ರಾಯಚೂರು: ಭಾವೈಕ್ಯದ ಸಂಕೇತವಾದ ಮೊಹರಂ ಅನ್ನು ಜಿಲ್ಲೆಯಾದ್ಯಂತ ಭಾನುವಾರ ಹಿಂದೂ- ಮುಸ್ಲಿಮರು ಒಟ್ಟಾಗಿ ಶ್ರದ್ಧಾ- ಭಕ್ತಿಯಿಂದ ಆಚರಿಸಿದರು.
ಗ್ರಾಮೀಣ ಭಾಗದ ಹಲವೆಡೆ ಕೆಂಡ ಹಾಯುವ ಧಾರ್ಮಿಕ ಕಾರ್ಯಕ್ರಮ ನಡೆದವು. ಈ ಸಂದರ್ಭ ಅನೇಕರು ಅಶುರಾ (ಉಪವಾಸ) ಆಚರಿಸಿದರು. ಕಳೆದ ಐದು ದಿನಗಳಿಂದ ಹಸನ್-ಹುಸೇನ್‌ರ ತ್ಯಾಗ-ಬಲಿದಾನ ಸ್ಮರಿಸುವ ಕಾರ್ಯಕ್ರಮ ನಡೆದವು.
ಪಂಜಾ ಕೂರಿಸಿದ್ದ ಕಟ್ಟೆಗಳಲ್ಲಿ ಕವಡೆ-ಊದು ಹಾಕಿ, ಹೂವಿನಿಂದ ಅಲಂಕರಿಸಿ, ಮಗ್ಗುಮ್ ಸಕ್ಕರೆ ಫಾತೆಹಾ ಅರ್ಪಿಸಲಾಯಿತು.
ಯುವಕರು ಹಾಗೂ ಬಾಲಕರು ಕೈಗೆ ದಾರ ಕಟ್ಟಿಕೊಂಡು ಫಕೀರರಾಗಿ, ಅಳ್ಕೊಳ್ಳಿ ಬಾವಾ, ಹುಲಿ ವೇಷ ಧರಿಸಿ ಅಲಾಹಿ ಕುಣಿತದಲ್ಲಿ ಪಾಲ್ಗೊಂಡರು.
ರಾಯಚೂರಿನ ಕೇಂದ್ರ ಕಾರಾಗೃಹ, ತೀನ್ ಖಂದಿಲ್ ಹಾಗೂ ಕೆಲ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಲಾದ ಪಂಜಾಗಳ ಮೆರವಣಿಗೆ ನಡೆಯಿತು. ಕೆಲವರು ದಾನ, ಅನ್ನಸಂತರ್ಪಣೆ ಮಾಡಿದರು. ಪ್ರಮುಖ ರಸ್ತೆಗಳಲ್ಲಿ ಮುಸ್ಲಿಮರು ಸಾರ್ವಜನಿಕರಿಗೆ ಸಿಹಿ ಪಾನೀಯ ನೀಡಿ ಭಾವೈಕ್ಯ ಮೆರೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.