ADVERTISEMENT

ನಾರಾಯಣಪೂರ ಅಣೆಕಟ್ಟೆ ಕೆಳಭಾಗದ ಜನರಿಗೆ ಮುನ್ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 14:21 IST
Last Updated 13 ಜುಲೈ 2019, 14:21 IST

ರಾಯಚೂರು:ಆಲಮಟ್ಟಿ ಜಲಾಶಯವು ಬಹುತೇಕ ಭರ್ತಿಯಾಗಿದ್ದು, ನಾರಾಯಣಪೂರ ಅಣೆಕಟ್ಟೆಗೆ 50 ಸಾವಿರ ಕ್ಯುಸೆಕ್‌ ನೀರನ್ನು ಹರಿಬಿಡಲಾಗುತ್ತಿದೆ. ಈ ಒಳಹರಿವು ಪ್ರಮಾಣವು ಇನ್ನೂ ಹೆಚ್ಚಾಗುವ ಸಂಭವ ಇರುವುದರಿಂದ ನಾರಾಯಣಪೂರ ಅಣೆಕಟ್ಟೆಯಿಂದ ಜುಲೈ 14 ರಿಂದ ಯಾವುದೇ ಕ್ಷಣದಲ್ಲಿ ಕೃಷ್ಣಾನದಿಗೆ ನೀರನ್ನು ಹರಿಬಿಡುವ ಸಾಧ್ಯತೆ ಇದೆ.

ನಾರಾಯಣಪೂರ ಅಣೆಕಟ್ಟೆಯ ಕೆಳಭಾಗದ ನದಿ ಪಾತ್ರದಲ್ಲಿರುವ ಗ್ರಾಮಗಳ ಜನ–ಜಾನುವಾರುಗಳಿಗೆ ಮುಂಜಾಗ್ರತಾ ಕ್ರಮವಾಗಿ ಪ್ರವಾಹದ ಮುನ್ಸೂಚನೆ ನೀಡಬೇಕು ಎಂದು ಸಂಬಂಧಿಸಿದ ಇಲಾಖೆಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಕೃಷ್ಣಾಭಾಗ್ಯ ಜಲ ನಿಗಮ ಅಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಅವರುಶನಿವಾರ ಪತ್ರ ಬರೆದಿದ್ದಾರೆ.

ಒಂದು ಲಕ್ಷ ಕ್ಯುಸೆಕ್‌ ನಾರಾಯಣಪೂರದಿಂದ ಅಣೆಕಟ್ಟೆಯಿಂದ ಹೊರಹರಿವು ಇದ್ದರೆ ನದಿಪಾತ್ರದಲ್ಲಿ ಜನಜಾನುವಾರಗಳ ಸುರಕ್ಷತೆ ದೃಷ್ಟಿಯಿಂದ ಯಾವುದೇ ಚಟುವಟಿಕೆ ನಡೆಸಬಾರದು. 1.5 ಲಕ್ಷ ಕ್ಯುಸೆಕ್‌ ನೀರು ಹರಿದು ಬಂದರೆ ಸುರಪುರ ತಾಲ್ಲೂಕಿನ ನೀಲಕಂಠರಾಯನ ಗಡ್ಡಿ ಗ್ರಾಮವು ನಡುಗಡ್ಡೆಯಾಗಬಹುದು. 2 ಲಕ್ಷ ಕ್ಯುಸೆಕ್‌ ಹರಿದು ಬಂದರೆ ದೇವದುರ್ಗ–ಕಲಬುರ್ಗಿ ರಾಜ್ಯ ಹೆದ್ದಾರಿ ಹೂವಿನಹೆಡಗಿ ಸೇತುವೆ ಮುಳುಗಡೆಯಾಗಿ ವಾಹನ ಸಂಚಾರ ಸ್ಥಗಿತಗೊಳ್ಳಬಹುದು. 2.5 ಲಕ್ಷ ನೀರು ಹರಿದು ಬಂದರೆ ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ, ಯರಗೋಡಿ ಸೇತುವೆಗಳು ಮುಳುಗಡೆಯಾಗಿ ವಾಹನ ಸಂಚಾರ ಸ್ಥಗಿತಗೊಳ್ಳಬಹುದು. 3 ಲಕ್ಷ ಕ್ಯುಸೆಕ್‌ ನೀರು ಹರಿದು ಬಂದರೆ ಕೃಷ್ಣಾನದಿಯ ಇಕ್ಕೆಲಗಳಲ್ಲಿ ಪ್ರವಾಹ ಉಕ್ಕಿ ಹರಿಯುವುದರಿಂದ ನದಿಪಾತ್ರದ ಗ್ರಾಮಗಳ ಜನರಿಗೆ‍ಪ್ರವಾಹದ ಸುರಕ್ಷತೆ ಕುರಿತು ಮುನ್ನಚ್ಚರಿಕೆಯಿಂದ ಇರುವಂತೆ ಸಂಬಂಧಿಸಿದ ಅಧಿಕಾರಿಗಳು ಸೂಚಿಸಬೇಕು ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.