ADVERTISEMENT

ಸೋಲುವ ಭೀತಿಯಿಂದ ಹತಾಶಗೊಂಡ ಶಿವನಗೌಡ: ವಿರೂಪಾಕ್ಷಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2023, 13:35 IST
Last Updated 10 ಮಾರ್ಚ್ 2023, 13:35 IST
ಎಂ. ವಿರೂಪಾಕ್ಷಿ
ಎಂ. ವಿರೂಪಾಕ್ಷಿ   

ರಾಯಚೂರು: ‘ದೇವದುರ್ಗದಲ್ಲಿ ಸೋಲುವ ಭೀತಿಯಿಂದಾಗಿ ಹತಾಶರಾಗಿರುವ ಶಾಸಕ ಶಿವನಗೌಡ ನಾಯಕ ಅವರು ಟೀಕೆ ಮಾಡುವ ಭರದಲ್ಲಿ ಕೀಳು ಮಟ್ಟದ ಪದಗಳನ್ನು ಬಳಸಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಹೀಯಾಳಿಸಿದ್ದು ಖಂಡನೀಯ’ ಎಂದು ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಎಂ.ವಿರೂಪಾಕ್ಷಿ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವದುರ್ಗದಲ್ಲಿ ಒಂದು ಲಕ್ಷ ಮತಗಳ ಅಂತರದಿಂದ ಗೆದ್ದು ತೋರಿಸುತ್ತೇನೆ ಎಂದು ತಾಕತ್ತಿದ್ದರೆ ಕುಮಾರಸ್ವಾಮಿ ತಮ್ಮ ಪಕ್ಷದ ಅಭ್ಯರ್ಥಿಯನ್ನೆ ಗೆಲ್ಲಿಸಲಿ ಎಂದು ಸವಾಲು ಹಾಕಿದ್ದನ್ನು ಜಿಲ್ಲಾ ಜೆಡಿಎಸ್ ಘಟಕವು ಈ ಸವಾಲು ಸ್ವೀಕರಿಸಿದೆ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದರು.

ಜಾಲಹಳ್ಳಿಯ ವಿಜಯ ಸಂಕಲ್ಪ ಯಾತ್ರೆ ಸಂದರ್ಭದಲ್ಲಿ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವಾಗ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಇದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಈ ಹಿಂದೆಯೂ ಅವರ ನಮ್ಮ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿದ್ದು ಅವರಿಗೆ ಎಚ್ಚರಿಕೆ ನೀಡಲಾಗಿತ್ತು. ಪುನಃ ಅದೇ ಚಾಳಿ ಮುಂದುವರೆಸಿದ್ದು ಹೀಗೆ ಮುಂದುವರೆದರೆ ನಾಲಿಗೆ ಕತ್ತರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ADVERTISEMENT

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಹಗುರವಾಗಿ ಮಾತನಾಡಿದ್ದು ಕೂಡಲೇ ಕ್ಷಮೆಯಾಚಿಸಿ ಹೇಳಿಕೆ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಲೋಕಾಯುಕ್ತರಿಗೆ ದೂರು: ಶಾಸಕ ಶಿವನಗೌಡ ನಾಯಕ ಮಾಡಿರುವ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಲು ಲೋಕಾಯುಕ್ತರಿಗೆ ಸಾಕ್ಷಿ ಸಮೇತ ದೂರು ನೀಡುತ್ತಿದ್ದೇವೆ. ಕುಮಾರಸ್ವಾಮಿ ಅವರ ಬಗ್ಗೆ ನಾಲಿಗೆ ಹರಿಬಿಟ್ಟರೆ ರಾಯಚೂರು ನಗರದಲ್ಲಿ ಮಾಡಿರುವ ಅಕ್ರಮ ಆಸ್ತಿ ನಾಶಗೊಳಿಸಿ, ಅಕ್ರಮ ಕಟ್ಟಡ ನೆಲಸಮ ಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ವಕೀಲ ಎನ್.ಶಿವಶಂಕರ, ಮುಖಂಡ ಯುಸೂಫ್ ಖಾನ್, ಲಕ್ಷ್ಮೀಪತಿ ಗಾಣದಾಳ, ದಾನಪ್ಪಯಾದವ, ರಾಮಕೃಷ್ಣ, ವಿಶ್ವನಾಥ ಪಟ್ಟಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.