ADVERTISEMENT

ಜಿಲ್ಲೆಯನ್ನು ಬಾಲ್ಯವಿವಾಹ, ಬಹಿರ್ದೆಸೆ ಮುಕ್ತವಾಗಿಸಿ: ಶ್ಯಾಮಲ್ ಎಸ್.ಕುಂದರ್ ಸಭೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 14:34 IST
Last Updated 22 ಜುಲೈ 2021, 14:34 IST
ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲ್ ಎಸ್.ಕುಂದರ್ ಅವರು ಗುರುವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು
ರಾಯಚೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲ್ ಎಸ್.ಕುಂದರ್ ಅವರು ಗುರುವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು   

ರಾಯಚೂರು: ಜಿಲ್ಲೆಯನ್ನು ಅನಿಷ್ಟ ಪದ್ಧತಿಗಳಾದ ಬಾಲ್ಯ ವಿವಾಹ, ಹಾಗೂ ಬಯಲು ಬಹಿರ್ದೆಸೆ ಮುಕ್ತವನ್ನಾಗಿಸಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲ್ ಎಸ್.ಕುಂದರ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹಿಳೆಯರು ಬಹಿರ್ದೆಸೆಗೆ ತೆರಳದೆ ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವದಕ್ಕೆ ಅಧಿಕಾರಿಗಳು ಪ್ರೇರಿಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ದೇಶದಲ್ಲಿ ಮಹಿಳೆಯರು ಗೌರವವಯುತ ಜೀವನ ನಡೆಸಲು ಆಯೋಗವು ಎಲ್ಲ ರೀತಿಯಿಂದಲೂ ಸಹಕಾರ ಮಾಡುತ್ತಿದೆ. ದೌರ್ಜನ್ಯ, ಅತ್ಯಾಚಾರ ಅಂತಹ ಘಟನೆಗಳು ವಿರುದ್ದ ಧ್ವನಿ ಎತ್ತಲಿದೆ ಎಂದರು.

ADVERTISEMENT

ಮಹಿಳೆಯರಿಗೆ ಕಾನೂನಿನ ಅರಿವು ಮೂಡಿಸಬೇಕು. ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ಯಾವುದೇ ರೀತಿಯ ದೌರ್ಜನ್ಯದಂತಹ ಅಪರಾಧ ಪ್ರಕರಣಗಳು ನಡೆಯದಂತೆ ನಿಗಾವಹಿಸಬೇಕು. ಮಹಿಳೆಯರು ತಮ್ಮ ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಸರ್ಕಾರವು ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಜಿಲ್ಲೆಯನ್ನು ಶೌಚಾಲಯ ಮುಕ್ತವನ್ನಾಗಿಸಲು ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ಹೇಳಿದರು.

ನಿರ್ಮಾಣ ಮಾಡಿರುವ ಶೌಚಾಲಯ ಬಳಕೆ ಮಾಡುವ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಬೇಕು. ರಾಯಚೂರಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ನಿರ್ಮಾಣ ಮಾಡಿಲ್ಲ, ಇದರಿಂದ ಜನರು ಬಹಿರ್ದೆಸೆಗೆ ಹೊಗುತ್ತಿದ್ದಾರೆ. ಬೇರೆ ಜಿಲ್ಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಿ ಉಪಯೋಗಿಸಲು ಜಾಗೃತಿ ಮೂಡಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್‌ ಮಾತನಾಡಿ, ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಜನರು ಸರಿಯಾಗಿ ಉಪಯೋಗ ಮಾಡುತ್ತಿಲ್ಲ, ಈ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಡದಲ್ಲಿ ಸಮನ್ವಯ ಸಮಿತಿ ರಚನೆ ಮಾಡಿ ಮೇಲುಸ್ತುವಾರಿ ಮಾಡಲು ಸೂಚಿಸಲಾಗಿದೆ. ಶೌಚಾಲಯ ಬಳಕೆ ಮಾಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್.ದುರಗೇಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಡೆಯದಂತೆ ತಡೆಯಲು ಅಧಿಕಾರಿಗಳು ಕ್ರೀಯಾ ಶೀಲರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇತ್ತೀಚಿಗೆ ಸಿಂಧನೂರು ತಾಲ್ಲೂಕಿನ ಆರ್.ಎಚ್. ಕ್ಯಾಂಪ್‌ನಲ್ಲಿ ಬಾಂಗ್ಲದೇಶದವರೊಂದಿಗೆ ಬಾಲ್ಯ ವಿವಾಹ ನಡೆಯುತ್ತಿರುವುದನ್ನು ತಡೆಯಲಾಗಿದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವೀರನಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‌ ನಿಕ್ಕಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.