ADVERTISEMENT

ರಂಗಭೂಮಿ ಕಲಾವಿದ ರಾಯಪ್ಪ ಹಸ್ಮಕಲ್‌ ಅವರಿಗೆ ನಾಟಕ ಅಕಾಡೆಮಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2024, 16:17 IST
Last Updated 8 ಆಗಸ್ಟ್ 2024, 16:17 IST
ರಾಯಪ್ಪ ಹಸ್ಮಕಲ್‌
ರಾಯಪ್ಪ ಹಸ್ಮಕಲ್‌   

ಮಂಜುನಾಥ ಎನ್‌ ಬಳ್ಳಾರಿ

ಕವಿತಾ: ಸಮೀಪದ ಇರಕಲ್‌ ಗ್ರಾಮದ ರಂಗಭೂಮಿ ಕಲಾವಿದ ರಾಯಪ್ಪ ಹಸ್ಮಕಲ್‌ ಅವರು ಕರ್ನಾಟಕ ನಾಟಕ ಅಕಾಡೆಮಿಯ 2022–23ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಕುರಿತು ಸರ್ಕಾರ ಬಿಡುಗಡೆ ಮಾಡಿದ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ರಾಯಚೂರು ಜಿಲ್ಲೆಯಿಂದ ರಾಯಪ್ಪ ಅವರ ಹೆಸರು ಪ್ರಕಟಿಸಲಾಗಿದೆ. ಕಳೆದ ನಾಲ್ಕು ದಶಕಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿರುವ ರಾಯಪ್ಪ ಅವರು ರಂಗಭೂಮಿ ಕಲಾವಿದ ರಾಮರಾವ್‌ ದೇಸಾಯಿ ಅವರ ಪ್ರೇರಣೆಯಿಂದ ಪಿಯುಸಿ ಕಲಿಯುತ್ತಿರುವಾಗಲೇ ರಂಗಭೂಮಿ ಸೆಳೆತಕ್ಕೆ ಒಳಗಾದವರು.

ADVERTISEMENT

1974ರಲ್ಲಿ ಹಾಲಾಪುರದ ರಾಮರಾವ್‌ ದೇಸಾಯಿ ಅವರ ನಾಟಕ ಕಂಪನಿ ಹುಬ್ಬಳ್ಳಿಯಲ್ಲಿ ಹಾಕಿದ ರಂಗಸಜ್ಜಿಕೆಯಲ್ಲಿ ‘ಗೌಡ್ರಗದ್ಲ’ ಸಾಮಾಜಿಕ ನಾಟಕದಲ್ಲಿ ಮಲ್ಲೇಶಿ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ರಂಗಭೂಮಿ ಪ್ರವೇಶಿಸಿದ ಅವರು ಧುತ್ತರಗಿ ನಾಟಕ ಕಂಪನಿಯಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಚಿತ್ತರಗಿ ನಾಟಕ ಕಂಪನಿಯಲ್ಲಿ ಇಪ್ಪತ್ತು ವರ್ಷ ಮತ್ತು ಪ್ರೇಮಾ ಗುಳೇದಗುಡ್ಡ ಅವರ ಆಶಾಪುರ ನಾಟಕ ಕಂಪನಿಯಲ್ಲಿ ಹತ್ತು ವರ್ಷ ಸೇರಿದಂತೆ ವಿವಿಧ ಕಂಪನಿಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ.

ಎಚ್ಚರ ತಂಗಿ ಎಚ್ಚರ, ತಾಯಿ ಕರುಳು, ಎಂತ ಮೋಜಿನ ಕುದುರೆ, ಕಿವುಡ ಮಾಡಿದ ಕಿತಾಪತಿ, ಆಯ ನೋಡಿ ಪಾಯ ಹಾಕು ತೂಕದ ಹೆಣ್ಣು ಸೇರಿದಂತೆ ಅನೇಕ ನಾಟಕಗಳಲ್ಲಿ ಹಾಸ್ಯ ಕಲಾವಿದರಾಗಿ ಅವರು ಪ್ರದರ್ಶಿಸಿದ ಕಲೆಯನ್ನು ಜನರು ಈಗಲೂ ಮೆಲುಕು ಹಾಕುತ್ತಾರೆ.

ಸದ್ಯ ಅವರಿಗೆ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಸಿಕ್ಕಿರುವುದು ಗ್ರಾಮಸ್ಥರಲ್ಲಿ ಸಂತಸ ಉಂಟು ಮಾಡಿದೆ. ಕುಗ್ರಾಮದ ಒಬ್ಬ ಕಲಾವಿದನನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಕಲಾವಿದನಿಗೆ ಸಂದ ಗೌರವ ಎಂದು ಇರಕಲ್‌ ಗ್ರಾಮದ ಕರಿಯಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.