
ರಾಯಚೂರು: ‘ಇಂದು ಭೂಮಿ ಸತ್ವವಿಲ್ಲದಂತಾಗಿದೆ. ಅದರ ಸ್ವಾಭಾವಿಕ ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗಿದೆ. ಅತಿಯಾದ ಲಾಭದ ಉದ್ದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಬಳಕೆಯಿಂದ ಉತ್ಪದನಾ ವೆಚ್ಚ ಹೆಚ್ಚಾಗಿದೆ. ಹೀಗಾಗಿ ಎಲ್ಲ ಸಮಸ್ಯೆಗಳಿಗೆ ಸಾವಯವ ಮತ್ತು ನೈಸರ್ಗಿಕ ಕೃಷಿಯೇ ಪರಿಹಾರ’ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಎ.ಅಮರೇಗೌಡ ಅಭಿಪ್ರಾಯಪಟ್ಟರು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು, ಕ್ರಿಬ್ಕೊ ಲಿಮಿಟೆಡ್, ಸಾವಯವ ಕೃಷಿ ಸಂಶೋಧನಾ ಸಂಸ್ಥೆ ಮತ್ತು ಕೃಷಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಸಾವಯವ ಮತ್ತು ನೈಸರ್ಗಿಕ ಕೃಷಿಯ ತಂತ್ರಜ್ಞಾನಗಳ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
‘ಭೂಮಿಯಲ್ಲಿ ಸೂಕ್ಷ್ಮಾಣು ಜೀವಿಗಳು ನಾಶವಾಗಿವೆ. ಅವುಗಳನ್ನು ಪುನಶ್ಚೇತನ ಮಾಡುವ ಅಗತ್ಯವಿದೆ. ಸಾವಯವ ಮತ್ತು ನೈಸರ್ಗಿಕ ಕೃಷಿಯ ಮೂಲಕ ಮಣ್ಣಿನ ಫಲವತ್ತತೆ ಹೆಚ್ಚಿಸಬೇಕಾಗಿದೆ. ಮುಖ್ಯವಾಗಿ ಸಾವಯವ ಮತ್ತು ನೈಸರ್ಗಿಕ ಕೃಷಿಗೆ ಪಶು ಸಂಗೋಪನೆಯೇ ಆಧಾರವಾಗಿದೆ’ ಎಂದು ತಿಳಿಸಿದರು.
ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಪ್ರಕಾಶ ಚವ್ಹಾಣ ಮಾತನಾಡಿ, ‘ಮಣ್ಣು ಎಲ್ಲ ಬೆಳೆಗಳಿಗೆ ಮೂಲವಾಗಿದೆ. ಮಣ್ಣು ಮತ್ತು ನೀರು ಸಂರಕ್ಷಣಾ ಕ್ರಮಗಳು ಪ್ರಧಾನವಾಗಿವೆ. ಸಾವಯವ ವಸ್ತುಗಳ ಮರು ಬಳಕೆಯಿಂದ ಭೂ ಫಲವತ್ತತೆ ಹೆಚ್ಚುತ್ತದೆ’ ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಎ.ಆರ್.ಕುರುಬರ ಮಾತನಾಡಿ, ‘ಇತ್ತೀಚಿನ ದಿಗಳಲ್ಲಿ ಉತ್ಪದನಾ ವೆಚ್ಚ ಹೆಚ್ಚಾಗುತ್ತಿದೆ. ನಿವ್ವಳ ಆದಾಯ ರೈತರಿಗೆ ದೊರೆಯುತ್ತಿಲ್ಲ. ಆದ್ದರಿಂದ ಬಾಹ್ಯ ರಾಸಾಯನಿಕ ಪರಿಕರಗಳನ್ನು ಕಡಿಮೆ ಮಾಡಿ ನೈಸರ್ಗಿಕವಾಗಿ ದೊರೆಯುವ ಸಗಣಿ, ಗೋಮೂತ್ರ, ಜೀವಾಮೃತ ಮುಂತಾದವುಗಳನ್ನು ಬಳಸಿ ಭೂ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ಹೇಳಿದರು.
ಸಾವಯವ ಕೃಷಿ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಎಂ.ಎ.ಬಸವಣ್ಣೆಪ್ಪ ಮಾತನಾಡಿ, ‘ನೈಸರ್ಗಿಕ ಕೃಷಿ ಮೂಲ ತತ್ವಗಳಾದ ಬೀಜಾಮೃತ, ಜೀವಾಮೃತ, ಹೊದಿಕೆ ಮತ್ತು ವಾಪಸ್ ಪದ್ದತಿಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಕೃಷಿ ಇಲಾಖೆಯ ಉಪಕೃಷಿ ನಿರ್ದೇಶಕ ನಯೀಮ್ ಹುಸೇನ್, ಕ್ರಿಬ್ಕೊ ಸಂಸ್ಥೆಯ ವ್ಯವಸ್ಥಾಪಕ ಶಶಿಕುಮಾರ, ಸಹಾಯಕ ಕೃಷಿ ನಿರ್ದೇಶಕಿ ದೀಪಾ ಎಲ್., ಕೃಷಿ ಸಮುದಾಯ ಬಾನುಲಿ ಕೇಂದ್ರದ ಕಾರ್ಯಕ್ರಮ ಸಹಾಯಕ ಅಮರೇಶ ಆಶಿಹಾಳ, ಪ್ರಗತಿಪರ ರೈತ ಮುನಿಯಪ್ಪ ನಾಯಕ, ಅಮರೇಶ ಮತ್ತು ಮಾರೆಪ್ಪ ನಾಯಕ ಅವರು ಅನುಭವ ಹಂಚಿಕೊಂಡರು.
ಆನಂದ ಕಾಂಬಳೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.