ADVERTISEMENT

ಅಸಮಾನತೆ ಹೋಗಲಾಡಿಸಲು ಶಿಕ್ಷಣದಿಂದ ಸಾಧ್ಯ: ಮೀನಾಕ್ಷಿ ಬಾಳಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 14:47 IST
Last Updated 13 ಅಕ್ಟೋಬರ್ 2018, 14:47 IST
ರಾಯಚೂರಿನಲ್ಲಿ ಈಚೆಗೆ ಆಯೋಜಿಸಿದ್ದ ನಮ್ಮ ನಡೆ ಸಂವಿಧಾನದೆಡೆ ಕಾರ್ಯಕ್ರಮದಲ್ಲಿ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕಿ ಮೀನಾಕ್ಷಿ ಬಾಳಿ ಮಾತನಾಡಿದರು
ರಾಯಚೂರಿನಲ್ಲಿ ಈಚೆಗೆ ಆಯೋಜಿಸಿದ್ದ ನಮ್ಮ ನಡೆ ಸಂವಿಧಾನದೆಡೆ ಕಾರ್ಯಕ್ರಮದಲ್ಲಿ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕಿ ಮೀನಾಕ್ಷಿ ಬಾಳಿ ಮಾತನಾಡಿದರು   

ರಾಯಚೂರು: ದೇಶದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಶಿಕ್ಷಣದಿಂದ ಮಾತ್ರ ಸಾಧ್ಯವಿದೆ ಎಂದು ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕಿ ಮೀನಾಕ್ಷಿ ಬಾಳಿ ಹೇಳಿದರು.

ನಗರದ ಟಾಗೋರ್ಸ್ಮಾರಕ ಶಿಕ್ಷಣ ಸಂಸ್ಥೆಯ ಸೀತಾ ಸುಬ್ಬರಾಜು ಕಾಲೇಜಿನಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಹೈದರಾಬಾದ್ ಕರ್ನಾಟಕ ಕಾಲೇಜು ಅಧ್ಯಾಪಕರ ಸಂಘ, ಕಲಬುರ್ಗಿಯ ಪ್ರಜ್ಞಾ ಕಾನೂನು ಸಲಹಾ ಸಮಿತಿಯಿಂದ ಈಚೆಗೆ ಆಯೋಜಿಸಿದ್ದ ನಮ್ಮ ನಡೆ ಸಂವಿಧಾನದೆಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ 600ಕ್ಕೂ ಹೆಚ್ಚು ಸಂಸ್ಥಾನಗಳು ರಾಜರ ಆಳ್ವಿಕೆಯಲ್ಲಿದ್ದವು. ಪ್ರಜೆಗಳಿಗೆ ಯಾವುದೇ ರೀತಿಯ ಹಕ್ಕುಗಳು ಇರಲಿಲ್ಲ. ಕರ್ತವ್ಯಗಳು ಮಾತ್ರ ಇದ್ದವು ಎಂದರು.

ADVERTISEMENT

ಸ್ವಾತಂತ್ರ್ಯ ಪೂರ್ವದಲ್ಲಿದ್ದ ಜಾತಿ, ಧರ್ಮ, ಲಿಂಗ, ಜನಾಂಗ, ಭಾಷೆ , ಪ್ರಾದೇಶಿಕ ಅಸಮಾನತೆ ಹೋಗಲಾಡಿಸಿ, ಸಮಾನತೆ, ನ್ಯಾಯ ಸಾಕಾರಗೊಳಿಸುವ ಸಂವಿಧಾನ ರೂಪಿಸಲಾಗಿದೆ. ಎಲ್ಲರೂ ಶಿಕ್ಷಣ ಪಡೆದು ಸಮಾನತೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು. ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ ಎಂದು ತಿಳಿಸಿದರು.

ಚಿತ್ತಾಪೂರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಪಕ ಶರಣಪ್ಪ ಸೈದಾಪೂರು ಮಾತನಾಡಿ, ಅನಾದಿ ಕಾಲದಿಂದಲೂ ಸಾಗಿ ಬಂದ ಮೌಢ್ಯತೆ, ಅಸಮಾನತೆಯನ್ನು ತೊಲಗಿಸಲು ಅಸ್ತ್ರವಾದ ಸಂವಿಧಾನದ ಮೌಲ್ಯಗಳನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲವಾದ ಪದವಿ ಪಠ್ಯದಲ್ಲಿ ಭಾರತ ಸಂವಿಧಾನ ವಿಷಯ ಕಡ್ಡಾಯವಾಗಿಸಲಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಸಿದ್ದಲಿಂಗಪ್ಪ ಮಾತನಾಡಿದರು. ಯುವರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿ ಶ್ರೀನಿವಾಸ ರಾಯಚೂರುಕರ್ ಪ್ರಾಸ್ತಾವಿಕ ಮಾತನಾಡಿದರು,

ಬಸವರಾಜಪ್ಪ, ಪಿ.ವೆಂಕಟೇಶ ಇದ್ದರು. ಉಪನ್ಯಾಸಕಿ ಸುವರ್ಣ ಮಾಶಾಳ್ ಪ್ರಾರ್ಥಿಸಿದರು. ಅಳ್ಳಪ್ಪ ಸ್ವಾಗತಿಸಿದರು. ಮಂಜುಳಾ ಪಾಟೀಲ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.