ADVERTISEMENT

ವ್ಯಾಪಾರಸ್ಥರ ಸ್ವಯಂಪ್ರೇರಿತ ಬೆಂಬಲ; ಸಿರವಾರ ಬಂದ್ ಭಾಗಶಃ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2023, 7:35 IST
Last Updated 23 ಆಗಸ್ಟ್ 2023, 7:35 IST
ಸಿರವಾರದಲ್ಲಿ ಮಂಗಳವಾರ ತುಂಗಭದ್ರಾ ಎಡದಂಡೆ ನಾಲೆಯ ಕೊನೆಯ ಭಾಗಕ್ಕೆ ಸಮರ್ಪಕ ನೀರಿಗಾಗಿ ಒತ್ತಾಯಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದ ರೈತರು
ಸಿರವಾರದಲ್ಲಿ ಮಂಗಳವಾರ ತುಂಗಭದ್ರಾ ಎಡದಂಡೆ ನಾಲೆಯ ಕೊನೆಯ ಭಾಗಕ್ಕೆ ಸಮರ್ಪಕ ನೀರಿಗಾಗಿ ಒತ್ತಾಯಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದ ರೈತರು   

ಸಿರವಾರ: ತುಂಗಭದ್ರಾ ಎಡದಂಡೆ ನಾಲೆಯ ಕೊನೆಯ ಭಾಗದ ಕಾಲುವೆಗಳಿಗೆ ಸಮರ್ಪಕ ನೀರು ಹರಿಸಲು ಶಾಶ್ವತ ಪರಿಹಾರ ನೀಡುವಂತೆ ಒತ್ತಾಯಿಸಿ ಮಂಗಳವಾರ ತಾಲ್ಲೂಕಿನ ರೈತರು ಕರೆ ನೀಡಿದ್ದ ಸಿರವಾರ ಬಂದ್ ಭಾಗಶಃ ಯಶಸ್ವಿಯಾಯಿತು.

ಪಟ್ಟಣದ ನೀರಾವರಿ ಇಲಾಖೆಯ ಆವರಣದಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಸೇರಿದ್ದ ಸಾವಿರಾರು ರೈತರು ಸಮರ್ಪಕ ನೀರು ಹರಿಸುವಲ್ಲಿ ವಿಫಲವಾಗಿರುವ ಅಧಿಕಾರಿಗಳು ಮತ್ತು ಸರ್ಕಾರ ವಿರುದ್ಧ ಘೋಷಣೆ ಕೂಗಿದರು.

ರೈತ ಮುಖಂಡ ಜೆ.ಶರಣಪ್ಪಗೌಡ ಅವರು ಮಾತನಾಡಿ, ಹಲವಾರು ವರ್ಷಗಳಿಂದಲೂ ತುಂಗಭದ್ರಾ ಎಡದಂಡೆಯ ಕೆಳಭಾಗದ ಕಾಲುವೆಗೆ ಸಮರ್ಪಕವಾಗಿ ನೀರು ಒದಗಿಸದೇ ಅನ್ಯಾಯ ಮಾಡಲಾಗುತ್ತಿದೆ. ಮೇಲ್ಭಾಗದ ಅಕ್ರಮ ನೀರಾವರಿ, ರಾಜಕೀಯ ಮುಖಂಡರ ಹಿತಾಸಕ್ತಿಯ ಕೊರತೆಯಿಂದ ರೈತ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರ್.ಎಸ್.ಪಾಟೀಲ್ ನಾಗಡದಿನ್ನಿ ಮಾತನಾಡಿ, ಅಧಿಕಾರಿಗಳು ಮುಖ್ಯಕಾಲುವೆಗಳ ಮೇಲೆ ನೀರಿನ ಗೇಜಿನ ಅಳತೆಯಲ್ಲಿ ಅಕ್ರಮವಿದ್ದು, ಮೈಲ್ 69 ರಲ್ಲಿ 9 ಫೀಟ್ ನೀರಿನ ಗೇಜ್ ಅಳತೆಯಲ್ಲಿ 10 ಫೀಟ್ ಇದೆ ಎಂದು ತೋರಿಸಲಾಗಿದೆ ಎಂದು ಆರೋಪಿಸಿದರು.

ADVERTISEMENT

69ರ ಮೈಲ್ ನಲ್ಲಿ 1 ಫೀಟ್ ನೀರು ಕಡಿಮೆಯಾದರೆ ಸುಮಾರು 450 ಕ್ಯೂಸೆಕ್ಸ್ ನೀರು ಕಡಿಮೆಯಾಗುತ್ತದೆ. ಇದೇ ರೀತಿ ಅಧಿಕಾರಿಗಳ ತಪ್ಪು ಮಾಹಿತಿಗಳಿಂದ ನೀರಿನ ಕೊರತೆ ಅನುಭವಿಸುವಂತಾಗಿದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಮಾತನಾಡಿ, ಮುಖ್ಯ ಕಾಲುವೆಗೆ ರಂಧ್ರಕೊರೆದು ಪೈಪ್‌ಲೈನ್ ಅಳವಡಿಸಿ, ಮೋಟಾರ್‌ಗಳಿಗೆ ಸೆಲ್‌ಫೋನ್ ಅಳವಡಿಸಿ ಹಾಗೂ ಪಂಪ್‌ಸೆಟ್‌ಗಳನ್ನು ಅಳವಡಿಸಿ ನಮಗೆ ಬರಬೇಕಾದ ನೀರು ಮಧ್ಯದಲ್ಲಿ ಕಳ್ಳತನ ಮಾಡಿ ಮುಖ್ಯ ಕಾಲುವೆಯ ಭಾಗದಲ್ಲಿ ಸುಮಾರು ಒಂದೂವರೆ ಲಕ್ಷದಿಂದ ಎರಡು ಲಕ್ಷ ಎಕರೆ ಅಕ್ರಮ ನೀರಾವರಿ ಮಾಡಲಾಗುತ್ತಿದೆ. ಇದನ್ನು ತಕ್ಷಣ ತಡೆದು ಅಧಿಕೃತ ಪ್ರದೇಶಕ್ಕೆ ನೀರು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಅಮರೇಶ ಪನ್ನೂರ ಚಾಗಭಾವಿ, ಮಾಜಿ ಶಾಸಕ ಗಂಗಾಧರ ನಾಯಕ, ಶಂಕರಗೌಡ ಹರವಿ, ಜೆ.ಶರಣಪ್ಪಗೌಡ, ಚುಕ್ಕಿ ಸೂಗಪ್ಪ ಸಾಹುಕಾರ, ಎನ್.ಉದಯಕುಮಾರ, ಸಿದ್ಧಲಿಂಗಪ್ಪ ಗೌಡ ನಾಗಡದಿನ್ನಿ ಮಾತನಾಡಿ ನೀರಿನ ವಿಫಲ ನಿರ್ವಹಣೆಗಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಶಾಂತವಾಗಿ ನಡೆದಿದ್ದ ರೈತರ ಹೋರಾಟದ ಸ್ಥಳಕ್ಕೆ ಮದ್ಯಾಹ್ನ 2 ಗಂಟೆಯಾದರೂ ಅಧಿಕಾರಿಗಳು ಬಾರದ ಕಾರಣ ಆಕ್ರೋಶಗೊಂಡ ರೈತರು ರಸ್ತೆಗಿಳಿದು ಸಂಚಾರ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಸಿರವಾರದಲ್ಲಿ ಮಂಗಳವಾರ ಮುಚ್ಚಿದ್ದ ಅಂಗಡಿ ಮುಗ್ಗಟ್ಟುಗಳು

ಉಪವಿಭಾಗಾಧಿಕಾರಿ ಭೇಟಿ: ಪ್ರತಿಭಟನಾ ಸ್ಥಳಕ್ಕೆ ತಡವಾಗಿ  ಬಂದ ಉಪವಿಭಾಗಾಧಿಕಾರಿ ಮಹೆಬೂಬಿ ಅವರು ಪ್ರತಿಭಟನಾ ರೈತರ ಜತೆ ಚರ್ಚೆಗೆ ಮುಂದಾದ ವೇಳೆ ಒಪ್ಪದ ರೈತರು, ಪ್ರಾದೇಶಿಕ ಆಯುಕ್ತರು, ಕೊಪ್ಪಳ ಮತ್ತು ರಾಯಚೂರು ಜಿಲ್ಲಾಧಿಕಾರಿಗಳ ಜತೆಗೆ ಈ ಭಾಗದ ರೈತರೊಂದಿಗೆ ಸಭೆಗೆ ಅವಕಾಶ ನೀಡಿದರೆ ಮಾತ್ರ ಹೋರಾಟ ಹಿಂಪಡೆಯಲಾಗುವುದು ಎಂದು ಪಟ್ಟು ಹಿಡಿದರು. ಸಂಜೆ ಆರು ಗಂಟೆಯೊಳಗೆ ಸಭೆ ನಿರ್ಧಾರವಾಗದಿದ್ದರೆ ಅಹೋರಾತ್ರಿ ಹೋರಾಟ ಮುಂದುವರೆಸುವ ಎಚ್ಚರಿಕೆ ನೀಡಲಾಯಿತು.

ರಕ್ತದಿಂದ ಪತ್ರ: ಕಾಲುವೆ ಇದ್ದರೂ ನಮಗೆ ಬರಬೇಕಾದ ನೀರು ಹತ್ತಾರು ವರ್ಷಗಳಿಂದ ಬಾರದ ಕಾರಣ ಹತಾಶೆಗೊಂಡ ರೈತರಿಂದ ರಕ್ತದ ಮೂಲಕ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ನಮಗೆ ನಮ್ಮ ನೀರು ಹರಿಸಿ ಎಂದು ಒತ್ತಾಯಿಸಲಾಯಿತು.

ಬಂದ್ ಸಂಪೂರ್ಣ ಯಶಸ್ವಿ: ರೈತರು ಕರೆ ನೀಡಿದ್ದ ಬಂದ್ ಗೆ ಸ್ವಯಂ ಪ್ರೇರಿತವಾಗಿ ಬೆಂಬಲಿಸಿದ ವ್ಯಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸಹಕಾರ ನೀಡಿದರು.

ಜಿ.ಲೋಕರಡ್ಡಿ, ಟಿ.ಆರ್.ಪಾಟೀಲ್, ಜೆ.ದೇವರಾಜ ಗೌಡ, ಅನಿತಾ ಮಂತ್ರಿ, ಶರಣಪ್ಪಗೌಡ ಹಳ್ಳಿ ಹೊಸೂರು, ಉದಯಕುಮಾರ ಚಾಗಭಾವಿ, ವೈ.ಬಸನಗೌಡ, ಎ.ಮಲ್ಲಪ್ಪ ಸಾಹುಕಾರ, ಎಂ.ನಾಗರಾಜ ಗೌಡ, ಕಲ್ಲೂರು ಬಸವರಾಜ ನಾಯಕ, ಎಸ್.ಸೂರ್ಯರಾವ್, ಎಂ.ರಾಧಾಕೃಷ್ಣ, ಕೆ ಮಾರ್ಕಂಡೇಯ ಜಾಲಾಪೂರ ಕ್ಯಾಂಪ್, ಹಳ್ಳಿ ಹೊಸೂರು, ಚಾಗಭಾವಿ, ಬಲ್ಲಟಗಿ, ಗಣದಿನ್ನಿ, ಜಕ್ಕಲದಿನ್ನಿ, ಭಾಗ್ಯನಗರ ಕ್ಯಾಂಪ್, ಜಾಲಾಪೂರ ಕ್ಯಾಂಪ್, ಲಕ್ಕಂದಿನ್ನಿ, ಸೇರಿದಂತೆ ರೈತ ಸಂಘ, ಕನ್ನಡ ಪರ ಹೋರಾಟ ಸಂಘದ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ರೈತರು ಭಾಗವಹಿಸಿದ್ದರು.

ಮುಖ್ಯ ಕಾಲುವೆಗೆ ರಂಧ್ರಕೊರೆದು ಪೈಪ್‌ಲೈನ್ ಅಳವಡಿಸಿ ನಮಗೆ ಬರಬೇಕಾದ ನೀರನ್ನು ಮಧ್ಯದಲ್ಲಿ ಕಳ್ಳತನ ಮಾಡಿ ಮುಖ್ಯ ಸುಮಾರು ಒಂದೂವರೆ ಲಕ್ಷದಿಂದ ಎರಡು ಲಕ್ಷ ಎಕರೆ ಅಕ್ರಮ ನೀರಾವರಿ ಮಾಡಲಾಗುತ್ತಿದೆ. ಇದನ್ನು ತಕ್ಷಣ ತಡೆಗಟ್ಟಬೇಕು.
ಚಾಮರಸ ಮಾಲಿ ಪಾಟೀಲ್, ಗೌರವಾಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.