ADVERTISEMENT

ಯಾವ ಕಥೆಯೂ ಸಣ್ಣದಲ್ಲ: ಬಾನು ಮುಷ್ತಾಕ್‌

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 2:38 IST
Last Updated 10 ಆಗಸ್ಟ್ 2025, 2:38 IST
<div class="paragraphs"><p> ಲೇಖಕಿ ಬಾನು ಮುಷ್ತಾಕ್‌</p></div>

ಲೇಖಕಿ ಬಾನು ಮುಷ್ತಾಕ್‌

   

ದೇವದುರ್ಗ: ‘ಯಾವ ಕಥೆಯೂ ಸಣ್ಣದಲ್ಲ. ಅನುಭವದ ವಸ್ತ್ರದಲ್ಲಿನ ಪ್ರತಿ ಎಳೆಯೂ ಇಡೀ ಕಥೆಯ ತೂಕವನ್ನು ಹೊಂದಿರುತ್ತದೆ’ ಎಂದು ಸಾಹಿತಿ ಬಾನು ಮುಷ್ತಾಕ್ ಹೇಳಿದರು.

ತಾಲ್ಲೂಕಿನ ಗಬ್ಬೂರಿನಲ್ಲಿ ಮಹಾಶೈವ ಧರ್ಮ ಪೀಠದ ವತಿಯಿಂದ ಕುಮಾರಸ್ವಾಮಿಯವರ 116ನೇ ಹುಟ್ಟುಹಬ್ಬದ ಅಂಗವಾಗಿ ನಡೆದ ಮಹಾಶಿವ ಗುರುಪೂರ್ಣಿಮೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ADVERTISEMENT

‘ನನ್ನ ಎದೆಯ ಹಣತೆ ಮುಸ್ಲಿಂ ಸಮುದಾಯದ ಬಾಲಕಿಯರು ಹಾಗೂ ಮಹಿಳೆಯರ ದೈನಂದಿನ ಬದುಕನ್ನು ಅನಾವರಣಗೊಳಿಸಿದೆ.  ಹೆಜ್ಜೆ ಮೂಡಿದ ಹಾದಿ, ಬೆಂಕಿ ಮಳೆ, ಎದೆಯ ಹಣತೆ, ಸಫೀರಾ, ಬಡವರ ಮಗಳು ಹೆಣ್ಣಲ್ಲ, ಇಬ್ಬನಿಯ ಕಾವು ಮತ್ತು ಒದ್ದೆ ಕಣ್ಣಿನ ಬಾಗಿನ ಪುಸ್ತಕಗಳನ್ನು ಯುವ ಜನರು ಹೆಚ್ಚು ಓದಬೇಕು’ ಎಂದರು.

‘ನಾನು ತಳ ಸಮುದಾಯಗಳ ವಾಸ್ತವಿಕ ಅಂಶಗಳನ್ನು ಕಥೆಗಳ ಮೂಲಕ ಜಗತ್ತಿಗೆ ಪರಿಚಯಿಸಿದ್ದೇನೆ. ದಕ್ಷಿಣ ಭಾರತದ ದ್ರಾವಿಡ ಭಾಷೆಗೆ ಬೂಕರ್ ಪ್ರಶಸ್ತಿ ಸಿಕ್ಕಿರುವುದು, ಮಹಿಳೆಯಾಗಿ ಪ್ರಶಸ್ತಿ ಪಡೆದಿರುವುದು ತೃಪ್ತಿ ನೀಡಿದೆ. ಮೊದಲ ಬಾರಿ ಸಣ್ಣ ಕಥಾ ಸಂಕಲನಕ್ಕೆ ಬೂಕರ್ ಪ್ರಶಸ್ತಿ ಲಭಿಸಿರುವು
ದಕ್ಕೆ ಜಗತ್ತೇ ಅಚ್ಚರಿಪಟ್ಟಿದೆ. ಬೂಕರ್ ಪ್ರಶಸ್ತಿ ಪಡೆದ ಬಹುತೇಕ ಭಾರತೀಯರು ವಿದೇಶದಲ್ಲಿ ನೆಲೆಸಿದ್ದಾರೆ. ಗೀತಾಂಜಲಿ ಮತ್ತು ನಾನು ಭಾರತದಲ್ಲಿ ವಾಸವಾಗಿ ರೂರಲ್ ಟು ಗ್ಲೋಬಲ್‌ವರೆಗೆ ಪ್ರಶಸ್ತಿ ಪಡೆದವರು’ ಎಂದು ಹೇಳಿದರು.

‘ನಾನು ನಿಷ್ಠುರವಾದಿ, ಜನ ನನ್ನನ್ನು ಗುರುತಿಸಿದ್ದಾರೆ. ತಿರಸ್ಕರಿಸಿದ್ದಾರೆ. ಭಾರತದ ವ್ಯವಸ್ಥೆ ಭ್ರಷ್ಟಾಚಾರದಿಂದ ಕಲುಷಿತಗೊಂಡಿದೆ. ಇದು ಸಾಹಿತಿಗಳ ಮೇಲೆಯೂ ಪರಿಣಾಮ ಉಂಟು ಮಾಡಿದೆ. ಕೆಎಎಸ್ ಹುದ್ದೆಗೆ ಆಯ್ಕೆಯಾದ ನನ್ನ ಮಗಳು ವ್ಯವಸ್ಥೆಗೆ ಹೊಂದಿಕೊಳ್ಳಲಾಗದೆ ರಾಜೀನಾಮೆ ನೀಡಿ ಬಾಂಬೆ ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ಆರಂಭಿಸಿದ್ದಾಳೆ’ ಎಂದರು.

‘ಭ್ರಷ್ಟಾಚಾರ ಮಾಡುವ ಅಧಿಕಾರಿಗಳ ಮಧ್ಯೆ ಮುಕ್ಕಣ್ಣ ಕರಿಗಾರ ಅವರ ಧರ್ಮಪೀಠ ಜನಪರ ಕಾಳಜಿ ವಹಿಸಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

ಸಾಹಿತಿ ಬಾನು ಮುಷ್ತಾಕ್ ಅವರಿಗೆ ‘ಮಹಾತಪಸ್ವಿ ಶ್ರೀಕುಮಾರಸ್ವಾಮಿ ಸಾಹಿತ್ಯ ರತ್ನ ಪ್ರಶಸ್ತಿ’ ಮತ್ತು ‘ಪ್ರಜಾವಾಣಿ’ಯ ಹಿರಿಯ ವರದಿಗಾರ ಶಶಿಕಾಂತ್‌ ಎಸ್‌.ಶೆಂಬೆಳ್ಳಿ ಅವರಿಗೆ ‘ಮಹಾತಪಸ್ವಿ ಶ್ರೀಕುಮಾರಸ್ವಾಮಿ ಪತ್ರಿಕಾ ಭೂಷಣ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಮಹಾಶೈವ ಧರ್ಮ ಪೀಠದ ಅಧ್ಯಕ್ಷ ಮುಕ್ಕಣ್ಣ ಕರಿಗಾರ, ಮಾಜಿ ಸಚಿವ ಕೆ.ಶಿವನಗೌಡ ನಾಯಕ, ಸುಲ್ತಾನಪುರ ಗಂಗಾಧರ ಆಶ್ರಮದ ಅಧ್ಯಕ್ಷ ಶರಣಗೌಡ, ಹಿರಿಯ ಸಾಹಿತಿ ಶಾಶ್ವತ ಸ್ವಾಮಿ ಮುಕ್ಕುಂದಿಮಠ, ಸಹಾಯಕ ಪ್ರಾಧ್ಯಾಪಕ ವಿಶಾಲ್ ಎಸ್.ನಿಂಬಾಳ, ಖಾಜಯ್ಯಗೌಡ, ಪತ್ರಕರ್ತ ಬಸವರಾಜ ಭೋಗಾವತಿ, ಬಸವರಾಜ ಸಿನ್ನೂರ, ಎನ್.ಎಚ್.ಪೂಜಾರ, ಗಂಗಾಧರ ಮೂರ್ತಿ, ಷಣ್ಮುಖ ಹೂಗಾರ, ಬಸವಲಿಂಗ ಕರಿಗಾರ, ಬಸವರಾಜ ಕರಿಗಾರ ಮತ್ತು ಮಹಾಶೈವ ಧರ್ಮ ಪೀಠದ ಭಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.