ADVERTISEMENT

ಮನರೇಗಾಕ್ಕೆ ಶ್ರೀರಾಮಚಂದ್ರ ಅಲ್ಲ, ನಾಥೂರಾಮನ ಹೆಸರು: ಸಚಿವ ಶರಣ ಪ್ರಕಾಶ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 10:04 IST
Last Updated 16 ಜನವರಿ 2026, 10:04 IST
<div class="paragraphs"><p>ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ</p></div>

ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ

   

ರಾಯಚೂರು: ‘ಕೇಂದ್ರದ ಬಿಜೆಪಿ ಸರ್ಕಾರವು ಮನರೇಗಾಕ್ಕೆ ಇಟ್ಟಿರುವುದು ಶ್ರೀರಾಮಚಂದ್ರ ಅಲ್ಲ, ದಶರಥ ರಾಮ ಅಲ್ಲ, ಕೌಶಲ್ಯ ರಾಮನೂ ಸೀತಾರಾಮನೂ ಅಲ್ಲ; ನಾಥೂರಾಮನ ಹೆಸರು. ಕೇಂದ್ರ ನಾಥೂರಾಮ್ ಗೋಡ್ಸೆ ತತ್ವಗಳನ್ನು ಅನುಷ್ಠಾನಗೊಳಿಸಲು ಹೊರಟಿದೆ‘ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ವಾಗ್ದಾಳಿ ನಡೆಸಿದರು.

‘ಬಿಜೆಪಿಯವರು ಆರ್‌ಎಸ್‌ಎಸ್‌ನ ಮುಖ್ಯ ಕಚೇರಿಯಿಂದ ಹೊರಡಿಸಲಾಗುತ್ತಿರುವ ಆದೇಶಗಳನ್ನು ಹಾಲಿಸುತ್ತಿದ್ದಾರೆಯೇ ಹೊರತು, ಜನಪರವಾದ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿಲ್ಲ‘

ADVERTISEMENT

ಎಂದು ನಗರದಲ್ಲಿ ಶುಕ್ರವಾರ ಇಲ್ಲಿಯ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಮನರೇಗಾ ಯೋಜನೆಯನ್ನು ಬದಲಿಸಿ, ವಿಕಸಿತ ಭಾರತ - ರೋಜಗಾರ ಮತ್ತು ಅಜೀವಿಕಾ ಮಿಷನ್ (ಗ್ರಾಮಿಣ) ಕಾಯಿದೆ ರಚಿಸಿದೆ. ಬಡವರು, ಕೂಲಿ, ಕೃಷಿ ಕಾರ್ಮಿಕರ ಕೆಲಸಕ್ಕೆ ತಡೆವೊಡ್ಡುವ ಕಾಯ್ದೆ ರೂಪಿಸಿ, ಅದರಿಂದ ಸಾರ್ವಜನಿಕ ಟೀಕೆಗಳಿಂದ ತಪ್ಪಿಸಿಕೊಳ್ಳಲು ಇದರಲ್ಲಿ ಅನಗತ್ಯವಾಗಿ ರಾಮನ ಹೆಸರು ಎಳೆದು ತರಲಾಗಿದೆ’ ಎಂದು ಟೀಕಿಸಿದರು.

‘2014ರಲ್ಲಿ ಅಧಿಕಾರಕ್ಕೆ ಬಂದ ವರ್ಷದಲ್ಲೇ ಬಿಜೆಪಿ ನರೇಗಾ ಕಾಯ್ದೆಯನ್ನು ವಿರೋಧಿಸಿ ಬಂಡವಾಳ ಶಾಹಿಗಳ ಪರ ಒಲವು ತೋರಿತ್ತು. ಆದರೆ, ಕೋವಿಡ್‌ ಅವಧಿಯಲ್ಲಿ ಇದೇ ಕಾನೂನು ದುಡಿಯವ ಕೈಗಳಿಗೆ ನೆರವಾದಾಗ ಮೆಚ್ಚುಗೆ ವ್ಯಕ್ತಪಡಿಸಿತ್ತು. ಆದರೆ, ಇದೀಗ ಕಾಯ್ದೆಯ ಮೂಲ ಉದ್ದೇಶವನ್ನೇ ಬುಡ ಮೇಲು ಮಾಡಿದೆ‘ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ಕಲ್ಪಿಸದೇ, ಸದನ ಸಮಿತಿಯಿಂದಲೂ ಒಪ್ಪಿಗೆ ಪಡೆಯದೇ ಬಡವರು ಹಾಗೂ ಕಾರ್ಮಿಕರ ಪರವಾಗಿ ಇದ್ದ ಕಾಯ್ದೆಯನ್ನು ಬದಲಿಸಲಾಗಿದೆ. ನರೇಗಾದಲ್ಲಿ 100 ದಿನಗಳ ಮಿತಿ ಹೇರಿರಲಿಲ್ಲ. ಕನಿಷ್ಠ 100 ದಿನ ಉದ್ಯೋಗ ಕೊಡಬೇಕು ಎಂದು ಇತ್ತು. ಗರಿಷ್ಠ ದಿನಗಳಿಗೆ ಮಿತಿ ವಿಧಿಸಿರಲಿಲ್ಲ. ಆದರೆ, ಬಿಜೆಪಿ ಮುಖಂಡರು ದೇಶದ ಜನರ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ’ ಎಂದು ಆರೋ‍‍ಪಿಸಿದರು.

‘ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಆದಾಯ ತೆರಿಗೆ ಹಾಗೂ ಜಿಎಸ್‌ಟಿ ಮೂಲಕ ₹4 ಲಕ್ಷ ಕೋಟಿ ಪಾವತಿಸಿದೆ. ಕೇಂದ್ರ ಸರ್ಕಾರ ಅದಕ್ಕೆ ಪ್ರತಿಯಾಗಿ ಕೇವಲ ₹ 60 ಸಾವಿರ ಕೋಟಿ ಪಾವತಿಸುತ್ತಿದೆ. ನರೇಗಾ ಹೊರೆಯನ್ನೂ ರಾಜ್ಯದ ಮೇಲೆ ಹಾಕಲು ಹೊರಟಿದೆ. ಕೇಂದ್ರ ಸರ್ಕಾರವು ರಾಜ್ಯಕ್ಕೆ ನ್ಯಾಯುಯುತವಾದ ಪಾಲನ್ನು ಕೊಡಬೇಕು’ ಎಂದು ಒತ್ತಾಯಿಸಿದರು.

‘ಕೇಂದ್ರ ಸರ್ಕಾರವು ಬಿಜೆಪಿ ಕಚೇರಿ, ಆರ್‌ಎಸ್ಎಸ್‌ ಕಚೇರಿಯಿಂದ ಹಣ ಕೊಡುತ್ತಿಲ್ಲ. ಕಾನೂನು ಬದ್ಧವಾದ ಹಕ್ಕು ಕೇಳುತ್ತಿದ್ದೇವೆ. ಅದನ್ನು ಕೊಡಲೇಬೇಕು’ ಎಂದು ಹೇಳಿದರು.

ಸಣ್ಣ ನೀರಾವರಿ ಸಚಿವ ಎನ್‌.ಎಸ್‌.ಬೋಸರಾಜು, ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ, ಶಾಸಕ ಬಸನಗೌಡ ದದ್ದಲ್, ಶರಣಗೌಡ ಭಯ್ಯಾಪುರ, ಬಸವರಾಜ ಪಾಟೀಲ, ಜಯಣ್ಣ, ರಜಾಕ್‌ ಉಸ್ತಾದ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.