
ಮಾನ್ವಿ: ‘ಜಾತ್ರೆಗೆ ಆಗಮಿಸುವ ಭಕ್ತರಿಗೆ ತೊಂದರೆಯಾಗದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಜಿ.ಹಂಪಯ್ಯ ನಾಯಕ ಸೂಚನೆ ನೀಡಿದರು.
ತಾಲ್ಲೂಕಿನ ನೀರಮಾನ್ವಿ ಗ್ರಾಮದಲ್ಲಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
‘ಫೆ.6ರಿಂದ 8 ರವರೆಗೆ ನಡೆಯುವ ಈ ಜಾತ್ರೆಗೆ ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಿಂದ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಭಕ್ತರಿಗೆ ಕುಡಿಯುವ ನೀರು ಸೇರಿ ಅಗತ್ಯ ಸೌಕರ್ಯ ಕಲ್ಪಿಸಬೇಕು. ಮಹಿಳೆಯರಿಗೆ ಭದ್ರತೆ ಒದಗಿಸಬೇಕು. ಜಾತ್ರೆಯ ಯಶಸ್ಸಿಗೆ ತಾಲ್ಲೂಕು ಆಡಳಿತದ ಜತೆಗೆ ಗ್ರಾಮಸ್ಥರು ಕೂಡ ಅಗತ್ಯ ಸಹಕಾರ ನೀಡಬೇಕು’ ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಮಾತನಾಡಿ,‘ದೇವಸ್ಥಾನದ ಸೌಲಭ್ಯ ಹೊರತು ಪಡಿಸಿ ಗ್ರಾಮಸ್ಥರು ಮುಕ್ತವಾಗಿ ಅಗತ್ಯ ಸೌಕರ್ಯವನ್ನು ಸೇವಾ ರೂಪದಲ್ಲಿ ಒದಗಿಸಬಹುದು’ ಎಂದರು.
ಪಿಐ ಸೋಮಶೇಖರ ಮಾತನಾಡಿ,‘ಭಕ್ತರ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾ, ವಿದ್ಯುದ್ದೀಪಗಳ ವ್ಯವಸ್ಥೆ ಮಾಡಲಾಗುವುದು. ಜಾತ್ರೆಯಲ್ಲಿ ವ್ಯಾಪಾರಿಗಳು ರಸ್ತೆ ಬಿಟ್ಟು ಅಂಗಡಿಗಳನ್ನು ಹಾಕಿಕೊಳ್ಳಬೇಕು. ಮುಖ್ಯ ರಸ್ತೆಯಿಂದ ಸೀಕಲ್ ಮಾರ್ಗವಾಗಿ ಸಂಚಾರ ವ್ಯವಸ್ಥೆ ಬದಲಾಯಿಸಿ ವಾಹನ ದಟ್ಟಣೆಯಾಗದಂತೆ ತಡೆಯಲಾಗುವುದು. ಪೊಲೀಸ್ ಸಿಬ್ಬಂದಿಯ ಜತೆಗೆ ಗ್ರಾಮದ ಯುವಕರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಇಚ್ಛಿಸಿದಲ್ಲಿ ಗುರುತಿನ ಚೀಟಿ ನೀಡಲಾಗುವುದು’ ಎಂದು ತಿಳಿಸಿದರು.
ಗ್ರಾಮದ ಮುಖಂಡ ದುರುಗೇಶ ಮಾತನಾಡಿ,‘ಸ್ನಾನ ಮಾಡಲು ಅನುಕೂಲವಾಗಲಿ ಎಂದು ಕಾಲುವೆಗೆ 10 ದಿನ ನೀರು ಹರಿಸಬೇಕು. ಕೊಳವೆಬಾವಿಗಳಿಗೆ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಬೇಕು. ರಸ್ತೆ ಅತಿಕ್ರಮಣ ತೆರವುಗೊಳಿಸಿ, ಜಾತ್ರೆಗೆ ಬರುವ ಟ್ರ್ಯಾಕ್ಟರ್‌ಗಳಿಗೆ ಪ್ರತ್ಯೇಕವಾಗಿ ನಿಲುಗಡೆಗೆ ಅವಕಾಶ ನೀಡುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು’ ಎಂದು ಕೋರಿದರು.
ಮುಖಂಡ ಅರಕೇರಿ ರಾಮಣ್ಣ ಹಾಗೂ ಮತ್ತಿತರರು ಸಲಹೆ–ಸೂಚನೆಗಳನ್ನು ನೀಡಿದರು.
ಗ್ರಾ.ಪಂ ಅಧ್ಯಕ್ಷೆ ಈರಮ್ಮ, ತಾ.ಪಂ ಇಒ ಖಾಲೀದ್ ಅಹ್ಮದ್, ಸಿರವಾರ ಸಿಪಿಐ ಶಶಿಕಾಂತ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರಣ ಬಸವರಾಜಗೌಡ, ಕಂದಾಯ ನಿರೀಕ್ಷಕ ಚರಣ್ ಸಿಂಗ್, ಗ್ರಾಮ ಆಡಳಿತಾಧಿಕಾರಿ ಸಿಂಧು, ದೇವಸ್ಥಾನದ ಆರ್ಚಕ ಮಲ್ಲಿಕಾರ್ಜುನ ಪೂಜಾರಿ, ಅಬಕಾರಿ ಪಿಎಸ್ಐ ವಿಠಲ್ ಕಣಜಿ, ಪಿಡಿಒ ಜಬೇರ್ ನಾಯಕ, ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮದ ಮುಖಂಡರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.