ADVERTISEMENT

‘ನವಲಕಲ್ಲು ಗ್ರಾ.ಪಂ ಅವ್ಯವಹಾರ: ತನಿಖಾ ವರದಿ ಸಲ್ಲಿಕೆಗೆ ಹಿಂದೇಟು’

ಎಸ್ಎಫ್ಐ ತಾಲ್ಲೂಕು ಘಟಕದ ಅಧ್ಯಕ್ಷ ಚಿದಾನಂದ ಕರಿಗೂಳಿ ಆರೋಪ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 4:25 IST
Last Updated 25 ನವೆಂಬರ್ 2022, 4:25 IST
ಚಿದಾನಂದ ಕರಿಗೂಳಿ
ಚಿದಾನಂದ ಕರಿಗೂಳಿ   

ಸಿರವಾರ: ತಾಲ್ಲೂಕಿನ ನವಲಕಲ್ಲು ಗ್ರಾಮ ಪಂಚಾಯಿತಿಯಲ್ಲಿ 2020-21 ಮತ್ತು 2022-2023ನೇ ಸಾಲಿನ 14 ಮತ್ತು 15ನೇ ಹಣಕಾಸು ಯೋಜನೆಯ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವ ಕುರಿತು ಹಲವಾರು ಬಾರಿ ತಾ.ಪಂ ಇಒ ಅವರಿಗೆ ಮನವರಿಕೆ ಮಾಡಿದರೂ ತನಿಖೆಗೆ ವಿಳಂಬ ಮಾಡಲಾಗುತ್ತಿದೆ ಎಂದು ಎಸ್ಎಫ್ಐ ತಾಲ್ಲೂಕು ಘಟಕದ ಅಧ್ಯಕ್ಷ ಚಿದಾನಂದ ಕರಿಗೂಳಿ ಆರೋಪಿಸಿದ್ದಾರೆ.

ಸೆ.22 ರಂದು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಈ ಕುರಿತು ಎಸ್ಎಫ್ಐ ಮತ್ತು ಡಿವೈಎಫ್ಐ ಸಂಘಟನೆಯು ದೂರು ಸಲ್ಲಿಸಲಾಗಿತ್ತು.

ದೂರಿಗೆ ಸ್ಪಂದಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಅವರ ಉಲ್ಲೇಖಿತ ದೂರಿನ ಅನ್ವಯ ನವಲಕಲ್ಲು ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಹಣ ದುರ್ಬಳಕೆಯನ್ನು ಸಹಾಯಕ ನಿರ್ದೇಶಕರು ತನಿಖೆ ಕೈಗೊಂಡಿದ್ದು, ಪಂಚಾಯಿತಿ ಅಧಿಕಾರಿಗಳು ದಾಖಲೆಗಳನ್ನು ಒದಗಿಸಿಲ್ಲ ಎಂದು ತನಿಖಾ ವರದಿ ಸಲ್ಲಿಸಿದ್ದಾರೆ. ದೂರಿನ ಅಂಶಗಳ ಬಗ್ಗೆ ನಿಯಮಾನುಸಾರ 15 ದಿನಗಳ ಒಳಗೆ ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಿದರೂ ಸಿರವಾರ ತಾಲ್ಲೂಕು ಪಂಚಾಯಿತಿ ಇಒ ಅವರು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ. ಇದರ ಹಿಂದೆ ಪಿಡಿಒ ಮತ್ತು ಸಂಬಂಧಿಸಿದ ಜನಪ್ರತಿನಿಧಿಗಳನ್ನು ಬಚಾವ್ ಮಾಡುವ ಮೂಲಕ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ದೂರಿದ್ದಾರೆ.

ADVERTISEMENT

ನವಲಕಲ್ಲು ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಅಧ್ಯಕ್ಷರ ಮೇಲೆ ಭ್ರಷ್ಟಾಚಾರದ ಆರೋಪದಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ತಾಲ್ಲೂಕು ಪಂಚಾಯಿತಿ ಕಚೇರಿಯ ಮುಂದೆ ಧರಣಿ ಕೈಗೊಳ್ಳಲಾಗುವುದು ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.