ADVERTISEMENT

ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ: ಅಮರೇಶ್ವರ ನಾಯಕ

ಸಂಭ್ರಮದೊಂದಿಗೆ ಆರಂಭವಾದ ರಾಯಚೂರು ಮುಂಗಾರು ಸಾಂಸ್ಕೃತಿಕ ಹಬ್ಬ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 13:33 IST
Last Updated 16 ಜೂನ್ 2019, 13:33 IST
ರಾಯಚೂರಿನಲ್ಲಿ ಭಾನುವಾರದಿಂದ ಆರಂಭವಾದ ಮುಂಗಾರು ಉತ್ಸವ ಸಾಂಸ್ಕೃತಿಕ ಹಬ್ಬವನ್ನು ಸಂಸದ ರಾಜಾ ಅಮರೇಶ್ವರ ನಾಯಕ ಉದ್ಘಾಟಿಸಿ ಮಾತನಾಡಿದರು
ರಾಯಚೂರಿನಲ್ಲಿ ಭಾನುವಾರದಿಂದ ಆರಂಭವಾದ ಮುಂಗಾರು ಉತ್ಸವ ಸಾಂಸ್ಕೃತಿಕ ಹಬ್ಬವನ್ನು ಸಂಸದ ರಾಜಾ ಅಮರೇಶ್ವರ ನಾಯಕ ಉದ್ಘಾಟಿಸಿ ಮಾತನಾಡಿದರು   

ರಾಯಚೂರು: ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುವುದಕ್ಕೆ ಬಿಡಬಾರದು, ಅವುಗಳನ್ನು ಉಳಿಸಿ ಪ್ರೋತ್ಸಾಹಿಸುವ ಕೆಲಸ ಮಾಡುವುದು ತುಂಬಾ ಅಗತ್ಯವಾಗಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.

ನಗರದ ರಾಜೇಂದ್ರ ಗಂಜ್‌ ಆವರಣದಲ್ಲಿ ಮುನ್ನೂರು ಕಾಪು ಸಮಾಜದಿಂದ ಆಯೋಜಿಸಿರುವ ಮೂರು ದಿನಗಳ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಜೀವನ ಶೈಲಿಯ ಪ್ರಭಾವದಿಂದ ದೇಶಿಯತೆ ಮಾಯವಾಗುತ್ತಿದೆ. ಅದರೊಂದಿಗೆ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿವೆ ಎಂದರು.

ADVERTISEMENT

ಮುನ್ನೂರುಕಾಪು ಸಮಾಜವು ಕಳೆದ 19 ವರ್ಷಗಳಿಂದ ಈ ಸಾಂಸ್ಕೃತಿಕ ಹಬ್ಬ ಆಯೋಜಿಸುತ್ತಿರುವುದು ವಿಶೇಷವಾಗಿದೆ. ಗ್ರಾಮೀಣ ಭಾಗದ ಯುವಕರು ಕ್ರೀಡೆಗಳಲ್ಲಿ ಸಕ್ರಿಯತೆ ತೋರಿಸಬೇಕು ಹಾಗೂ ಭಾಗವಹಿಸಬೇಕು ಎಂದು ತಿಳಿಸಿದರು.

ಮುಂಗಾರು ಸಾಂಸ್ಕೃತಿಕ ಉತ್ಸವದ ಮೂಲಕ ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಮಳೆಯಾಗಲಿ ಎನ್ನುವ ಆಶಾಭಾವ ಎಲ್ಲರಲ್ಲೂ ಇದೆ. ಸತತ ಬರಗಾಲ ಪರಿಸ್ಥಿತಿ ಇರುವುದರಿಂದ ರೈತರು ನಿರಾಸೆಗೀಡಾಗಿ ಮುಗಿಲ ಕಡೆಗೆ ಮುಖ ಮಾಡುವಂತಾಗಿದೆ. ಈ ವರ್ಷವಾದರೂ ಉತ್ತಮ ರೀತಿಯಲ್ಲಿ ಮಳೆ,ಬೆಳೆಯಾಗಲಿದೆ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಶಾಸಕ ಬಸನಗೌಡ ದದ್ದಲ ಮಾತನಾಡಿ, ನಾಡಿನಲ್ಲಿ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡು ಹೋಗುವುದಕ್ಕಾಗಿ ಮುನ್ನೂರು ಕಾಪು ಸಮಾಜವು ಅಭಿನಂದನೀಯ ಕಾರ್ಯ ಮಾಡುತ್ತಿದೆ. ಪ್ರತಿ ವರ್ಷವೂ ರಾಯಚೂರು ಸಾಂಸ್ಕೃತಿಕ ಉತ್ಸವ ಎಲ್ಲರನ್ನು ಸೆಳೆಯುತ್ತಿದೆ. ಗ್ರಾಮೀಣ ಜನರು ಹೆಚ್ಚು ಹೆಚ್ಚು ಭಾಗವಹಿಸಬೇಕು ಎಂದರು.

ಗಮನಾರ್ಹವೆಂದರೆ ಸರ್ಕಾರದಿಂದ ಯಾವುದೇ ಅನುದಾನವನ್ನು ಬಯಸದೆ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಮುನ್ನೂರುಕಾಪು ಸಮಾಜದ ಮುಖಂಡರಿಂದ ದೇಣಿಗೆ ಸಂಗ್ರಹಿಸಿ ಇಂತಹ ಒಳ್ಳೆಯ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ನಿಜಕ್ಕೂ ಮಾದರಿಯಾಗಿದೆ ಎಂದು ತಿಳಿಸಿದರು.

ಬಿಜೆಪಿ ಮುಖಂಡ ಎನ್‌.ಶಂಕ್ರೆಪ್ಪ ಮಾತನಾಡಿ, ಮೈಸೂರು ದಸರಾ ಮಾದರಿಯಲ್ಲಿ ರಾಯಚೂರಿನಲ್ಲಿ ಮುಂಗಾರು ಸಾಂಸ್ಕೃತಿಕ ಉತ್ಸವವು ಪ್ರತಿ ವರ್ಷ ಗಮನ ಸೆಳೆಯುತ್ತಿದೆ. ಇದು ಹೀಗೆಯೇ ಮುಂದುವರಿಯಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಮುನ್ನೂರು ಕಾಪು ಸಮಾಜದ ಮುಖಂಡ ಎ.ಪಾಪಾರೆಡ್ಡಿ ಸ್ವಾಗತಿಸಿದರು. ರಾಚೋಟಿ ಸೋಮವಾರ ಪೇಟೆಯ ಹಿರೇಮಠ ಸ್ವಾಮೀಜಿ, ಬೃಂಗಿಮಠದ ಸ್ವಾಮೀಜಿ ಅವರು ಸಾನಿಧ್ಯ ವಹಿಸಿದ್ದರು.

ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಯು. ದೊಡ್ಡಮಲ್ಲೇಶಪ್ಪ, ಪುಂಡ್ಲ ನರಸರೆಡ್ಡಿ, ರಾಳ್ಳ ತಿಮ್ಮಾರೆಡ್ಡಿ, ಬಿ.ತಿಮ್ಮಾರೆಡ್ಡಿ, ಎನ್‌.ಶ್ರೀನಿವಾಸರೆಡ್ಡಿ, ಎಸ್‌. ವೆಂಕಟರೆಡ್ಡಿ, ಗುಡ್ಸಿ ನರಸರೆಡ್ಡಿ, ಜಿ. ವೆಂಕಟರೆಡ್ಡಿ, ಜಿ. ಶೇಖರರೆಡ್ಡಿ ಇದ್ದರು.

**
ಸುರಪುರ ಎತ್ತುಗಳಿಗೆ ಪ್ರಥಮ ಬಹುಮಾನ

ಮುನ್ನೂರುಕಾಪು ಸಮಾಜದಿಂದ ಎಪಿಎಂಸಿ ಆವರಣದಲ್ಲಿ ಆಯೋಜಿಸಿರುವ ರಾಯಚೂರು ಸಾಂಸ್ಕೃತಿಕ ಹಬ್ಬದಲ್ಲಿ ಮೊದಲ ದಿನ ನಡೆದ ಒಂದು ಟನ್‌ ಕಲ್ಲಿನ ಭಾರ ಎಳೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಐದು ಬಹುಮಾನಗಳನ್ನು ವಿತರಿಸಲಾಯಿತು. ಸ್ಪರ್ಧೆಗೆ 15 ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು.

ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಅಬ್ಬಲಿ ಅಯ್ಯಳಪ್ಪ ಮಂಚಲಪೂರು ಅವರ ಎತ್ತುಗಳು 2,717.೦9 ಅಡಿ ದೂರ ಕಲ್ಲು ಎಳೆದು ಪ್ರಥಮ ₹45 ಸಾವಿರ ನಗದು ಬಹುಮಾನಕ್ಕೆ ಪಾತ್ರವಾದವು. ರಾಯಚೂರಿನ ಮಕ್ತಲಪೇಟೆಯಗಂಗನ್ನಗಾರು ಪರಿಟಾಲ ರವಿರೆಡ್ಡಿ ಅವರ ಎತ್ತುಗಳು 2,491.೦7 ಅಡಿ ಕಲ್ಲ ಎಳೆದು ಎರಡನೇ ₹ 35 ಸಾವಿರ ನಗದು ಬಹುಮಾನಕ್ಕೆ ಪಡೆದವು. ರಾಯಚೂರಿನ ಪಲ್ಕಂದೊಡ್ಡಿಯ ಖಾಜಾ ಹುಸೇನ್ ಅವರ ಎತ್ತುಗಳು 2,411.04 ಅಡಿ ಎಳೆದು ಮೂರನೇ ₹25 ಸಾವಿರ ಬಹುಮಾನ ತಂದುಕೊಟ್ಟವು. ದೇವದುರ್ಗ ತಾಲ್ಲೂಕಿನ ರಾಮದುರ್ಗದ ವೆಂಕಟೇಶ ನಾಯಕ್ ಅವರ ಎತ್ತುಗಳು 2,409 ಅಡಿ ಎಳೆದು ನಾಲ್ಕನೇ ಬಹುಮಾನ ₹ 15 ಸಾವಿರ ಹಾಗೂ ರಾಯಚೂರಿನ ನೀಲಗಲ್‌ ಗ್ರಾಮದ ವಿ. ಸುನೀಲ್ ಕುಮಾರ ನೀಲಗಲ್ ಅವರ ಎತ್ತುಗಳ 2,400 ಅಡಿ ಎಳೆದು ಐದನೇ ಬಹುಮಾನ ₹10 ಸಾವಿರ ಪಡೆದವು.

ಮೊದಲ ದಿನದಂದು ರಾಜ್ಯದ ಎತ್ತುಗಳು ಮಾತ್ರ ಭಾಗವಹಿಸಲು ಅವಕಾಶವಿತ್ತು. ಒಟ್ಟು 11 ಜೋಟಿ ಎತ್ತುಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.