ಮುದಗಲ್: ಇಲ್ಲಿನ ಮೊಹರಂ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿ ಪಡೆದಿದೆ.
ಮೊಹರಂ ವೀಕ್ಷಣೆಗೆ ದೇಶ–ವಿದೇಶದಿಂದ ಜನರು ಆಗಮಿಸುತ್ತಿದ್ದಾರೆ. ಮೊಹರಂನ ಕೊನೆಯ ದಿನ ಹಸನ್-ಹುಸೇನ್ ಬೆಳ್ಳಿ ಪಾಂಜಾಗಳನ್ನು ಮುಖಾಬಿಲೆ ಮಾಡಿಸಲಾಗುತ್ತದೆ.
ಕೋಟೆಯ ಹೊರ ಭಾಗದಲ್ಲಿ ಸಹೋದರರಿಬ್ಬರ (ಭೇಟಿ) ಮುಖಾಬಿಲೆ ನೆರೆದ ಲಕ್ಷಾಂತರ ಜನರ ಕಣ್ಣಲ್ಲಿ ನೀರು ತರಿಸುತ್ತದೆ.
ಮುದಗಲ್ ಒಂದು ಕಾಲದಲ್ಲಿ ಸಂಘರ್ಷದ ನೆಲವಾಗಿತ್ತು. ಮೊಹರಂ ಆಚರಣೆಗೆ ಬಂದ ನಂತರ ಸಾಮರಸ್ಯದ ನೆಲವಾಗಿ ಗುರುತಿಸಿಕೊಂಡಿದೆ. ಹಸನ್-ಹುಸೇನರು ಮಹ್ಮದ್ ಪೈಗಂಬರರ ಮೊಮ್ಮಕ್ಕಳು. ಕರ್ಬಲಾ ನೆಲದಲ್ಲಿ ನಡೆದ ಘನಘೋರ ಸಂಗ್ರಾಮದಲ್ಲಿ ಹತರಾದ ವ್ಯಕ್ತಿಗಳಿವರು.
ಮುದಗಲ್ ಪಟ್ಟಣ ಒಂಬತ್ತು ದಿನಗಳಿಂದ ನವ ವಧುವಿನಂತೆ ಸಿಂಗಾರಗೊಂಡಿದೆ. ಕೋಟೆ ಒಳ ಮತ್ತು ಹೊರಭಾಗದ ಬಜಾರ್ ಜನ ಜಂಗುಳಿಯಿಂದ ಕಿಕ್ಕಿರಿದು ತುಂಬಿರುತ್ತದೆ. ಕೋಟೆ ಮುಂಭಾಗದಲ್ಲಿ ವಿವಿಧ ಅಂಗಡಿಗಳನ್ನು ಹಾಕಲಾಗಿದೆ. ಮಕ್ಕಳ ಆಟಕ್ಕೆ ಜೋಕಾಲಿಗಳನ್ನು ಅಳವಡಿಸಲಾಗಿದೆ.
ಅಮಾವಾಸ್ಯೆ ಆದ ಮೂರು ದಿನಗಳಲ್ಲಿ ಅಲಾಯಿ ದೇವರ ಪ್ರತಿಷ್ಠಾಪನೆ ಮಾಡಲಾಗಿದೆ. ಇಲ್ಲಿಂದ ದಿನಕ್ಕೊಂದು ಬೆರಗು ಸೃಷ್ಟಿಸುತ್ತಾ ಹತ್ತು ದಿನ ನಡೆಯುವ ಮೊಹರಂಗೆ ಮೊದಲೆರಡು ದಿನ ಬೆಳ್ಳಿ ಪಾಂಜಾಗಳನ್ನು ಸಿಂಗರಿಸಿ ಮಸೀದಿ (ಮೊಹರಂ ದೇವರನ್ನು ಇಡುವ ದರ್ಗಾ)ಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.
ಪ್ರತಿ ದಿನ 10 ಗಂಟೆಗೆ ನವಾಬತ್ ನಗಾರಿ, ಬಾಜಾ–ಭಜಂತ್ರಿಗಳಿಂದ ದೇವರಿಗೆ(ಪೀರಾ)ದ ಹೂವು ಮುಡಿಸಲಾಗುತ್ತದೆ. ಐದನೇ ದಿನ ಸವಾರಿ. ಬಣ್ಣದ ಬಟ್ಟೆ, ಹೂಗಳಿಂದ ಅಲಂಕರಿಸಿದ ಪಾಂಜಾಗಳನ್ನು ಬೀದಿಗಳಲ್ಲಿ ರಾತ್ರಿಯೆಲ್ಲಾ ಮೆರವಣಿಗೆ ಮಾಡಿದರು.
ಮುದಗಲ್ ಕೋಟೆಯೊಳಗಿನ ದರ್ಗಾದಲ್ಲಿರುವ ಪೀರಾಗಳು ಸವಾರಿ ಏಳುವ ಸಂದರ್ಭದ ಮನಮೋಹಕ ದೃಶ್ಯವನ್ನು ಜನರು ಕಣ್ತುಂಬಿಕೊಂಡರು. ದರ್ಗಾದ ಮುಂದಿರುವ ಅಲಾಯಿ ಕುಣಿ ಮುಂದೆ ಯುವಕರ ಪಡೆ ಹೆಜ್ಜೆ ಹಾಕಿತು.
ಮೊಹರಂ ಪದಗಳನ್ನು ಮನಕರುಗುವಂತೆ ಹಾಡಿದರು. ಮೊಹರಂ ಪದಗಳ ಗಾಯಕರು, ನೆರೆದ ಜನರನ್ನು ಮೋಜು, ಮಸ್ತಿಯೊಂದಿಗೆ ಭಾವುಕರನ್ನಾಗಿ ಮಾಡಿದರು. ಕರ್ಬಲಾದ ಪದಗಳು ನೆರೆದವರ ಹೃದಯ ಕರಗಿಸಿಬಿಟ್ಟವು. ಹೆಣ್ಣು ಮಕ್ಕಳ ಕಣ್ಣಲ್ಲಿ ಹನಿಗಳುದುರಿದವು.
ಗುರುವಾರ ಇಮಾಮಿ ಖಾಸಿಂರ ಸವಾರಿ ನಡೆಯಿತು. ಶನಿವಾರ ಕತಲ್ ರಾತ್ರಿ (ಇಮಾಮಿ ಹುಸೇನರ ಸವಾರಿ) ಜರುಗಿತು. ಕರ್ಬಲಾ ಕಾಳಗದಲ್ಲಿ ಮಡಿದ ದಿನವನ್ನು ಕತಲ್ ರಾತ್ರಿ ಎಂದು ಆಚರಣೆ ಮಾಡಲಾಗುತ್ತದೆ.
ಮುದಗಲ್ ಮೊಹರಂ ಪ್ರಸಿದ್ಧಿ ಹೊಂದಲು ಕಾರಣರಾದವರು ಹಸನ್-ಹುಸೇನ್ ಸಹೋದರರು. ಇಂದು ಮೊಹರಂ ಕೊನೆ ದಿನ ಆ ಇಬ್ಬರನ್ನು ಮುಖಾಮುಖಿಯಾಗಿಸುವ ಆ ಗಳಿಗೆಗೆ ಲಕ್ಷಾಂತರ ಜನ ಕಾತುರರಾಗಿರುತ್ತಾರೆ. ಕೋಟೆಯ ಹೊರ ಭಾಗದಲ್ಲಿ ಈ ಎರಡು ಬೆಳ್ಳಿ ಪಂಜಾಗಳನ್ನು ಮುಖಾಬಿಲೆ ಮಾಡಿಸುವ ಆ ಕ್ಷಣ ಮದಗಲ್ ಮೊಹರಂನ ಆಕರ್ಷಕವೂ ಹೌದು.
ಮೊಹರಂಗೆ ಪಟ್ಟಣದ ನಾಗರಿಕರು ಹುಸೇನಿ ಆಲಂ ದರ್ಗಾ ಸಮಿತಿ ಪೊಲೀಸ್ ಇಲಾಖೆ ಸೇರಿ ಇನ್ನಿತರರ ಸಹಕಾರದೊಂದಿಗೆ ಭಕ್ತರಿಗೆ ತೊಂದರೆಯಾಗದಂತೆ ಮೂಲ ಸೌಕರ್ಯ ಕಲ್ಪಿಸಿದ್ದೇವೆಪ್ರವೀಣ ಬೋಗಾರ ಮುಖ್ಯಾಧಿಕಾರಿ ಪುರಸಭೆ ಮುದಗಲ್
ಐತಿಹಾಸಿಕ ಮುದಗಲ್ ಮೊಹರಂ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಇದಕ್ಕೆ ದೇಶ ವಿದೇಶಗಳಿಂದ ಜನರು ಆಗಮಿಸುತ್ತಾರೆಅಶೋಕಗೌಡ ಪಾಟೀಲ ಆದಾಪುರ ಮಾಜಿ ಅಧ್ಯಕ್ಷ ಪುರಸಭೆ ಮುದಗಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.