ADVERTISEMENT

ಕೇಂದ್ರದ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 15:29 IST
Last Updated 5 ಜುಲೈ 2019, 15:29 IST
ಚಾಮರಸ ಮಾಲಿಪಾಟೀಲ, ರೈತ ಹೋರಾಟಗಾರ
ಚಾಮರಸ ಮಾಲಿಪಾಟೀಲ, ರೈತ ಹೋರಾಟಗಾರ   

ರಾಯಚೂರು: ಕೇಂದ್ರ ಸರ್ಕಾರವು ಶುಕ್ರವಾರ ಮಂಡಿಸಿರುವ ಬಜೆಟ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಖ್ಯವಾಗಿ ರೈತರಿಗೆ ಯಾವುದೇ ಯೋಜನೆಗಳನ್ನು ಘೋಷಿಸಿಲ್ಲ ಎನ್ನುವ ಅಸಮಾಧಾನ ಹೆಚ್ಚಾಗಿದೆ.

ದೇಶದ ಬಹಳಷ್ಟು ಕಡೆಗಳಲ್ಲಿ ಬರಗಾಲ ಆವರಿಸುತ್ತಿದ್ದು, ಇಂತಹ ಸ್ಥಿತಿಯಲ್ಲಿ ಕೃಷಿ ಕ್ಷೇತ್ರವನ್ನು ಉತ್ತೇಜಿಸಲು ಬಜೆಟ್‌ನಲ್ಲಿ ಏನಾದರೂ ಹೊಸ ಯೋಜನೆಗಳನ್ನು ಘೋಷಿಸಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಹಿಂದುಳಿದ ಭಾಗಗಳಲ್ಲಿ ಒಂದಾದ ರಾಯಚೂರು ಜಿಲ್ಲೆಗೆ ಬಜೆಟ್‌ನಲ್ಲಿ ಯಾವುದೇ ಕೊಡುಗೆ ನೀಡಿಲ್ಲ ಎನ್ನುವ ಅಸಮಾಧಾನವನ್ನು ಜನರು ಹೊರಹಾಕಿದ್ದಾರೆ. ಇದೆಲ್ಲದರ ಮಧ್ಯೆ ವಯೋವೃದ್ಧರ ಪಿಂಚಣಿಯನ್ನು ಏರಿಕೆ ಮಾಡಿರುವುದು ಮತ್ತು ನಿರುದ್ಯೋಗಿಗಳು ಉದ್ಯೋಗ ಕೈಗೊಳ್ಳುವುದಕ್ಕೆ ವಿವಿಧ ಯೋಜನೆಗಳನ್ನು ಘೋಷಿಸಿರುವುದನ್ನೂ ಸ್ವಾಗತಿಸಿದ್ದಾರೆ. ಬಜೆಟ್‌ ಕುರಿತು ಪ್ರತಿಕ್ರಿಯೆಗಳು....

ಕೆಟ್ಟ ಬಜೆಟ್‌

ADVERTISEMENT

ಕೇಂದ್ರ ಬಜೆಟ್‌ ಯಾವುದೇ ರೈತರಿಗೆ ಅನುಕೂಲ ಮಾಡಿಲ್ಲ. ಮಧ್ಯಮ, ಕೆಳಹಂತದ ವರ್ಗಕ್ಕೆ ಹೊರೆಯಾಗಿದೆ. ಇಂತಹ ಕೆಟ್ಟ ಬಜೆಟ್‌ ಎಂದಿಗೂ ನೋಡಿರಲಿಲ್ಲ. ರೈತರ ಅದಾಯ ದ್ವಿಗುಣ ಮಾಡುವುದನ್ನು ಪುನರಾರ್ತನೆ ಮಾಡುತ್ತಿದ್ದು, ಬೂನಾದಿಯಿಲ್ಲದೆ ಮನೆ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಆದಾಯ ದ್ವಿಗುಣಕ್ಕೆ ಯಾವುದೇ ಯೋಜನೆಗಳನ್ನೆ ರೂಪಿಸಿಲ್ಲ. ರೈತರು ಭೀಕ್ಷೆ ಬೇಡುವ ಪರಿಸ್ಥಿತಿ ತಪ್ಪಿಸಲು ಏನು ಕ್ರಮ ಕೈಗೊಂಡಿಲ್ಲ.

ಚಾಮರಸ ಮಾಲಿಪಾಟೀಲ, ರೈತ ಮುಖಂಡರು, ರಾಯಚೂರು

**

ಪಿಂಚಣಿ ಏರಿಕೆ ಸ್ವಾಗತಾರ್ಹ

ಮಹಿಳೆಯೊಬ್ಬರು ಮೊದಲ ಬಾರಿಗೆ ಕೇಂದ್ರ ಸರ್ಕಾರದ ಬಜೆಟ್‌ ಮಂಡಿಸಿರುವುದು ಖುಷಿ ತಂದಿದೆ. ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ಮತ್ತು ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೌಶಲ ತರಬೇತಿಗೆ ಆದ್ಯತೆ ನೀಡಿರುವುದು ಉತ್ತಮ. 60 ವರ್ಷದ ನಂತರ ವೃದ್ಧರಿಗೆ ₹3 ಸಾವಿರ ಪಿಂಚಣಿ ಮತ್ತು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಿರುವುದು ಸ್ವಾಗತಾರ್ಹ. ಖಾಸಗೀಕರಣಕ್ಕೆ ಆದ್ಯತೆ ನೀಡುವ ಭರದಲ್ಲಿ ಸಾರ್ವಜನಿಕ ವಲಯದ ಜವಾಬ್ದಾರಿ ಕ್ಷೀಣಿಸಬಾರದು. ಅಡುಗೆ ಅನಿಲದ ಮೇಲಿನ ಅತಿಯಾದ ಸುಂಕ ಹೇರಿಕೆ ಸಲ್ಲದು.

–ಸುಮಾ ಟಿ.ಹೊಸಮನಿ, ಉಪನ್ಯಾಸಕಿ, ಮಾನ್ವಿ

**

ಸಿಹಿ ಕಹಿ ಇದೆ

ಈ ಬಾರಿಯ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು ನಾರಿಯರ ಹೃದಯಕ್ಕೆ ಲಗ್ಗೆ ಇಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಲಿದೆ ಎಂಬ ನಿರೀಕ್ಷೆ ದಿಟವಾಗಿದೆ. ಜನಸಾಮಾನ್ಯರಿಗೆ ಹೊರೆಯಾಗದಂತೆ ತೆರಿಗೆಗಳನ್ನು ವಿಧಿಸದೆ, ಡೀಸೆಲ್ ಪೆಟ್ರೋಲ್ ಮೇಲಿನ ಸೆಸ್‌ ದರ ಹೆಚ್ಚಿಸಿ,ಉದ್ದಿಮೆದಾರರಿಗೆ ಭರಪೂರ ಕೊಡುಗೆಗಳನ್ನು ನೀಡಿದ್ದಾರೆ., ಚಿನ್ನದ ಮೇಲಿನ ಆಮದು ಸುಂಕ ಏರಿಕೆ ಮಾಡಿ, ಕೃಷಿ ಗ್ರಾಮೀಣಾಭಿವೃದ್ಧಿ, ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡುವ ಮೂಲಕ ಸಿಹಿ–ಕಹಿ ಸಮ್ಮಿಶ್ರಣದ ಬಜೆಟ್ ಮಂಡನೆಯಾಗಿದೆ.

–ದೀಪಾಗಣೇಶ, ಶಕ್ತಿನಗರ

**

ಆರ್ಥಿಕ ವೃದ್ಧಿ

ಜನಸಾಮಾನ್ಯರ ಮತ್ತು ದೇಶದ ಅಭಿವೃದ್ಧಿಯ ವಿಚಾರ ಇಟ್ಟುಕೊಂಡು ಕೇಂದ್ರ ಸರ್ಕಾರ ಬಜೆಟ್ ಮಂಡನೆ ವಿಷಯ ಸಂತಸ ತಂದಿದೆ. ಕುಸಿಯುತ್ತಿರುವ ಜಿಡಿಪಿ ದರವನ್ನು ಹೆಚ್ಚಳ ಮಾಡಲು ತೆರಿಗೆ ನೀತಿಯನ್ನು ಸರಳೀಕರಣಗೊಳಿಸಿ,ನಿರುದ್ಯೋಗ ನಿವಾರಿಸಲು ಹೊಸ ಉದ್ಯಮಗಳಿಗೆ ಬಂಡವಾಳ ಹೂಡಲು ಭರ್ಜರಿ ಕೊಡುಗೆಯನ್ನು ನೀಡಲಾಗಿದೆ. ಕೃಷಿ, ಗ್ರಾಮೀಣಾಭಿವೃದ್ಧಿ, ಕುಡಿಯುವ ನೀರು, ವಸತಿ,ರಸ್ತೆಗಳ ನಿರ್ಮಾಣ,ವಿದ್ಯುತ್, ಪೂರೈಕೆ, ಶೌಚಾಲಯಗಳ ನಿರ್ಮಾಣ, ಆರೋಗ್ಯ ಸೇರಿದಂತೆ ಮತ್ತಿತ್ತರ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ಮತ್ತು ರಾಷ್ಟ್ರದ ಸುರಕ್ಷತೆ, ಸದೃಢ ದೇಶ ಹಾಗೂ ನಾಯಕತ್ವ ನಮ್ಮ ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ.

–ಮಂಜುನಾಥ ಭಾವಿ, ಶಕ್ತಿನಗರ

**

ಶ್ರೀಮಂತರ ಬಜೆಟ್‌

ಕೇಂದ್ರ ಸರ್ಕಾರದ ಬಜೆಟ್ ಮೇಲೆ ಭರವಸೆ ಮತ್ತು ವಿಶ್ವಾಸ ಇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ಆದರೆ ಹಳೆ ಭರವಸೆಗಳೇ ಈಡೇರಿಲ್ಲ. ಇನ್ನೂ ಹೊಸ ಭರವಸೆಗಳು ಈಡೇರುವ ಕುರಿತು ನಂಬಿಕೆಯೇ ಇರುವುದು ಹೇಗೆ. ಉದ್ಯೋಗ ಸೃಷ್ಠಿ, ಸ್ವಾಮಿನಾಥನ್ ವರದಿ ಜಾರಿ ಮಾಡಿಲ್ಲ. ಕಪ್ಪು ಹಣ ವಾಪಸ್ ತಂದಿಲ್ಲ. ಜನ್‍ಧನ್ ಖಾತೆಗೆ ₹15 ಲಕ್ಷ ಹಾಕಿಲ್ಲ. ಬಡವರ ಹಿತ ಕಾಯುವುದನ್ನು ಬಿಟ್ಟು ಶ್ರೀಮಂತರ, ಕಾರ್ಪೋರೇಟ್ ಕಂಪನಿಗಳ ರಕ್ಷಕರಾಗಿರುವುದಕ್ಕೆ ಈ ಬಜೆಟ್ ಸಾಕ್ಷಿ.

ಎಸ್.ದೇವೇಂದ್ರಗೌಡ, ವ್ಯಾಪಾರಸ್ಥ ಸಿಂಧನೂರು

**

ನಿರ್ಲಕ್ಷ್ಯ

ಇಂದಿರಾಗಾಂಧಿಯವರ ನಂತರ ಒಬ್ಬ ಮಹಿಳೆ ದೇಶಕ್ಕೆ ಒಳ್ಳೆಯ ಬಜೆಟ್ ನೀಡುತ್ತಾರೆಂದು ಭಾವಿಸಿದ್ದ ನಮಗೆ ಭ್ರಮನಿರಸನವಾಗಿದೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಪೆಟ್ರೊಲ್, ಡೀಸೆಲ್ ಮೇಲಿನ ಸೆಸ್ ತೆರಿಗೆ ಏರಿಕೆಯಿಂದ ಹೊರೆಯಾಗಿದೆ. ಬಜೆಟ್‍ನಲ್ಲಿ ಕೈಗಾರಿಕೋದ್ಯಮಿಗಳಿಗೆ ಹಾಡಿ ಹೊಗಳಿರುವ ಹಣಕಾಸು ಸಚಿವರು ಬಡವರು, ರೈತರು, ಕೃಷಿ ಕಾರ್ಮಿಕರನ್ನು ನಿರ್ಲಕ್ಷ್ಯ ಮಾಡಿದ್ದಾರೆ.

ವಿಜಯಲಕ್ಷ್ಮಿ ಗುರಿಕಾರ, ಉಪನ್ಯಾಸಕಿ ಸಿಂಧನೂರು

**

ರೈತರನ್ನು ಕಡೆಗಣಿಸಿದೆ

ಒಂದು ಕೈಯಿಂದ ನೀಡಿ ಮತ್ತೊಂದು ಕೈಯಿಂದ ಕಿತ್ತುಕೊಂಡಂತೆ ಇದೆ ಕೇಂದ್ರ ಸರ್ಕಾರದ ಬಜೆಟ್. ಕೆಲವೊಂದು ಮಾರ್ಪಾಡು ಬಿಟ್ಟರೆ ಹಳೆಯ ಬಜೆಟ್‍ನಂತೆ ಇದೆ. ನಮ್ಮ ರಾಜ್ಯಕ್ಕೆ ಮುಖ್ಯವಾಗಿ ಬೇಕಾಗಿರುವ ರೈಲ್ವೆ ಬಜೆಟ್‍ಗೆ ಅಷ್ಟಾಗಿ ಮಾನ್ಯತೆ ನೀಡಿಲ್ಲ. ದೇಶದ ಶ್ರಮಿಕ ವರ್ಗ, ರೈತರಿಗೆ ಕೊಡುಗೆ ನೀಡಿಲ್ಲ.

ಮಲ್ಲಿಕಾರ್ಜುನ, ದಲಿತ ಮುಖಂಡ

**

ಸಂತಸವಾಗಿದೆ

ಹಲವಾರು ಬದಲಾವಣೆ ಮಾಡಿ ಅಭಿವೃದ್ಧಿಗೆ ಅರ್ಥಿಕವಾಗಿ ಯೋಜನೆಗಳನ್ನು ಹಾಕಿಕೊಂಡು ವಿದ್ಯಾರ್ಥಿಗಳು ವಿದೇಶಿ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡಲು ಗ್ಯಾನ್ ಯೋಜನೆ ಜಾರಿಗೆ ತರಲಾಗಿದೆ. ಅಗತ್ಯ ತೆರಿಗೆ ದರದಲ್ಲಿ ಬದಲಾವಣೆ ಮಾಡಿಲ್ಲ. ವಿದ್ಯುತ ಪೂರೈಕೆಗೆ ಯೋಜನೆ ರೂಪಿಸಿರುವುದು ಒಳ್ಳೆಯ ಬೆಳವಣಿಗೆ. ಬಜೆಟ್‌ ಯವಜನತೆಗೆ ಸಂತಸ ತಂದಿದೆ.

ಶ್ರೀಕಾಂತ್‌ ಹರವಿ, ಮಾನ್ವಿ

**

ಉದ್ಯಮಿಗಳ ಪರ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಚೊಚ್ಚಲ ಬಜೆಟ್ ನಲ್ಲಿ ಪೆಟ್ರೊಲ್, ಡೀಸೆಲ್ ತೈಲಗಳ ಬೆಲೆ ಹೆಚ್ಚಳ ಮಾಡಿದಲ್ಲದೆ. ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿ, ಯುವಕರಿಗೆ ಉದ್ಯೋಗಗಳ ಸೃಷ್ಟಿಸುವಂತ ವಿಚಾರಗಳನ್ನು ಮಾಡದೆ ಕೇವಲ ಉದ್ಯಮಿಗಳ ಪರ ಬಜೆಟ್ ಅನ್ನು ಮಂಡಿಸಲಿದ್ದಾರೆ. ರಾಜ್ಯದಿಂದ ಸುಮಾರು 25 ಸಂಸದರನ್ನು ಆಯ್ಕೆ ಮಾಡಿದ ಕನ್ನಡಿಗರಿಗೆ ಯಾವುದೇ ವಿಶೇಷ ಅನುದಾನ ಅಥವಾ ಯೋಜನೆಯನ್ನು ನೀಡಿಲ್ಲ.

ರಮೇಶ ಪಿ.ಗೌಡೂರು ಜಾಲಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.