ಸಿಂಧನೂರು: ‘ಚಿಲ್ಡ್ರನ್ ಇಸ್ಲಾಮಿಕ್ ಆರ್ಗನೈಸೇಶನ್, ಜಮಾಅತೆ ಇಸ್ಲಾಮಿ ಹಿಂದ್ ಹಾಗೂ ವನಸಿರಿ ಫೌಂಡೇಶನ್‌ನ ಸಹಯೋಗದಲ್ಲಿ ‘ಮಣ್ಣಿನೊಂದಿಗೆ ಕೈಗಳು, ಭಾರದೊಂದಿಗೆ ಹೃದಯಗಳು’ ಘೋಷವಾಕ್ಯದಡಿ ಜೂ.25ರಿಂದ ಜು.25 ರವರೆಗೆ ಮಾಸ ಪೂರ್ತಿ ಹಸಿರು ಅಭಿಯಾನದ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ವಿದ್ಯಾರ್ಥಿನಿ ಮುನಿಬಾ ಯಾಕೂಬ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಮಕ್ಕಳಲ್ಲಿ ಸಾಮಾಜಿಕ, ನೈತಿಕ, ಧಾರ್ಮಿಕ ಹಾಗೂ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ 7ರಿಂದ 14 ವರ್ಷದ ಮಕ್ಕಳನ್ನು ಒಳಗೊಂಡು ಆರ್ಗನೈಸೇಶನ್ ಸ್ಥಾಪನೆ ಮಾಡಲಾಗಿದೆ. ಭಾರತ ದೇಶಾದ್ಯಂತ 10 ಲಕ್ಷ ಗಿಡಗಳನ್ನು ನೆಟ್ಟು ಪೋಷಿಸುವ ಗುರಿ ಹೊಂದಲಾಗಿದ್ದು, ಅದರಂತೆ ಸಿಂಧನೂರಿನಲ್ಲಿ 1 ಸಾವಿರ ಗಿಡಗಳನ್ನು ನೆಡುವ ಸಂಕಲ್ಪ ಮಾಡಲಾಗಿದೆ’ ಎಂದು ಹೇಳಿದರು.
ವಿದ್ಯಾರ್ಥಿನಿಯ ಆಯೇಶಾ ತಾಜ್ ಮಾತನಾಡಿ,‘ಜು.5ರಂದು ಈ ಅಭಿಯಾನದ ಲೋಗೊ ಬಿಡುಗಡೆ ಮಾಡಲಾಗುವುದು. ಅರಣ್ಯ ಇಲಾಖೆ ಅಧಿಕಾರಿಗಳಿಂದ ಪರಿಸರ ಸಂರಕ್ಷಣೆ ಮತ್ತು ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು. ವಿದ್ಯಾರ್ಥಿಗಳಿಗಾಗಿ ಪರಿಸರ ಜಾಗೃತಿ ವಿಷಯಕ್ಕೆ ಸಂಬಂಧಿಸಿದಂತೆ ಪ್ರಬಂಧ, ಚಿತ್ರಕಲೆ, ಭಾಷಣ, ಚರ್ಚಾ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು’ ಎಂದು ತಿಳಿಸಿದರು.
‘ಜು.26ರಂದು ಬೆಳಿಗ್ಗೆ 10 ಗಂಟೆಗೆ ನಗರದ ಎಲ್ಲ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಸ್ತ್ರೀಶಕ್ತಿ ಭವನದಿಂದ ಕೋಟೆ ಏರಿಯಾದ ಮಿಲಾಪ್ ಶಾದಿ ಮಹಲ್‍ವರೆಗೆ ಪರಿಸರ ಜಾಗೃತಿ ಜಾಥಾ ನಡೆಸಲಾಗುವುದು. ನಂತರ ಅಭಿಯಾನದ ಸಮಾರೋಪ ಸಮಾರಂಭ ನಡೆಯಲಿದೆ’ ಎಂದರು.
ವಿದ್ಯಾರ್ಥಿಗಳಾದ ತನ್ವೀರ್, ಹಾರೂನ್, ಫೈಜಾನ್, ಜೈದ್, ಉಮ್ಮೆ ಅರ್ಷಿಯಾ, ಅಸ್ಪಾ ಜರೀನ್, ರುಖಿಯಾ ಕೌಸರ್, ರುಕ್ಸಾನಾ, ಹುಜೈಫಾ, ಜುನೈದ್ ಹಾಗೂ ಅಸ್ಲಾಂ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.