ADVERTISEMENT

ಜನರಿಗೆ ತೊಂದರೆ ಕೊಡದೆ ಕೆಲಸ ಮಾಡಿ: ಅಧಿಕಾರಿಗಳಿಗೆ ಶಾಸಕ ತುರ್ವಿಹಾಳ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 6:45 IST
Last Updated 3 ಜನವರಿ 2026, 6:45 IST
ಮಸ್ಕಿ ತಾಲ್ಲೂಕಿನ ತಲೇಖಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮವೊಂದಲ್ಲಿ ಶಾಸಕ ಆರ್. ಬಸನಗೌಡ ತುರ್ವಿಹಾಳ ಶುಕ್ರವಾರ ಮರದ ಕೆಳಗೆ ಸಭೆ ನಡೆಸಿದರು
ಮಸ್ಕಿ ತಾಲ್ಲೂಕಿನ ತಲೇಖಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮವೊಂದಲ್ಲಿ ಶಾಸಕ ಆರ್. ಬಸನಗೌಡ ತುರ್ವಿಹಾಳ ಶುಕ್ರವಾರ ಮರದ ಕೆಳಗೆ ಸಭೆ ನಡೆಸಿದರು   

ಮಸ್ಕಿ: ‘ಸರ್ಕಾರ ಅಧಿಕಾರಿಗಳಿಗೆ ಪಗರ ನೀಡುವುದು ಜನಸೇವೆಗಾಗಿ, ತೊಂದರೆ ಕೊಡಲು ಅಲ್ಲ. ಅಧಿಕಾರಿಗಳು ಜವಾಬ್ದಾರಿಯುತವಾಗಿ ಜನರ ಕೆಲಸ ಮಾಡಿಕೊಡಬೇಕು’ ಎಂದು ಶಾಸಕ ಆರ್. ಬಸನಗೌಡ ತುರ್ವಿಹಾಳ ಅಧಿಕಾರಿಗಳಿಗೆ ಹೇಳಿದರು. 

ತಾಲ್ಲೂಕಿನ ತಲೇಖಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇಸಾಯಿಬೋಗಾಪೂರ ಗ್ರಾಮದಲ್ಲಿ ಶುಕ್ರವಾರ ನಡೆದ ಗ್ರಾಮ ಪಂಚಾಯಿತಿ ಹಳ್ಳಿಗಳ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ‘ವಿಬಿ–ಜಿ–ರಾಮ್–ಜಿ ಅನುಷ್ಠಾನದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಜನರ ಮೇಲೆ ತಪ್ಪು ಹೊರಿಸುವುದನ್ನು ಬಿಡಬೇಕು. ಕಾನೂನಿನ ಪ್ರಕಾರ ಎಷ್ಟು ದಿನ ಉದ್ಯೋಗ ನೀಡಬೇಕೋ ಅಷ್ಟು ದಿನ ಕಡ್ಡಾಯವಾಗಿ ನೀಡಬೇಕು. ಜನರನ್ನು ಅಲೆದಾಡಿಸಬಾರದು’ ಎಂದು ತಾ.ಪಂ ಸಹಾಯಕ ನಿರ್ದೇಶಕ (ವಿಬಿ–ಜಿ–ರಾಮ್–ಜಿ) ವಿಶ್ವನಾಥ ರೆಡ್ಡಿ ಹಾಗೂ ತಲೇಖಾನ ಪಿಡಿಒ ಅವರಿಗೆ ಸೂಚನೆ ನೀಡಿದರು.

‌‘ಜನರ ಬದುಕಿಗೆ ನೇರವಾಗಿ ಸಂಬಂಧಿಸಿದ ಯೋಜನೆಗಳಲ್ಲಿ ವಿಳಂಬ, ಅಸ್ಪಷ್ಟತೆ ಮತ್ತು ಜವಾಬ್ದಾರಿ ಹೀನತೆ ನಡೆಯಬಾರದು. ಸರ್ಕಾರದ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸಂಪೂರ್ಣವಾಗಿ ತಲುಪಬೇಕು. ಪಂಚಾಯಿತಿ ಮಟ್ಟದಲ್ಲಿ ನಡೆಯುವ ಎಲ್ಲ ಕಾಮಗಾರಿಗಳ ಗುಣಮಟ್ಟ, ಪಾರದರ್ಶಕತೆ ಮತ್ತು ಸಮಯಪಾಲನೆ ಕಡ್ಡಾಯ’ ಎಂದು ಹೇಳಿದರು.

ADVERTISEMENT

ಸಭೆ ನಂತರ ಶಾಸಕ ತುರ್ವಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಕಳಪೆ ಕಾಮಗಾರಿ ದೂರು ಬಂದರೆ ಅಧಿಕಾರಿಗಳು ಹೊಣೆಯಾಗಬೇಕಾಗುತ್ತದೆ ಎಂದರು.

ಸಭೆಯಲ್ಲಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಮೈಬುಸಾಬ ಮುದ್ದಾಪೂರ, ಮುಖಂಡರಾದ ಮಲ್ಲಿಕಾರ್ಜುನ ಪಾಟೀಲ, ಹನುಮಂತಪ್ಪ ಮುದ್ದಾಪೂರ, ತಹಶೀಲ್ದಾರ ಮಂಜುನಾಥ ಬೋಗಾವತಿ, ತಾಲ್ಲೂಕು ಪಂಚಾಯಿತಿ ಇಒ ಅಮರೇಶ ಯಾದವ್, ಜೆಸ್ಕಾಂ ಎಇಇ ವೆಂಕಟೇಶ, ತಲೇಖಾನ ಗ್ರಾಮ ಪಂಚಾಯಿತಿ ಪಿಡಿಓ ಜ್ಯೋತಿಭಾಯಿ ಸೇರಿದಂತೆ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಮರದ ಕೆಳಗೆ ಸಭೆ

ಅಧಿಕಾರಿಗಳೊಂದಿಗೆ ತಾಲ್ಲೂಕಿನ ತಲೇಖಾನ ಗ್ರಾಮ ಪಂಚಾಯಿತಿಯ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿದ ಶಾಸಕ ಆರ್. ಬಸನಗೌಡ ತುರ್ವಿಹಾಳ ಸ್ಥಳದಲ್ಲಿಯೇ ಸಾರ್ವಜನಿಕರಿಂದ ಸಮಸ್ಯೆ ಆಲಿಸಿದರು. ಅಗತ್ಯ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹರಿಸುವಂತೆ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮವೊಂದರಲ್ಲಿನ ಮರದ ಕೆಳಗಿನ ಛಾಪೆಯ ಮೇಲೆ ಕುಳಿತು ಅಧಿಕಾರಿಗಳ ಹಾಗೂ ಸಾರ್ವಜನಿಕರ ಸಭೆ ನಡೆಸಿರು. ಸರ್ಕಾರಿ ಶಾಲೆಗೆ ಭೇಟಿ ನೀಡಿ ಬಿಸಿಯೂಟ ಯೋಜನೆ ಪರಿಶೀಲಿಸಿದ ಅವರು ಮಕ್ಕಳೊಂದಿಗೆ ಊಟ ಮಾಡಿ ಆಹಾರದ ಗುಣಮಟ್ಟ ಪರಿಶೀಲಿಸಿದರು. ಶಾಲಾ ಸಮಸ್ಯೆಗಳ ಬಗ್ಗೆ ಪಾಲಕರು ಹಾಗೂ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು.

ವಿಬಿ–ಜಿ–ರಾಮ್–ಜಿ ಹಾಗೂ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಮಸ್ಕಿ ಕ್ಷೇತ್ರ ಮುಂಚೂಣಿಯಲ್ಲಿದೆ. ಬರುವ ದಿನಗಳಲ್ಲಿ ಮಾದರಿ ಕ್ಷೇತ್ರ ಮಾಡಲಾಗುವುದು
–ಆರ್. ಬಸನಗೌಡ, ತುರ್ವಿಹಾಳ ಶಾಸಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.