
ಮಸ್ಕಿ: ಪಟ್ಟಣದ ಪುರಸಭೆ ಕಚೇರಿ ಪಕ್ಕದಲ್ಲಿ ವಿಶೇಷ ಅನುದಾನದಡಿ, ₹80 ಲಕ್ಷ ವೆಚ್ಚದಲ್ಲಿ 3 ವರ್ಷಗಳ ಹಿಂದೆ ನಿರ್ಮಿಸಲಾದ ವಾಣಿಜ್ಯ ಮಳಿಗೆಗಳು ನಿರೀಕ್ಷಿತ ಆದಾಯ ತಂದುಕೊಡದೆ ಪುರಸಭೆಗೆ ಆರ್ಥಿಕವಾಗಿ ಹೊರೆಯಾಗುತ್ತಿವೆ.
14 ಮಳಿಗೆಗಳ ಪೈಕಿ ಕೇವಲ ಮೂರು ಮಳಿಗೆಗಳಲ್ಲಿ ಮಾತ್ರ ವಹಿವಾಟು ಆರಂಭವಾಗಿದ್ದು, ಉಳಿದ ಮಳಿಗೆಗಳು ಖಾಲಿಯೇ ಉಳಿದಿವೆ.
ಕೆಳಭಾಗದಲ್ಲಿರುವ 7 ಮಳಿಗೆಗಳಿಗೆ ಹರಾಜು ಪ್ರಕ್ರಿಯೆ ನಡೆದಿದ್ದರೂ, ಅವುಗಳಲ್ಲಿ ಮೂರು ಮಳಿಗೆಗಳಲ್ಲಷ್ಟೇ ವ್ಯಾಪಾರ ಚಟುವಟಿಕೆ ನಡೆಯುತ್ತಿದೆ. ಉಳಿದ ನಾಲ್ಕು ಮಳಿಗೆಗಳನ್ನು ಬಾಡಿಗೆಗೆ ಪಡೆದ ವ್ಯಾಪಾರಿಗಳು ವಹಿವಾಟು ಆರಂಭಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ.
ಈ ಕುರಿತು ಪುರಸಭೆ ಎರಡು ಬಾರಿ ನೋಟಿಸ್ ನೀಡಿದ್ದರೂ ಯಾವುದೇ ಸ್ಪಂದನೆ ದೊರಕಿಲ್ಲ. ಇದೀಗ ಮೂರನೇ ನೋಟಿಸ್ ನೀಡಲು ಮುಂದಾಗಿದ್ದು, ಅದಕ್ಕೂ ಪ್ರತಿಕ್ರಿಯೆ ಬಾರದಿದ್ದರೆ ಸಂಬಂಧಿಸಿದವರ ಭದ್ರತಾ ಠೇವಣಿ ಹಣವನ್ನು ಜಪ್ತಿ ಮಾಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ ತಿಳಿಸಿದ್ದಾರೆ.
ಇನ್ನೊಂದೆಡೆ, ವಾಣಿಜ್ಯ ಮಳಿಗೆಯ ಮೇಲ್ಮಹಡಿಯಲ್ಲಿ ನಿರ್ಮಿಸಲಾದ 7 ಮಳಿಗೆಗಳಿಗೆ ಸತತ ನಾಲ್ಕು ಬಾರಿ ಟೆಂಡರ್ ಕರೆದಿದ್ದರೂ ವ್ಯಾಪಾರಿಗಳಿಂದ ಸ್ಪಂದನೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಜನವರಿ 19ರಂದು 5ನೇ ಬಾರಿಗೆ ಪುನಃ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ.
ಪುರಸಭೆ ಹೆಚ್ಚಿನ ಬಾಡಿಗೆ ನಿಗದಿಪಡಿಸಿದ ಕಾರಣ ವ್ಯಾಪಾರಿಗಳು ಮಳಿಗೆ ಪಡೆಯಲು ಮುಂದೆ ಬರುತ್ತಿಲ್ಲ ಎನ್ನಲಾಗಿದೆ.
‘ಬಾಡಿಗೆ ಹೆಚ್ಚಾದ ಕಾರಣ ಹೊಸ ಮಳಿಗೆ ಆರಂಭಿಸಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮ ಮಳಿಗೆಗಳು ಖಾಲಿಯೇ ಉಳಿದಿವೆ. ಪುರಸಭೆಗೆ ವಾರ್ಷಿಕ ಅಂದಾಜು ₹16 ಲಕ್ಷ ಹೊರೆ ಬೀಳಲಿ ದೆ. ಸಾರ್ವಜನಿಕ ಹಣ ವ್ಯರ್ಥವಾಗುತ್ತಿದೆ’ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ.
‘ಪುರಸಭೆ ಬಾಡಿಗೆ ದರ ಪುನರ್ ಪರಿಶೀಲನೆ ಮಾಡಬೇಕು’ ಎಂದು ಆಗ್ರಹಿಸುತ್ತಾರೆ.
ಪುರಸಭೆ ನಿಯಮದ ಪ್ರಕಾರ ವಾಣಿಜ್ಯ ಮಳಿಗೆಗಳಿಗೆ ಬಾಡಿಗೆ ನಿಗದಿ ಮಾಡಲಾಗಿದೆ. ಕೆಳ ಮಹಡಿಯಲ್ಲಿ 7 ಮಳಿಗೆಗಳು ಹರಾಜಾಗಿದ್ದು ವಹಿವಾಟು ನಡೆಸುವಂತೆ ನೋಟಿಸ್ ನೀಡಲಾಗಿದೆ. ಮೇಲ್ಮಹಡಿ ಮಳಿಗೆಗಳಿಗೆ ಪುನಃ ಟೆಂಡರ್ ಕರೆಯಲಾಗಿದೆ–ನರಸರೆಡ್ಡಿ, ಮುಖ್ಯಾಧಿಕಾರಿ ಪುರಸಭೆ ಮಸ್ಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.