ಮುದಗಲ್: ಈ ಭಾಗದ 36 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ನಂದವಾಡಗಿ ಹನಿ ನೀರಾವರಿ ಯೋಜನೆಯ ಕಾಮಗಾರಿಯನ್ನು ಮಧ್ಯಪ್ರದೇಶದ ಮೋಹನಪುರ ಕುಂಡಲಗಿ ಮಾದರಿಯಲ್ಲಿ ನಡೆಸಲು ಕೃಷ್ಣಾಭಾಗ್ಯ ಜಲನಿಗಮ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.
ಒಟ್ಟು ಲಭ್ಯ 33 ಟಿಎಂಸಿ ಅಡಿ ಎನ್.ಆರ್.ಬಿ.ಸಿ, ಎನ್.ಎಲ್.ಬಿ.ಸಿ, ರಾಂಪುರ, ಕೊಪ್ಪಳ, ಪೀರಾಪುರ ಏತ ನೀರಾವರಿಗೆ ನೀರು ಹಂಚಿಕೆಯಾಗಿ 3.75 ಟಿಎಂಸಿ ಅಡಿ ನೀರು ಉಳಿದಿತ್ತು. ಅದರ ಬಳಸಿಕೊಂಡು ನಂದವಾಡಗಿ ಏತ ನೀರಾವರಿ ಯೋಜನೆ ಮೂಲಕ 36,100 ಹೆಕ್ಟೇರ್ ಪ್ರದೇಶಕ್ಕೆ ಹನಿ ನೀರಾವರಿ ಪದ್ಧತಿ ಮೂಲಕ ನೀರುಣಿಸಲು ನಿರ್ಧರಿಸಲಾಗಿತ್ತು.
ಹನಿ ನೀರಾವರಿ ಬದಲಿಗೆ ಹರಿಯುವ ನೀರಾವರಿ ಯೋಜನೆ ಜಾರಿಗೊಳಿಸಬೇಕು ಎಂದು ರೈತರು ಹಾಗೂ ರೈತ ಸಂಘಟನೆಗಳು ಪ್ರತಿಭಟಿಸಿದ್ದರು. ರೈತರ ಬೇಡಿಕೆಯಂತೆ ಹರಿ ನೀರಾವರಿ ಪದ್ಧತಿ ಜಾರಿಗೊಳಿಸಿದರೆ 3.75 ಟಿಎಂಸಿ ನೀರು ಸಾಲುವುದಿಲ್ಲ. ಇದನ್ನು ಮನಗೊಂಡ ಸರ್ಕಾರವು ಕೆಬಿಜೆಎನ್‌ಎಲ್ ಅಧಿಕಾರಿಗಳ ನಿಯೋಗವನ್ನು ಮಧ್ಯಪ್ರದೇಶದ ಮೋಹನಪುರ ಕುಂಡಲಗಿ ಕಳಿಸಿತು. ಕುಂಡಲಗಿ ಮಾದರಿಯಲ್ಲಿ ನೀರಾವರಿ ಯೋಜನೆ ರೂಪಿಸಲು ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ. ಕೆಬಿಜೆಎನ್‌ಎಲ್ ಅಧಿಕಾರಿಗಳು ಮಧ್ಯ ಪ್ರದೇಶಕ್ಕೆ ಭೇಟಿ ನೀಡಿ ಬಂದು ವರದಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ.
ಇನ್ನೂ ಮುಗಿದಿಲ್ಲ ಯೋಜನೆ:
2017-18ರಲ್ಲಿ ₹1,530 ಕೋಟಿಗಳಲ್ಲಿ ನಂದವಾಡಗಿ ಹನಿ ನೀರಾವರಿ ಕಾಮಗಾರಿ ನಾಲ್ಕು ಹಂತದಲ್ಲಿ ಆರಂಭವಾಗಿತ್ತು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಮಗಾರಿಗೆ ಚಾಲನೆ ನೀಡಿದ್ದರು. ಎಲ್.ಎನ್.ಟಿ ಕಂಪನಿ, ತಾಲ್ ಕನ್ಸೊಡೆನ್ಸಿ, ಮೆಗಾ ಕಂಪನಿ, ಎನ್.ಡಿ. ವಡ್ಡರ್ ಕಂಪನಿಗಳಿಂದ ಕಾಮಗಾರಿ ನಡೆದಿದೆ.
‘ಕಾಮಗಾರಿಗಾಗಿ ಈಗಾಗಲೇ ಒಟ್ಟು ₹1,378 ಕೋಟಿ ಖರ್ಚಾಗಿದೆ. ಎಲ್ ಅಂಡ್ ಟಿ ಕಂಪನಿ ಗುತ್ತಿಗೆ ಪಡೆದ ಕಾಮಗಾರಿ ಪೂರ್ಣಗೊಂಡಿದೆ. ಮೆಗಾ ಕಂಪನಿ ಹಾಗೂ ಎನ್.ಡಿ. ವಡ್ಡರ್ ಕಂಪನಿ ಗುತ್ತಿಗೆ ಪಡೆದ ಕಾಮಗಾರಿ ಶೇ70ರಷ್ಟು ಮುಗಿದಿದೆ. ತಾಲ್ ಕನ್ಸಲ್‌ಟನ್ಸಿ ಕಂಪನಿ ಶೇ40ರಷ್ಟು ಕಾಮಗಾರಿ ಮಾತ್ರವೇ ಮುಗಿಸಿದೆ’ ಎಂದು ಮೂಲಗಳು ಹೇಳಿವೆ.
‘ಎಂಟು ವರ್ಷಗಳಿಂದ ಕಾಮಗಾರಿ ನಡೆದರೂ ಇನ್ನು ಮುಗಿದಿಲ್ಲ. ಭೂಮಿಗೆ ಒಂದು ಬಾರಿಯಾದರೂ ನೀರು ಹರಿದಿಲ್ಲ. ಯೋಜನೆಗೆ ಭೂಮಿ ಕಳೆದುಕೊಂಡ ಕೆಲ ಭೂ ಮಾಲೀಕರಿಗೆ ಸರ್ಕಾರದಿಂದ ಪರಿಹಾರ ಹಣವೂ ಸಿಕ್ಕಿಲ್ಲ’ ಎಂದು ರೈತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಪುತ್ರಪ್ಪಗೌಡ ನಂದಿಹಾಳ ಟೀಕಿಸಿದ್ದಾರೆ.
ರೈತರ ಒತ್ತಾಯದ ಮೇರೆಗೆ ಸರ್ಕಾರ ಮಧ್ಯಪ್ರದೇಶ ಮಾದರಿ ನೀರಾವರಿ ಯೋಜನೆ ಅಳವಡಿಸಲು ಸೂಚಿಸಿದೆಸುರೇಂದ್ರ ರೆಡ್ಡಿ ಇಇ ಕೆಬಿಜೆಎನ್‌ಎಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.