ADVERTISEMENT

‘ನಾಡಗೌಡರಿಂದ ರೈತರ ದಿಕ್ಕು ತಪ್ಪಿಸುವ ಕೆಲಸ’

ಸುದ್ದಿಗೋಷ್ಠಿಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಟೀಕೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 5:37 IST
Last Updated 27 ನವೆಂಬರ್ 2025, 5:37 IST
ಹಂಪನಗೌಡ ಬಾದರ್ಲಿ
ಹಂಪನಗೌಡ ಬಾದರ್ಲಿ   

ಸಿಂಧನೂರು: ಮಾಜಿ ಸಚಿವ ವೆಂಕಟರಾವ್ ನಾಡಗೌಡರು ತುಂಗಭದ್ರಾ ಜಲಾಶಯದ ನೀರಿನ ವಿಚಾರದಲ್ಲಿ ನೀರಿನ ಅಂಕಿ-ಅಂಶಗಳ ಬಗ್ಗೆ ವಾಸ್ತವ ಸ್ಥಿತಿ ಗೊತ್ತಿದ್ದರೂ ಸತ್ಯ ಮರೆಮಾಚಿ, ಸುಳ್ಳುಗಳನ್ನು ಹೇಳುವ ಮೂಲಕ ರೈತರನ್ನು ಅಷ್ಟೇ ಅಲ್ಲ, ಜೆಡಿಎಸ್, ಬಿಜೆಪಿ ಮತ್ತು ವಿವಿಧ ಸಂಘ-ಸಂಸ್ಥೆಗಳ ಮುಖಂಡರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಟೀಕಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಡ್ಯಾಂನ 33 ಗೇಟ್‍ಗಳ ಹೊಸದಾಗಿ ಅಳವಡಿಕೆ, 2ನೇ ಬೆಳೆಗೆ ನೀರು ಹರಿಸುವಿಕೆ, ಕಾಲುವೆಗಳ ದುರಸ್ತಿ ಮತ್ತು ಸಿಬ್ಬಂದಿ ನೇಮಕ ಕುರಿತು ಬೋರ್ಡ್‍ನಿಂದ ಸ್ಪಷ್ಟ ತೀರ್ಮಾನ ಹೇಳಬೇಕು ಎಂದು ಅಧಿವೇಶನದಲ್ಲಿ ಪ್ರಶ್ನಿಸಿದ್ದಕ್ಕೆ ಸಚಿವ ಡಿ.ಕೆ.ಶಿವಕುಮಾರ ಸ್ಪಷ್ಟ ಉತ್ತರ ನೀಡಿದ್ದಾರೆ’ ಎಂದು ತಿಳಿಸಿದರು.

ಜುಲೈ 13ರಂದು ತುಂಗಭದ್ರಾ ಬೋರ್ಡ್ ಸಭೆ ಮಾಡಿ ಗೇಟ್‍ಗಳ ಬದಲಾವಣೆಗೆ ನಿರ್ಧರಿಸಿದೆ. 15 ಗೇಟ್‍ಗಳು ಶೇ60ರಷ್ಟು, ಇನ್ನುಳಿದ ಗೇಟ್‍ಗಳು ಶೇ50 ರಷ್ಟು ಡ್ಯಾಮೇಜ್ ಆಗಿವೆ. ಜೊತೆಗೆ ಕನ್ನಯ್ಯ ನಾಯ್ಡು ಅವರು ಗೇಟ್ ಬದಲಾವಣೆ ಮಾಡಲು ಮತ್ತು ಡ್ಯಾಂನ ಸುರಕ್ಷತೆ ದೃಷ್ಠಿಯಿಂದ 80 ಟಿಎಂಸಿ ಮಾತ್ರ ನೀರು ಸಂಗ್ರಹಿಸಬೇಕು ಎಂದು ಬೋರ್ಡ್‍ಗೆ ಪತ್ರ ಬರೆದಿದ್ದಾರೆ. ನ.14 ರಂದು ನಡೆದ ಐಸಿಸಿ ಸಭೆಯಲ್ಲಿ ಹೊಸ ಗೇಟ್‍ಗಳ ಅಳವಡಿಕೆ ದೃಷ್ಠಿಯಿಂದ ಎರಡನೇ ಬೆಳೆಗೆ ನೀರು ಹರಿಸಲು ಸಾಧ್ಯವಿಲ್ಲ ಎಂಬ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.

ADVERTISEMENT

‘ನಾಡಗೌಡರು ನೀರಿನ ವಿಷಯದಲ್ಲಿ ಸುಳ್ಳು ಹೇಳಿ ಚುನಾವಣೆಯಲ್ಲಿ ಗೆಲ್ಲಬೇಕೆಂಬ ಉದ್ದೇಶ ಹೊಂದಿದ್ದಾರೆ. ಅವರಿಗೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದಿದ್ದರೆ 6 ತಿಂಗಳ ಹಿಂದಿನಿಂದಲೇ 2ನೇ ಬೆಳೆಗೆ ಹೋರಾಟ ಮಾಡಬಹುದಿತ್ತವೇ ಎಂದು ಪ್ರಶ್ನಿಸಿದ ಅವರು, ಭದ್ರಾ ಡ್ಯಾಂನಿಂದ 2-3 ಟಿಎಂಸಿ ನೀರನ್ನು ತುಂಗಭದ್ರಾ ಡ್ಯಾಂಗೆ ಬಿಡಲಾಗಿದೆ. ಆದರೆ 10 ಟಿಎಂಸಿ ಬಿಟ್ಟಿರುವ ಉದಾಹರಣೆ ಇಲ್ಲ. ಡ್ಯಾಂನಲ್ಲಿರುವ ಸದ್ಯ ಇರುವ 80 ಟಿಎಂಸಿ ನೀರಿನಲ್ಲಿ 13 ಮಾತ್ರ ಎಡದಂಡೆ ನಾಲೆಯ ಪಾಲಿನದ್ದು. ಅದರಲ್ಲಿ ಕುಡಿಯಲು ಬಳಸಬೇಕು. ಒಂದು ಬೆಳೆ ಸಂಪೂರ್ಣವಾಗಿ ಬೆಳೆಯಲು 30 ಟಿಎಂಸಿ ನೀರು ಬೇಕು. ಅಷ್ಟು ನೀರು ಡ್ಯಾಂನಲ್ಲಿ ಇಲ್ಲ’ ಎಂದರು.

ತುಂಗಭದ್ರಾ ಬೋರ್ಡ್ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿವೆ. ಆದ್ದರಿಂದ ನಾಡಗೌಡರು ಕೇಂದ್ರಕ್ಕೆ ತೆರಳಿ ಚರ್ಚಿಸಿಯಾದರೂ ಅಥವಾ ಡ್ಯಾಂಗೆ ಮುತ್ತಿಗೆ ಹಾಕಿ ಹೋರಾಟ ಮಾಡಿಯಾದರೂ 2ನೇ ಬೆಳೆಗೆ ನೀರು ಬಿಡಿಸಲಿ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಸಣ್ಣಭೀಮನಗೌಡ ಗೊರೇಬಾಳ, ಬಸವರಾಜ ಹಿರೇಗೌಡರ್, ಆರ್.ಅಂಬ್ರೂಸ್, ಖಾಜಿಮಲಿಕ್ ವಕೀಲ, ರಾಮಣ್ಣ ಸಾಸಲಮರಿ, ಅನಿಲಕುಮಾರ ವೈ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.