೌಡ ಬೆಳಗುರ್ಕಿ, ಕೃಷಿ ವಿವಿಯ ಸಂಶೋಧನಾ ನಿರ್ದೇಶಕ ಅಮರೇಗೌಡ ಎ., ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ತಿಮ್ಮಣ್ಣ ನಾಯಕ, ಡಾ. ಬಸವಣ್ಣೆಪ್ಪ ಎಂ. ಎ, ಡಾ. ಉದಯಕುಮಾರ ನಿಡೋಣಿ, ಡಾ. ಅರುಣ ಕುಮಾರ್ ಹೊಸಮನಿ, ಕೃಷಿ ತಂತ್ರಜ್ಞ ಸಂಸ್ಥೆ ಅಧ್ಯಕ್ಷ ಆರ್. ಎ. ಪಾಟೀಲ, ಉಪ ನಿರ್ದೇಶಕ ನಯೀಮ್ ಹುಸೇನ್, ಮುತ್ತುರಾಜ್, ವಿಜ್ಞಾನಿಗಳಾದ ಶ್ರೀವಾಣಿ ಜಿ ಎನ್, ವೀಣಾ ಟಿ, ಸಹಾಯಕ ಕೃಷಿ ನಿರ್ದೇಶಕಿ ದೀಪಾ ಕುಲ್ಕರ್ಣಿ, ಶ್ರೀನಿವಾಸ ನಾಯಕ, ಮಲ್ಲಿಕಾರ್ಜುನ, ಸುಭಾನ್, ಸೊಹೆಲ್, ಸುನೀಲ್, ಅಮರೇಶ ಆಶಿಹಾಳ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರಗತಿಪರ ರೈತರು ಮತ್ತು ಕೃಷಿಕ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಿರಿಧಾನ್ಯದ ಮಹತ್ವ ಕುರಿತು ಜಾಗೃತಿ ಮೂಡಿಸಲು ಕೃಷಿ ವಿಜ್ಞಾನ ಕೇಂದ್ರ ವರ್ಷಪೂರ್ತಿ ರೈತರ ಜೊತೆ ಕೆಲಸ ಮಾಡುತ್ತದೆಎಂ. ಹನುಮಂತಪ್ಪ ಕೃಷಿ ವಿಶ್ವವಿದ್ಯಾಲಯ ಕುಲಪತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.