ADVERTISEMENT

ಬಿಜೆಪಿ ಅಭ್ಯರ್ಥಿ ಸೋಲಿಸುವುದೇ ನಮ್ಮ ಗುರಿ: ಅಮೀರ್ ಅಲಿ

ಇಂಡಿಯಾ ಮೈತ್ರಿಯೊಂದಿಗೆ ನಾವಿಲ್ಲ; ಅಮೀರ್ ಅಲಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 15:55 IST
Last Updated 22 ಏಪ್ರಿಲ್ 2024, 15:55 IST
ಎಂ.ಡಿ.ಅಮೀರ್ ಅಲಿ
ಎಂ.ಡಿ.ಅಮೀರ್ ಅಲಿ   

ರಾಯಚೂರು: ‘ಇಂಡಿಯಾ ಒಕ್ಕೂಟದೊಂದಿಗೆ ನಾವು ಮೈತ್ರಿ ಮಾಡಿಕೊಂಡಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಯನ್ನೂ ಮಾಡುತ್ತಿಲ್ಲ. ಆದರೆ, ದೇಶದಲ್ಲಿ ಆರ್‌ಎಸ್‍ಎಸ್, ಬಿಜೆಪಿ ಸೋಲಿಸುವುದೇ ನಮ್ಮ ಗುರಿ’ ಎಂದು ಸಿಪಿಐ (ಎಂಎಲ್) ರೆಡ್ ಸ್ಟಾರ್ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ಡಿ.ಅಮೀರ್ ಅಲಿ ತಿಳಿಸಿದರು. 

ಮಾರ್ಚ್ 10ರಂದು ನಮ್ಮ ಪಕ್ಷದ ನೇತೃತ್ವದಲ್ಲಿ ನಡೆಸಿದ ಫ್ಯಾಸಿಸ್ಟ್ ವಿರೋಧಿ ಅಖಿಲ ಭಾರತ ಜನತಾ ಸಮಾವೇಶದಲ್ಲಿ ಕೈಗೊಂಡ ರಾಜಕೀಯ ನಿರ್ಣಯವನ್ನು ನಾಗಪುರ ಘೋಷಣೆ ಎಂದೇ ಪ್ರಕಟಿಸಲಾಗಿದೆ’ ಎಂದು ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ದೇಶದ ಸಂಸತ್ತು, ಆಡಳಿತ, ಮಿಲಿಟರಿ, ನ್ಯಾಯಾಂಗ, ಚುನಾವಣಾ ಆಯೋಗ, ಕಲೆ ಸಂಸ್ಕೃತಿ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿ ಹಿಂದುತ್ವವಾದಿ ಫ್ಯಾಸಿಸಂ ತಾಂಡವವಾಡುತ್ತಿದೆ. ದೇಶದ ಸಾರ್ವಜನಿಕ ಉತ್ಪಾದನಾ ಹಾಗೂ ಸೇವಾ ವಲಯಗಳು, ಪ್ರಕೃತಿ ಸಂಪತ್ತು ಮತ್ತು ಮೂಲ ಸೌಲಭ್ಯಗಳು ಬಹು ರಾಷ್ಟ್ರೀಯ ಕಂಪನಿಗಳಿಗೆ ಬಿಕರಿಯಾಗುತ್ತಿವೆ. ರೈತಾಪಿ ವರ್ಗದ ಎಂಎಸ್‌ಪಿ ಕಾನೂನು ಖಾತ್ರಿ ಹೋರಾಟ ಬಲಪ್ರಯೋಗದ ಮೂಲಕ ಹತ್ತಿಕ್ಕಲಾಗುತ್ತಿದೆ’ ಎಂದು ದೂರಿದರು.

ADVERTISEMENT

‘ಪರಿಸ್ಥಿತಿಯ ಈ ತೀವ್ರತೆಯ ಆಧಾರದ ಮೇಲೆ ಸಿಪಿಐ (ಎಂಎಲ್) ರೆಡ್ ಸ್ಟಾರ್ ಪಕ್ಷ ನಾಗಪುರ ಸಮಾವೇಶದ ಮೂಲಕ ಆರ್ ಎಸ್‍ಎಸ್‍ನ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯುವುದೇ ಪ್ರಮುಖ ರಾಜಕೀಯ ಕರ್ತವ್ಯವೆಂದು ದೇಶಕ್ಕೆ ಕರೆ ನೀಡಿದೆ. ಈ ನಿಟ್ಟಿನಲ್ಲಿ ನಮ್ಮ ಪಕ್ಷ ಕರ್ನಾಟಕದ ಯಾವ ಕ್ಷೇತ್ರದಲ್ಲೂ ಸ್ಪರ್ಧಿಸುವುದಿಲ್ಲ. ನಾವು ಇಂಡಿಯಾ ಮೈತ್ರಿಯ ಭಾಗವೂ ಅಲ್ಲ. ಬಿಜೆಪಿ ವಿರೋಧಿ ವೋಟುಗಳ ವಿಭಜನೆಗೆ ನಮ್ಮ ಸಮ್ಮತಿ ಇಲ್ಲ. ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಬಲ್ಲ ಯಾವುದೇ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಲಿದ್ದೇವೆ’ ಎಂದರು.

‘ಮೈಸೂರು, ಚಿಕ್ಕಮಗಳೂರು-ಶೃಂಗೇರಿ, ಶಿವಮೊಗ್ಗ, ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಜನಜಾಗೃತಿ ಜಾಥಾಗಳ ಮೂಲಕ ಆರ್‌ಎಸ್‌ಎಸ್ ಸೋಲಿಸುವ ಅಭಿಯಾನಕ್ಕೆ ಮುಂದಾಗಲಿದ್ದೇವೆ. ರೈತಾಪಿ ವರ್ಗ, ಕಾರ್ಮಿಕರು, ದಲಿತರು, ಮುಸಲ್ಮಾನರು ಮತ್ತು ಮಹಿಳೆಯರು ಪ್ರತಿಜ್ಞೆ ಮಾಡಿ ಈ ಫ್ಯಾಸಿಸ್ಟ್ ಶಕ್ತಿಯನ್ನು ಸೋಲಿಸುವಂತೆ ಮನವಿ ಮಾಡುತ್ತೇವೆ’ ಎಂದರು.

ಪಕ್ಷದ ಮುಖಂಡರಾದ ಜಿ.ಅಮರೇಶ, ಚಿನ್ನಪ್ಪ ಕೊಟ್ರಿಕ್ಕಿ ಹಾಗೂ ಆರ್.ಹುಚ್ಚ ರೆಡ್ಡಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.