ADVERTISEMENT

ನರೇಗಾ ಯೋಜನೆ ಹೆಸರು ಬದಲಾವಣೆ: ಕಾಂಗ್ರೆಸ್‌ ಮಹಿಳಾ ಕಾರ್ಯಕರ್ತೆಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 5:05 IST
Last Updated 18 ಡಿಸೆಂಬರ್ 2025, 5:05 IST
ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಕಾಂಗ್ರೆಸ್‌ ಮಹಿಳಾ ಕಾರ್ಯಕರ್ತೆಯರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಆಕ್ರೋಶ ವ್ಯಕ್ತಪಡಿಸಿದರು
ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಕಾಂಗ್ರೆಸ್‌ ಮಹಿಳಾ ಕಾರ್ಯಕರ್ತೆಯರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಆಕ್ರೋಶ ವ್ಯಕ್ತಪಡಿಸಿದರು   

ರಾಯಚೂರು: ಮನರೇಗಾ ಯೋಜನೆ ಹೆಸರನ್ನು ‘ವಿಬಿ ಜೀ ರಾಮ್ ಜೀ’ ಎಂದು ಬದಲಾವಣೆ ಮಾಡುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ಕ್ರಮವನ್ನು ವಿರೋಧಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ನಗರದ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಒಂದೆಡೆ ಸೇರಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರ ಮನರೇಗಾ ಹೆಸರು ಬದಲಾವಣೆ ಮಾಡುವ ಮೂಲಕ ರಾಜಕೀಯ ಮಾಡುತ್ತಿರುವುದು ಖಂಡನೀಯವಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಹಾಗೂ ಬಡವರಿಗೆ ಅನುಕೂಲವಾಗಿದ್ದ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೇ ಹೆಸರು ಬದಲಾವಣೆ ಮಾಡಲು ಪ್ರಯತ್ನ ನಡೆಸಿದೆ. ಹೆಸರು ಬದಲಾವಣೆಯಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ಬೆಣ್ಣೆ ಮಾತನಾಡಿ, ‘ಬಿಜೆಪಿ ಸರ್ಕಾರವು ಒಡೆದು ಆಳುವ ನೀತಿ ಅನುಸರಿಸಿಕೊಂಡು ಬಂದಿದೆ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಮನರೇಗಾ ಯೋಜನೆಯನ್ನು ಜಾರಿಗೆ ತಂದಿತ್ತು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಯೋಜನೆಗಳ ಹೆಸರುಗಳನ್ನೇ ಬದಲಿಸುವ ಮೂಲಕ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ’ ಎಂದು ಟೀಕಿಸಿದರು.

ADVERTISEMENT

‘ಕಾಂಗ್ರೆಸ್‌ ಕೇಂದ್ರದಲ್ಲಿ ಹಲವು ವರ್ಷ ಆಡಳಿತ ನಡೆಸಿದ್ದರೂ ಯಾವುದೇ ಯೋಜನೆಗಳ ಹೆಸರು ಬದಲು ಮಾಡಿರಲಿಲ್ಲ. ಜನಪರ ಕೆಲಸ ಮಾಡಬೇಕಾದ ಕೇಂದ್ರ ಸರ್ಕಾರ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

‘ಕೇಂದ್ರದಲ್ಲಿ ಬಿಜೆಪಿಗೆ ಅಧಿಕಾರ ಶಾಶ್ವತವಲ್ಲ. ಆರ್.ಎಸ್.ಎಸ್. ಕಾರ್ಯಸೂಚಿಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ಮಹಾತ್ಮಾ ಗಾಂಧಿ ವಿರುದ್ಧದ ಸಿದ್ಧಾಂತಕ್ಕೆ ಒತ್ತುಕೊಡುತ್ತಿದೆ ಎಂದು ಆರೋಪಿಸಿದರು.

‘ಬಿಜೆಪಿ ಸರ್ಕಾರಕ್ಕೆ ಮೊದಲಿನಿಂದಲೂ ಮಹಾತ್ಮ ಗಾಂಧಿ ಅವರನ್ನು ವಿರೋಧಿಸುತ್ತ ಬಂದಿದೆ. ಯೋಜನೆಗೆ ಮಹಾತ್ಮಾ ಗಾಂಧಿ ಅವರ ಹೆಸರು ಇಟ್ಟಿರುವುದನ್ನು ಸಹ ಸಹಿಸಿಕೊಳ್ಳಲು ಆಗುತ್ತಿಲ್ಲ. ಬಿಜೆಪಿಗೆ ಗಾಂಧಿ ಹಾಗೂ ನೆಹರು ಬಗ್ಗೆ ದ್ವೇಷ ನೀತಿ ಅನುಸರಿಸುತ್ತಿದೆ’ ಎಂದು ಟೀಕಿಸಿದರು.

ಕಾಂಗ್ರೆಸ್‌ ಸರ್ಕಾರ ಹಿಂದೆ ಜಾರಿಗೆ ತಂದಿರುವ ಯೋಜನೆಗಳನ್ನು ಯಥಾವತ್ತಾಗಿ ಮುಂದುವರಿಸಬೇಕು. ಸ್ವಾತಂತ್ರ್ಯ ಹೋರಾಟಗಾರರಿಗೆ ಅಗೌರವ ತೋರಿಸುವುದನ್ನು ಮೊದಲು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ವಂದನಾ, ಅಮೀನಾ ಬೇಗಂ, ಪಿ.ಸುರೇಖಾ, ಮಹಾದೇವಿ, ನಾಗಲಕ್ಷ್ಮೀ, ಆರತಿ, ರೇಹನಾ ಬೇಗಂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.