ADVERTISEMENT

ಗರ್ಭಿಣಿ ಸಾವು ಪ್ರಕರಣ |ಸರ್ಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ: ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 15:54 IST
Last Updated 9 ನವೆಂಬರ್ 2024, 15:54 IST
ಸಿಂಧನೂರಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಅಂಕುಶದೊಡ್ಡಿ ಗ್ರಾಮದ ಪರಶುರಾಮ ಶಹರ ಪೊಲೀಸ್ ಠಾಣೆಗೆ ದೂರು ನೀಡಿರುವ ಪ್ರತಿ
ಸಿಂಧನೂರಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಅಂಕುಶದೊಡ್ಡಿ ಗ್ರಾಮದ ಪರಶುರಾಮ ಶಹರ ಪೊಲೀಸ್ ಠಾಣೆಗೆ ದೂರು ನೀಡಿರುವ ಪ್ರತಿ   

ಸಿಂಧನೂರು: ಸಿಂಧನೂರಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಹೆರಿಗೆಗೆಂದು ದಾಖಲಾಗಿದ್ದ ಆರ್.ಎಚ್.ಕ್ಯಾಂಪ್-3ರ ಮಹಿಳೆ ಸಾವಿನ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅಂತದ್ದೇ ಪ್ರಕರಣ ಬೆಳಕಿಗೆ ಬಂದಿದೆ.

ಅಕ್ಟೋಬರ್ 30ರಂದು ಹೆರಿಗಾಗಿ ಸಿಂಧನೂರು ಆಸ್ಪತ್ರೆಗೆ ದಾಖಲಿಸಿದ್ದ ಮಸ್ಕಿ ತಾಲ್ಲೂಕಿನ ಅಂಕುಶದೊಡ್ಡಿ ಗ್ರಾಮದ ಮಹಿಳೆಯೊಬ್ಬರು ಹೆರಿಗೆ ನಂತರ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದು, ಇದಕ್ಕೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಏನಿದು ಪ್ರಕರಣ?: ಅ.30ರಂದು ರೇಣುಕಮ್ಮ ಬಸವರಾಜ ಅವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಿಸಲಾಗಿತ್ತು. ಹೆರಿಗೆಯ ನಂತರ ತೀವ್ರ ರಕ್ತಸ್ರಾವದಿಂದ ರೇಣುಕಮ್ಮ ಬಳಲಿದ್ದಾರೆಂದು ಹೇಳಲಾಗುತ್ತಿದೆ. ನಂತರ ಅವರನ್ನು ರಾಯಚೂರಿನ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿತ್ತು. ಅಕ್ಟೋಬರ್ 31ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ರೇಣುಕಮ್ಮ ಮೃತಪಟ್ಟಿದ್ದಾರೆ. ಈ ಸಾವಿಗೆ ತಾಲ್ಲೂಕು ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬದವರು ಆಪಾದಿಸಿದ್ದಾರೆ.

ADVERTISEMENT

ವೈದ್ಯರ ವಿರುದ್ಧ ಕೇಸ್ ದಾಖಲು: ಮೃತ ಮಹಿಳೆ ರೇಣುಕಮ್ಮಳ ಪತಿಯ ಸಹೋದರ ಪರುಶುರಾಮ ಮರಿಯಪ್ಪ ಅಂಕುಶದೊಡ್ಡಿ ಅವರು ನೀಡಿದ ದೂರಿನ ಮೇರೆಗೆ ಸಿಂಧನೂರು ಶಹರ ಪೊಲೀಸ್ ಠಾಣೆಯಲ್ಲಿ ಇಬ್ಬರು ವೈದ್ಯರ ವಿರುದ್ಧ ನವೆಂಬರ್ 2ರಂದು ದೂರು ದಾಖಲಾಗಿದೆ.

ಡಿಎಚ್‍ಒಗೆ ದೂರು: ರೇಣುಕಮ್ಮ ಅವರ ಸಾವಿಗೆ ಕಾರಣರಾದ ತಾಲ್ಲೂಕು ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಉನ್ನತ ತನಿಖೆ ಕೈಗೊಂಡು, ತನಿಖೆ ಆಧಾರದ ಮೇಲೆ ಅವರನ್ನು ಅಮಾನತು ಮಾಡಬೇಕು. ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಡಿಎಚ್‍ಒ ಡಾ.ಸುರೇಂದ್ರಬಾಬು ಅವರಿಗೆ ಪರಶುರಾಮ ನವೆಂಬರ್ 4ರಂದು ಲಿಖಿತ ರೂಪದಲ್ಲಿ ದೂರು ಸಲ್ಲಿಸಿದ್ದಾರೆ.

ದೂರಿನಲ್ಲಿ ಏನಿದೆ?: ‘ನಮ್ಮ ತಮ್ಮನಾದ ಬಸವರಾಜನ ಹೆಂಡತಿ ರೇಣುಕಮ್ಮ ಅವರನ್ನು ಹೆರಿಗೆಯ ಸಲುವಾಗಿ ಸಿಂಧನೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಸಿದ್ದು, ನಂತರ ಆಸ್ಪತ್ರೆಯ ಮೂವರು ವೈದ್ಯರು, ಸಿಬ್ಬಂದಿ ಹಣದ ಆಸೆಗಾಗಿ ಮತ್ತು ದುರುದ್ದೇಶದಿಂದ ಹೆರಿಗೆ ಮಾಡಲು ನಿರಾಕರಿಸಿದ್ದಾರೆ ಮತ್ತು ಹೊರಗಡೆ ಬೇರೆ ಆಸ್ಪತ್ರೆಗೆ ಹೋಗುವಂತೆ ಬಲವಂತ ಮಾಡಿದ್ದಾರೆ. ನಂತರ ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳಿಗೆ ಫೋನ್ ಮಾಡಿ ತಿಳಿಸಿದಾಗ ಅವರು ಬೇಕಾಬಿಟ್ಟಿ ಶಸ್ತ್ರಚಿಕಿತ್ಸೆ ನಡೆಸಿ ನಿರ್ಲಕ್ಷ್ಯವಹಿಸಿದ್ದಾರೆ. ನಮಗೆ ಆರೋಗ್ಯವಾಗಿ ಇದ್ದಾಳೆ ಎಂದು ಬೇಜವಾಬ್ದಾರಿ ಮಾಡಿದ್ದಾರೆ. ಹಬ್ಬದ ನೆಪ ಮಾಡಿ ಸರಿಯಾಗಿ ಚಿಕಿತ್ಸೆ ಕೊಡದೇ ತುಂಬಾ ರಕ್ತಸ್ರಾವ ಆಗುವುದನ್ನು ಕಂಡು ನಂತರ ತಮ್ಮ ಮೇಲೆ ಅಪವಾದ ಬರಬಾರದು ಎಂದು ಜಿಲ್ಲಾ ಆಸ್ಪತ್ರೆಗೆ ರೆಫರ್ ಮಾಡಿ ಸಾವಿಗೆ ಕಾರಣರಾಗಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.