ADVERTISEMENT

ಶರಣರ ಚಿಂತನೆಗಳ ಅರಿವು ಅಗತ್ಯ: ಸದಾಶಿವ ಸ್ವಾಮೀಜಿ

ಮಾನ್ವಿ: ಪ್ರಭುಲಿಂಗ ಲೀಲೆ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 7:06 IST
Last Updated 12 ಫೆಬ್ರುವರಿ 2026, 7:06 IST
ಮಾನ್ವಿ ಪಟ್ಟಣದಲ್ಲಿ ಮಂಗಳವಾರ ಪ್ರಭುಲಿಂಗ ಲೀಲೆ ಪ್ರವಚನ ಕಾರ್ಯಕ್ರಮಕ್ಕೆ ರುದ್ರಮುನೀಶ್ವರ ಮಠದ ಸದಾಶಿವ ಸ್ವಾಮೀಜಿ ಚಾಲನೆ ನೀಡಿದರು
ಮಾನ್ವಿ ಪಟ್ಟಣದಲ್ಲಿ ಮಂಗಳವಾರ ಪ್ರಭುಲಿಂಗ ಲೀಲೆ ಪ್ರವಚನ ಕಾರ್ಯಕ್ರಮಕ್ಕೆ ರುದ್ರಮುನೀಶ್ವರ ಮಠದ ಸದಾಶಿವ ಸ್ವಾಮೀಜಿ ಚಾಲನೆ ನೀಡಿದರು   

ಮಾನ್ವಿ: ‘ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ, ನಮ್ಮ ಪರಂಪರೆ, ಬಸವಾದಿ ಶರಣರ ಚಿಂತನೆಗಳ ಬಗ್ಗೆ ತಿಳಿಸುವ ಮೂಲಕ ಅವರನ್ನು ಉತ್ತಮ ಮಾರ್ಗದಲ್ಲಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ’ ಎಂದು ಚೀಕಲಪರ್ವಿಯ ರುದ್ರಮುನೀಶ್ವರ ಮಠದ ಸದಾಶಿವ ಸ್ವಾಮೀಜಿ ಹೇಳಿದರು.

ಪಟ್ಟಣದ ಧ್ಯಾನ ಮಂದಿರದ ಆವರಣದಲ್ಲಿ ಕಲ್ಮಠದ ಗಾರಿಗೆ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಪ್ರಭುಲಿಂಗ ಲೀಲೆ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಪ್ರಥಮ ಶೂನ್ಯ ಪೀಠಾಧ್ಯಕ್ಷರಾಗಿ ಅಲ್ಲಮಪ್ರಭು ದೇವರು ಸಮಾಜದಲ್ಲಿನ ಎಲ್ಲಾ ಕಾಯಕ ಬಂಧುಗಳನ್ನು ಬಸವಣ್ಣನವರೊಂದಿಗೆ ಒಟ್ಟುಗೂಡಿಸಿ ಶರಣನಾಡಿನ ಪರಿಕಲ್ಪನೆ, ಕಾಯಕ, ದಾಸೋಹದ ಮಹತ್ವದ ಬಗ್ಗೆ ಜನಜಾಗೃತಿ ಮೂಡಿಸಿದರು’ ಎಂದರು.

ADVERTISEMENT

ರುದ್ರಯ್ಯಸ್ವಾಮಿ ಮದ್ಲಾಪುರ ಪ್ರಭುಲಿಂಗ ಲೀಲೆ ಕುರಿತು ಪ್ರವಚನ ನೀಡಿದರು. ನಾ.ಮ.ಜಗದೀಶ್ ಸಂಗೀತ ನೀಡಿದರು. ಸಿದ್ದಯ್ಯಸ್ವಾಮಿ ಮದ್ಲಾಪುರ್ ತಬಲಾ ಸಾಥ್ ನೀಡಿದರು.

ಮಾನ್ವಿಯ ಎಲ್.ಎಂ.ಜಿ.ಎಸ್ ಫ್ರೌಡಶಾಲೆಯ ವಿದ್ಯಾರ್ಥಿಗಳು ಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು.

ಕಲ್ಮಠದ ವಿರೂಪಾಕ್ಷ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ, ನೀಲಗಲ್ ಬೃಹನ್ಮಠದ ಅಭಿನವ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಶಂಕರಯ್ಯಸ್ವಾಮಿ ಸುವರ್ಣಗಿರಿಮಠ, ತಾಲ್ಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಹರಿಹರ ಪಾಟೀಲ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.