ADVERTISEMENT

ಮುದಗಲ್: ವೈದ್ಯ, ಸಿಬ್ಬಂದಿ ಕೊರತೆ: ರೋಗಿಗಳ ಪರದಾಟ

40 ಗ್ರಾಮ, 8 ತಾಂಡಾಗಳ ಜನರಿಗೆ ಆಸರಯಾದ ಆರೋಗ್ಯ ಕೇಂದ್ರ

ಡಾ.ಶರಣಪ್ಪ ಆನೆಹೊಸೂರು
Published 30 ಜನವರಿ 2025, 7:07 IST
Last Updated 30 ಜನವರಿ 2025, 7:07 IST
ಮುದಗಲ್ ಸಮುದಾಯ ಆರೋಗ್ಯ ಕೇಂದ್ರ
ಮುದಗಲ್ ಸಮುದಾಯ ಆರೋಗ್ಯ ಕೇಂದ್ರ    

ಮುದಗಲ್: ಸಮುದಾಯ ಆರೋಗ್ಯ ಕೇಂದ್ರ ಅವ್ಯವಸ್ಥೆ ಆಗರವಾಗಿದ್ದು ಮೂಲಸೌಕರ್ಯ, ತಜ್ಞ ವೈದ್ಯರು, ಸಿಬ್ಬಂದಿ ಕೊರತೆಯಿಂದ ರೋಗಿಗಳು ಪರದಾಡುವಂತಾಗಿದೆ.

ಮುದಗಲ್ ಹೋಬಳಿಯ 40 ಗ್ರಾಮಗಳು, 8 ತಾಂಡಾಗಳು ಸೇರಿ 50 ಸಾವಿರಕ್ಕೂ ಹೆಚ್ಚು ಜನರು ಈ ಆರೋಗ್ಯ ಕೇಂದ್ರದ ಉಪಯೋಗ ಪಡೆದುಕೊಳ್ಳುತ್ತಾರೆ. ಆದರೆ ಸಮರ್ಪಕ ವೈದ್ಯರು, ಸಿಬ್ಬಂದಿ ಇಲ್ಲದೆ ರೋಗಿಗಳಿಗೆ ತೊಂದರೆ ಪಡುತ್ತಿದ್ದಾರೆ. ಇಲ್ಲಿಗೆ ಗರ್ಭಿಣಿ ಹಾಗೂ ಬಾಣಂತಿಯರು ಬರುವ ಸಂಖ್ಯೆ ಹೆಚ್ಚಿದೆ. ತಜ್ಞ ವೈದ್ಯರಿಲ್ಲದೆ ರೋಗಿಗಳು ಚಿಕಿತ್ಸೆಗೆ ತೊಂದರೆಯಾಗಿದೆ.

ಆರೋಗ್ಯ ಕೇಂದ್ರದಲ್ಲಿ 5 ವೈದ್ಯರ ಹುದ್ದೆ ಮಂಜೂರಾತಿ ಇದೆ. ಇಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ ಒಬ್ಬರನ್ನು ಮೂರು ದಿನಗಳಂತೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ನಿಯೋಜಿಸಲಾಗಿದೆ. ಅರಿವಳಿಕೆ ತಜ್ಞರು, ಮಕ್ಕಳ ತಜ್ಞರ ಹುದ್ದೆ ಖಾಲಿ ಇದೆ. 12 ಜನ ಗ್ರೂಪ್ ಡಿ ನೌಕರರ ಹುದ್ದೆ ಮಂಜೂರಾತಿ ಇದೆ ಆದರೆ ಇಬ್ಬರೇ ಕಾರ್ಯನಿರ್ವಹಿಸುತ್ತಿದ್ದಾರೆ. ಸೀನಿಯರ್ ಮೆಡಿಕಲ್ ಆಫೀಸರ್, ಕಿರಿಯ ಪ್ರಯೋಗ ಶಾಲಾ ತಂತ್ರಜ್ಞರು ಹುದ್ದೆ ಖಾಲಿ ಇವೆ.

ADVERTISEMENT

ಖಾಲಿ ಹುದ್ದೆಗಳ ಭರ್ತಿ ಮಾಡಿ ಎಂದು ಅನೇಕ ಸಂಘಟನೆಗಳು ಹಾಗೂ ಸಾರ್ವಜನಿಕರು ಅನೇಕ ಬಾರಿ ಲಿಖಿತ ಹಾಗೂ ಮೌಖಿಕವಾಗಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ.

ಸಿಬ್ಬಂದಿ ಸಮಸ್ಯೆಯಷ್ಟೇ ಅಲ್ಲದೆ ಸ್ವಚ್ಛತೆಯೂ ಇಲ್ಲ. ಇತ್ತೀಚೆಗೆ ರಾಜ್ಯದಲ್ಲಿ ಬಾಣಂತಿಯರ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು. 50 ಸಾವಿರಕ್ಕೂ ಹೆಚ್ಚು ಜನರು ಉಪಯೋಗ ಪಡೆದುಕೊಳ್ಳುವ ಆರೋಗ್ಯ ಕೇಂದ್ರಕ್ಕೆ ಅರಿವಳಿಕೆ ತಜ್ಞರು, ಮಕ್ಕಳ ತಜ್ಞರ ಇಲ್ಲದಂತಾಗಿದೆ. ಮಾಕಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಒಬ್ಬರನ್ನ, ಗುತ್ತಿಗೆ ಆಧಾರದ ಮೇಲೆ ಒಬ್ಬರನ್ನ, ಬಿಎಎಂಎಸ್‌ನ ಒಬ್ಬ ವೈದ್ಯರನ್ನ ನೇಮಕ ಮಾಡಿದರೂ ತಜ್ಞ ವೈದ್ಯರು ಇಲ್ಲದರಿಂದ ಪ್ರಯೋಜನಕ್ಕೆ ಬಾರದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಮುದಗಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ 2024 ರಲ್ಲಿ 54,194 ಹೊರ ಹಾಗೂ ಒಳರೋಗಿಗಳ ದಾಖಲಾಗಿದೆ. 810 ಮಕ್ಕಳ ಹೆರಿಗೆಯಾಗಿದೆ. ತಜ್ಞ ವೈದ್ಯರು ಇದ್ದರೆ ಇದರ ಪ್ರಮಾಣ 10 ಪಟ್ಟು ಹೆಚ್ಚಾಗುತ್ತಿತ್ತು ಎಂದು ಪಟ್ಟಣದ ನಿವಾಸಿ ಬಸವರಾಜ ಬಂಕದಮನಿ ಹೇಳಿದರು.

ವೈದ್ಯರು ಹಾಗೂ ಸಿಬ್ಬಂದಿ ಇಲ್ಲದ ಕಾರಣ, ಲಿಂಗಸುಗೂರು, ಇಳಕಲ್, ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಜನರು ತೆರೆಳುತ್ತಿದ್ದಾರೆ. ಖಾಸಗಿ ಆಸ್ಪತ್ರೆ ಲಕ್ಷಾಂತರ ರೂಪಾಯಿ ಕಟ್ಟಿ ಬರುವಂತಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ನಾರ್ಮಲ್ ಹೆರಿಗೆ ಆಗುವಂತಿದ್ದರೂ ಸಿಸೇರಿಯನ್ ಮಾಡಿ ಬಡವರ ಹೊಟ್ಟೆ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಮಂಜುನಾಥ ಆರೋಪಿಸಿದರು.

ಮುದಗಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅರಿವಳಿಕೆ ತಜ್ಞರು ಸೇರಿದಂತೆ ಇನ್ನಿತರ ವೈದ್ಯರು ಸಿಬ್ಬಂದಿಯನ್ನ ನೇಮಿಸಿ ಬಡವರಿಗೆ ಅನುಕೂಲ ಮಾಡಿಕೊಡಬೇಕು.
–ಶರಣಪ್ಪ ಕಟ್ಟಿಮನಿ, ಡಿಸ್‌ಎಸ್‌ಎಸ್ ತಾಲ್ಲೂಕು ಸಂಚಾಲಕ
ಆರೋಗ್ಯ ಕೇಂದ್ರಕ್ಕೆ ಸಾಕಷ್ಟು ರೋಗಿಗಳು ಬರುತ್ತಾರೆ ತಜ್ಞ ವೈದ್ಯರನ್ನು ನೀಡಿ ಎಂದು ಮೇಲಧಿಕಾರಿಗಳಿಗೆ ಮನವಿ ಮಾಡಿದ್ದೇವೆ.
–ಡಾ.ಚಂದ್ರಕಾಂತ, ವೈದ್ಯಾಧಿಕಾರಿ ಮುದಗಲ್

ಮುದಗಲ್ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಹೆರಿಗೆ ವಿವರ(2024)

ಜನವರಿ; 71

ಫೆಬ್ರವರಿ; 45

ಮಾರ್ಚ್; 75

ಎಪ್ರಿಲ್; 72

ಮೇ; 60

ಜೂನ್; 87

ಜುಲೈ; 72

ಆಗಸ್ಟ್; 82

ಸೆಪ್ಟೆಂಬರ್; 85

ಅಕ್ಟೋಬರ್; 74

ನವೆಂಬರ್; 66

ಡಿಸೆಂಬರ್; 21

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.