ADVERTISEMENT

ದೇವಸೂಗೂರಿನಲ್ಲಿ ಭಕ್ತಿಭಾವದ ಮೊಸರನ್ನ ಬಾನ ಬುತ್ತಿ

​ಪ್ರಜಾವಾಣಿ ವಾರ್ತೆ
Published 20 ಮೇ 2019, 11:43 IST
Last Updated 20 ಮೇ 2019, 11:43 IST
ಶಕ್ತಿನಗರದ ಬಳಿಯ ದೇವಸೂಗೂರಿನ ಸೂಗೂರೇಶ್ವರ ದೇವಸ್ಥಾನ ಆವರಣದಲ್ಲಿ ಸೋಮವಾರ ನಡೆದ ಮೊಸರನ್ನ ಬಾನ ಬುತ್ತಿ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು
ಶಕ್ತಿನಗರದ ಬಳಿಯ ದೇವಸೂಗೂರಿನ ಸೂಗೂರೇಶ್ವರ ದೇವಸ್ಥಾನ ಆವರಣದಲ್ಲಿ ಸೋಮವಾರ ನಡೆದ ಮೊಸರನ್ನ ಬಾನ ಬುತ್ತಿ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು   

ಶಕ್ತಿನಗರ: ಇಲ್ಲಿರುವದೇವಸೂಗೂರಿನ ಸೂಗೂರೇಶ್ವರ ದೇವಸ್ಥಾನದಲ್ಲಿವೈಶಾಖ ಮಾಸ ಕೃತ್ತಿಕಾ ಮಳೆ ನಕ್ಷತ್ರ ದಿನವಾದ ಸೋಮವಾರ ಮೊಸರನ್ನ ಬಾನ ಬುತ್ತಿಯ ಕಾರ್ಯಕ್ರಮವು ಅಸಂಖ್ಯೆ ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಭಕ್ತಿ, ಭಾವದಿಂದನೆರವೇರಿತು.

ಮುಜರಾಯಿ ಇಲಾಖೆ, ಸೂಗೂರೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ, ತ್ರಿದಶಂದರ್ಚಕರು ಹಾಗೂ ಸದ್ಭಕ್ತಮಂಡಳಿ ಸಹಯೋಗದಲ್ಲಿ ಸೂಗೂರೇಶ್ವರ ಸನ್ನಿಧಿಯಲ್ಲಿ ಬೆಳ್ಳಿಗ್ಗೆ 10ಕ್ಕೆ ಶುರುವಾದ ಕಾರ್ಯಕ್ರಮ ಸಂಜೆ 4 ಗಂಟೆವರೆಗೂ ನಡೆಯಿತು.

ರಾಯಚೂರು ತಾಲ್ಲೂಕಿನ ದೇವಸೂಗೂರು, ಯದ್ಲಾಪುರ, ಶಕ್ತಿನಗರ, ಕಾಡ್ಲೂರು, ಗಂಜಳ್ಳಿ, ಹನುಮಾನದೊಡ್ಡಿ, ರಂಗಪುರ, ಕರೇಕಲ್‌, ಅರಷಿಣಿಗಿ ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ADVERTISEMENT

‘10 ಕ್ವಿಂಟಾಲ್‌ಗೂ ಅಧಿಕ ಅನ್ನ, 10 ಸಾವಿರಕ್ಕೂ ಅಧಿಕ ಕಡಕ್ ರೊಟ್ಟಿ, ಪುಂಡಿಪಲ್ಯ, ಹಸಿಮೆಣಿಸಿನಕಾಯಿ ಚೆಟ್ನಿ, ಉಳ್ಳಾಗಡ್ಡೆ ಚಟ್ನಿ, ಅವರೆಕಾಳು, ಅಂಬಲಿ, ಬದನಕಾಯಿ ಪಲ್ಯೆ, ಸಾಂಬರು, ಮೊಸರನ್ನ ಬಾನ ಬುತ್ತಿಯ ಪ್ರಸಾದವನ್ನು ಭಕ್ತರು ಸವಿದರು‘ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹಂಪನಗೌಡ ಪೊಲೀಸ್ ಪಾಟೀಲ ಹೇಳಿದರು.

ಮೊಸರನ್ನ ಬಾನ ಬುತ್ತಿ ಕಾರ್ಯಕ್ರಮಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಈ ಆಚರಣೆಯು 12ನೇ ಶತಮಾನದ ಪರಂಪರೆಯಿಂದ ಈಗಲೂ ಮುಂದುವರಿದಿದೆ.

ಐತಿಹಾಸಿಕ ಹಿನ್ನೆಲೆ:ದೇವಸೂಗೂರು ಗ್ರಾಮದ ಸೂಗೂರೇಶ್ವರ ಸ್ವಾಮಿಯು ಜಂಗಮ ಸ್ವರೂಪಿಯಾಗುತ್ತಾನೆ. ದೇವರಿಗೆ ನದಿ ಸ್ನಾನದ ನಂತರ ಮಹಾಭಿಷೇಕ ಮಾಡಲಾಗುತ್ತಿದೆ. ಕಾವಿಧಾರಣೆ ಮಾಡಿ ಜೋಳಿಗೆಯಲ್ಲಿ ಅಕ್ಕಿ ಹಾಕುವ ಮೂಲಕ ನೈವೇದ್ಯ ಮಾಡಲಾಗುತ್ತದೆ. ವಚನಕಾರರ ದಾಸೋಹ ಪದ್ಧತಿ ಆಚರಣೆ ಸಂದರ್ಭದಲ್ಲಿ ಜಂಗಮರಿಗೆ ಮೊಸರನ್ನ ಬಾನ ಬುತ್ತಿ ಉಣ ಬಡಿಸಲಾಗುತ್ತಿತ್ತು. ಮೊಸರನ್ನ ಬಾನ ಬುತ್ತಿ ಕೇವಲ ಊಟವಲ್ಲ. ಅದೊಂದು ಭಕ್ತ ಭೋಜನ ಎಂದು ಹೇಳುತ್ತಾರೆ ಗ್ರಾಮದ ಹಿರಿಯರು.

ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದ ಶ್ರೀ ಬಸವಣ್ಣನವರು ಒಂದು ಲಕ್ಷದ ತೊಂಬತ್ತಾರು ಸಾವಿರ ಜಂಗಮರಿಗೆ ನಿತ್ಯ ಪ್ರಸಾದವನ್ನು ಮಾಡುವ ಸಂಕಲ್ಪ ಮಾಡಿದ್ದರು. ಅವರ ಸಂಕಲ್ಪಕ್ಕೆ ಇನ್ನೂ ಆರು ಸಾವಿರ ಜಂಗಮರು ಕಡಿಮೆಯಾಗಿದ್ದರು. ಆ ಜಂಗಮರು ಕಾಶ್ಮೀರದ ಮಹಾದೇವರಸ ಮುದ್ರೆಯ ಮನೆಯಲ್ಲಿರುವ ವಿಚಾರ ತಿಳಿಯಿತು. ಆದ್ರೆ ಬಸವಣ್ಣನವರು ಆರು ಸಾವಿರ ಜಂಗಮರನ್ನು ಕರೆ ತರುವ ಬಗ್ಗೆ ಚಿಂತೆಗೊಳಗಾದರು.

ಆಗ ಅಲ್ಲಿಂದ ಅವರನ್ನು ಹೇಗೆ ಕರೆತರುವುದು ಎಂಬ ಯೋಚನೆಯಲ್ಲಿರುವಾಗ ಪ್ರಸಾದ ಮೂಲಕ ಕರೆತರಬೇಕು ಎನ್ನುವ ತಿರ್ಮಾನಕ್ಕೆ ಬಂದರು. ಮೊಸರನ್ನ ಬಾನ ಮಾಡಿಕೊಂಡ ಅನ್ನದ ರೂಪದಲ್ಲಿ ಕರೆತರಲಾಯಿತು. ಆಗ ಶ್ರೀಸೂಗೂರೇಶ್ವರ ಸ್ವಾಮಿಯ ಜತೆಯಲ್ಲಿ ಜಂಗಮರು ಬಂದ ಪ್ರತೀಕವಾಗಿ ಮೊಸರಬಾನ ಬುತ್ತಿಯನ್ನು ಇಂದಿಗೂ ಮಾಡಿಕೊಂಡ ಬರಲಾಗುತ್ತಿದೆ ಅಂತಾರೆ ಗ್ರಾಮದ ಹಿರಿಯರಾದ ಸಿದ್ರಾಮಪ್ಪಗೌಡ ಮಾಲಿಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.