ADVERTISEMENT

ರಾಯಚೂರು | ಓವರ್ ಲೋಡ್ ಮರಳು ಸಾಗಾಟ: ಜನರಿಗೆ ಪ್ರಾಣ ಸಂಕಟ

ಚಂದ್ರಕಾಂತ ಮಸಾನಿ
ಯಮುನೇಶ ಗೌಡಗೇರಾ
Published 20 ನವೆಂಬರ್ 2023, 5:37 IST
Last Updated 20 ನವೆಂಬರ್ 2023, 5:37 IST
ದೇವದುರ್ಗ ತಾಲ್ಲೂಕಿನ ಬಾಗೂರು ಗ್ರಾಮದ ಹತ್ತಿರ ರಸ್ತೆ ಕುಸಿದು ನೆಲಕ್ಕೆ ಉರುಳಿದ ಮರಳು ವಾಹನ
ಚಿತ್ರ: ಯಮನೇಶ ಗೌಡಗೇರಾ
ದೇವದುರ್ಗ ತಾಲ್ಲೂಕಿನ ಬಾಗೂರು ಗ್ರಾಮದ ಹತ್ತಿರ ರಸ್ತೆ ಕುಸಿದು ನೆಲಕ್ಕೆ ಉರುಳಿದ ಮರಳು ವಾಹನ ಚಿತ್ರ: ಯಮನೇಶ ಗೌಡಗೇರಾ   

ರಾಯಚೂರು: ದೇವದುರ್ಗ ತಾಲ್ಲೂಕಿನ ಕೃಷ್ಣಾ ನದಿ ತೀರಗುಂಟ ನಡೆಸುತ್ತಿರುವ ಮರಳು ಗಣಿಗಾರಿಕೆಯ ಮಾಲೀಕರು ಸಾರ್ವಜನಿಕರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಟಿಪ್ಪರ್‌, ಲಾರಿಗಳು ಸಾಮರ್ಥ್ಯಕ್ಕಿಂತ ಹೆಚ್ಚಿನ ಮರಳು ತುಂಬಿ ಸಾಗಿಸುತ್ತಿರುವ ಕಾರಣ ರಸ್ತೆಗಳೆಲ್ಲ ಹಾಳಾಗಿವೆ. ಅಕ್ರಮಗಳಿಗೆ ಆರ್‌ಟಿಒ, ಕಂದಾಯ ಇಲಾಖೆ ಅಧಿಕಾರಿಗಳು ಪರೋಕ್ಷ ಸಹಕಾರ ನೀಡುತ್ತಿರುವ ಕಾರಣ ಮರಳು ದಂದೆಯಲ್ಲಿ ತೊಡಗಿರುವವರು ತಮ್ಮದೇ ಸಾಮ್ರಾಜ್ಯ ಸ್ಥಾಪಿಸಿಕೊಂಡಿದ್ದಾರೆ.

ಸಾಮರ್ಥ್ಯಕ್ಕಿಂತ ಅಧಿಕ ಮರಳು ತುಂಬಿದ ಲಾರಿಗಳು ಲಂಗು ಲಗಾಮು ಇಲ್ಲದಂತೆ ದೇವದುರ್ಗ ಪಟ್ಟಣದ ಮೂಲಕ ಶಹಾಪುರ, ಲಿಂಗಸೂಗೂರು, ರಾಯಚೂರು, ಯಾದಗಿರಿ, ಬೀದರ್ ಹಾಗೂ ನೆರೆಯ ಆಂಧ್ರಪ್ರದೇಶಕ್ಕೂ ಸಾಗುತ್ತಿವೆ.

ಓವರ್ ಲೋಡ್ ಟಿಪ್ಪರ್, ಲಾರಿಗಳಿಂದ ಗ್ರಾಮೀಣ ರಸ್ತೆಗಳೂ ಸಂಪೂರ್ಣ ಹಾಳಾಗಿವೆ. ರಸ್ತೆ ಮಧ್ಯದಲ್ಲಿಯೇ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಈ ಗುಂಡಿಯಲ್ಲಿ ಸಿಲುಕಿ ದ್ವಿಚಕ್ರವಾಹನ ಸವಾರರು ಅಪಘಾತಕ್ಗೀಡಾಗುವುದು ಸಾಮಾನ್ಯವಾಗಿದೆ. ಕಾರಿನ ಬೋನೆಟ್‌ಗಳು ಹಾನಿಗೀಡಾಗುತ್ತಿವೆ.

ADVERTISEMENT

ತಾಲ್ಲೂಕಿನ ಜಾಲಹಳ್ಳಿ ಮತ್ತು ಗಬ್ಬೂರು ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮೀಣ ರಸ್ತೆ ಹಾಳಾಗಿವೆ. ಇನ್ನೊಂದು ಅಪಾಯಕಾರಿ ಅಂಶ ಅಂದರೆ ಮರಳು ಸಾಗಿಸುವವರು ಲಾರಿಗಳ ಮೇಲೆ ಹೊದಿಕೆಯನ್ನೇ ಹಾಕುವುದಿಲ್ಲ. ಗಾಳಿಗೆ ಮರಳು ಹಾರಿ ಹೋಗುವುದರಿಂದ ದ್ವಿಚಕ್ರ ವಾಹನ ಸವಾರರ ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತಿದೆ.

ಮರಳು ಲಾರಿ ಸಂಚರಿಸುವ ರಸ್ತೆಗಳು ಹಾಳಾಗಿ ಬಸ್‌, ಕಾರು ಹಾಗೂ ದ್ವಿಚಕ್ರವಾಹನ ಓಡಾಟ ಸಮಸ್ಯೆಯಾಗಿದೆ.

ಗ್ರಾಮಸ್ಥರು ವಾಹನಗಳನ್ನು ತಡೆದು ಪೊಲೀಸರಿಗೆ ದೂರು ಕೊಟ್ಟರೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ದೂರು ಕೊಡಿ ಎಂದು ಸಲಹೆ ಕೊಡುತ್ತಾರೆ. ಸಾರ್ವಜನಿಕರು ದೂರು ಕೊಟ್ಟರೂ ಆರ್‌ಟಿಒ ಅಧಿಕಾರಿಗಳು ಅದಕ್ಕೆ ಕವಡೆ ಕಾಸಿನ ಬೆಲೆ ಕೊಡುತ್ತಿಲ್ಲ.

ಮರಳು ಸಾಗಾಟ ಮಾಡುವ ಶೇಕಡ 90ರಷ್ಟು ವಾಹನಗಳ ಮಾಲೀಕರು ವಾಹನದ ನೋಂದಣಿ ನಂಬರ್ ಪ್ಲೇಟ್ ತೆಗೆದುಹಾಕಿ ಮರಳು ಸಾಗಾಟ ಮಾಡುತ್ತಿದ್ದಾರೆ. ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಎಲ್ಲ ಗೊತ್ತಿದ್ದರೂ ಮಾಮೂಲು ಪಡೆದು ಅಕ್ರಮಗಳಿಗೆ ಸಹಕಾರ ನೀಡುತ್ತಿದ್ದಾರೆ ಎನ್ನುವುದು ಸಾರ್ವಜನಿಕರ ನೇರ ಆರೋಪವಾಗಿದೆ.

ಅಕ್ರಮಗಳಿಗೆ ಕಡಿವಾಣ ಹಾಕಲು ಹಿಂದೆ ಜಿಲ್ಲಾಡಳಿತ ಅನೇಕ ಇಲಾಖೆಗಳನ್ನು ಸೇರಿಸಿ ಒಂದು ತಂಡ ರಚಿಸಿದೆ. ಆದರೆ, ಆರ್‌ಟಿಒ, ಕಂದಾಯ, ಪರಿಸರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸಮನ್ವಯ ಸಾಧಿಸುವ ಆಸಕ್ತಿ ಇಲ್ಲ. ಆರ್‌ಟಿಒ ಅಧಿಕಾರಿಗಳು ದಾಳಿ ನಡೆಸಿ ಲಾರಿ ಚಾಲಕರಿಗೆ ದಂಡ ವಿಧಿಸಿದ ಒಂದು ಉದಾಹರಣೆಯೂ ಪತ್ರಿಕೆಗಳಲ್ಲಿ ಕಾಣಸಿಗುವುದಿಲ್ಲ. ಆರ್‌ಟಿಒ ಅಧಿಕಾರಿಗಳ ಬಳಿ ಜಿಲ್ಲೆಯಲ್ಲಿ ಎಷ್ಟು ಲಾರಿಗಳು ಇವೆ ಎನ್ನುವ ಮಾಹಿತಿಯೂ ಇಲ್ಲ. ಮಾಹಿತಿ ಕೇಳಿದರೆ ಹಾರಿಕೆ ಉತ್ತರ ಕೊಡುತ್ತಾರೆ.

ಬಣ್ಣದ ಚೀಟಿಗಳ ಆಧಾರದ ಮೇಲೆ ಈಗಲೂ ಮಾಮೂಲು ಸಂಗ್ರಹವಾಗುತ್ತದೆ. ಮರಳು ದಂದೆ ಮಾಡುವವರಿಂದಲೇ ಅಧಿಕಾರಿಗಳು ಅಕ್ರಮ ಹಣ ಮಾಡುತ್ತಿದ್ದಾರೆ. ಶಿಕ್ಷೆಯ ರೂಪದಲ್ಲಿ ರಾಯಚೂರು ಜಿಲ್ಲೆಗೆ ಬರುವ ಅಧಿಕಾರಿಗಳಿಗೆ ಇದು ಸ್ವರ್ಗವೇ ಆಗಿದೆ. ಒಮ್ಮೆ ಇಲ್ಲಿ ಬಂದ ಅಧಿಕಾರಿ ಮತ್ತೆ ಮರಳಿ ಹೋಗಲು ಮನಸ್ಸು ಮಾಡುವುದಿಲ್ಲ ಎಂದು ದೇವದುರ್ಗ ತಾಲ್ಲೂಕಿನ ಅನೇಕ ಗ್ರಾಮಗಳ ಗ್ರಾಮಸ್ಥರು ಹೇಳುತ್ತಾರೆ.

ದೇವದುರ್ಗ ತಾಲ್ಲೂಕಿನಲ್ಲಿ ರಸ್ತೆ ಸುರಕ್ಷತಾ ನಿಯಮಗಳಿಗೆ ಕವಡೆ ಕಾಸಿನ ಬೆಲೆ ಇಲ್ಲ. ಇಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸಿದರೂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗುವುದಿಲ್ಲ. ಪರಸ್ಪರ ಸಹಕಾರದ ಆಧಾರ ಮೇಲೆಯೇ ಎಲ್ಲವನ್ನೂ ಮುಚ್ಚಿಹಾಕಲಾಗುತ್ತದೆ.

ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಬೀಡುಬಿಟ್ಟಿರುವ ಪ್ರಾದೇಶಿಕ ಸಾರಿಗೆ ಇಲಾಖೆ, ಪೊಲೀಸ್‌ ಇಲಾಖೆ ಅಧಿಕಾರಿಗಳು ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಹಾಗೂ ಇಲ್ಲಿಂದ ವರ್ಗಾವಣೆ ಮಾಡುವವರೆಗೂ ಸುಧಾರಣೆ ಸಾಧ್ಯವಿಲ್ಲ ಎಂದು ಗ್ರಾಮಸ್ಥರು ಬಹಿರಂಗವಾಗಿ ಆಡಿಕೊಳ್ಳುತ್ತಾರೆ. ಆದರೆ, ಜೀವಭಯದಿಂದ ಯಾರೊಬ್ಬರೂ ಠಾಣೆಯ ಮೆಟ್ಟಿಲೇರಿ ದೂರು ಕೊಡುವ ಧೈರ್ಯ ತೋರುತ್ತಿಲ್ಲ. ಇದಕ್ಕೆಲ್ಲ ಮೂಲ ಕಾರಣ ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಎಂದು ಗ್ರಾಮಸ್ಥರು ಹೇಳುತ್ತಾರೆ. 

ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಹತ್ತಿರ ಮರಳು ಸಾಗಿಸುತ್ತಿರುವ ನಂಬರ್ ಪ್ಲೇಟ್ ಇಲ್ಲದ ಭಾರಿ ವಾಹನ
ದೇವದುರ್ಗ ತಾಲ್ಲೂಕಿನ ನಗರಗುಂಡ ಹತ್ತಿರ ಓವರ್‌ಲೋಡ್ ಮರಳು ಹೊತ್ತು ಸಾಗುತ್ತಿರುವ ನಂಬರ್ ಪ್ಲೇಟ್ ಇಲ್ಲದ ದೊಡ್ಡ ಲಾರಿ
ದೇವದುರ್ಗ ತಾಲ್ಲೂಕಿನ ಗ್ರಾಮೀಣ ರಸ್ತೆಯಲ್ಲಿ ಓವರ್ ಲೋಡ್ ಮರಳು ಸಾಗಣೆ ಲಾರಿಗಳಿಂದ ಕುಸಿದಿರುವ ರಸ್ತೆ
ದೇವದುರ್ಗ ತಾಲ್ಲೂಕಿನ ಹೊನ್ನಟಿಗಿ ಬೊಮ್ಮನಾಳ ಗ್ರಾಮೀಣ ರಸ್ತೆ ಕುಸಿದು ರಸ್ತೆಯಲ್ಲಿ ಉರಳಿದ ಮರಳು ಸಾಗಣೆ ಲಾರಿ
ದೇವದುರ್ಗ ತಾಲ್ಲೂಕಿನ ಹೂವಿನಹೆಡಗಿ ಹತ್ತಿರದ ಚೆಕ್ ಪೋಸ್ಟ್ ದಾಟಿ ಓವರ್ ಲೋಡ್ ಮರಳು ಸಾಗಣೆ ಮಾಡುತ್ತಿರುವ ವಾಹನ
ಸಾರಿಗೆ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಓವರ್ ಲೋಡ್ ಮರಳು ಸಾಗಿಸುವ ದಂದೆಕೋರರ ಜತೆ ಶಾಮೀಲಾಗಿದ್ದಾರೆ. ಹಾಗಾಗಿ ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ತಡೆದು ವಿಚಾರಿಸುವುದಿಲ್ಲ Quote -
ದೇವದುರ್ಗ ತಾಲ್ಲೂಕಿನಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಸಾಮಾನ್ಯವಾಗಿದೆ. ಕಾರು ಟ್ರ್ಯಾಕ್ಸ್‌ಗಳನ್ನು ತಡೆದು ದಂಡ ವಸೂಲಿ ಮಾಡುವ ಆರ್‌ಟಿಒ ಅಧಿಕಾರಿಗಳು ಮರಳು ಸಾಗಣೆ ಲಾರಿ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ
ರಾಮಣ್ಣ ಎನ್ ಗಣೇಕಲ್ ಸಾಮಾಜಿಕ ಕಾರ್ಯಕರ್ತ ಗಬ್ಬೂರು
ಕೆಲವು ದಿನಗಳ ಹಿಂದೆ ಮರಳು ತುಂಬಿದ ವಾಹನ ರಸ್ತೆ ಮೇಲೆ ಉರುಳಿ ಬಿದ್ದು ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆ ಆಯಿತು. ₹ 4 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಹೊನ್ನಟಗಿ- ಬೋಮ್ಮನಾಳ ರಸ್ತೆ ಮರಳು ಸಾಗಣೆ ಟಿಪ್ಪರ್‌ಗಳ ಓಡಾಟದಿಂದ ಹಾಳಾಗಿದೆ
ಶಾಂತಕುಮಾರ ಹೊನ್ನಟಗಿ ಅಧ್ಯಕ್ಷ ಎಂ ಆರ್ ಎಸ್ ಎಚ್ ಸಂಘ ದೇವದುರ್ಗ
ತಾಲ್ಲೂಕು ಮರಳು ಮೇಲ್ವಿಚಾರಣೆ ಸಮಿತಿ ಇದುವರೆಗೂ ಸಭೆ ನಡೆಸಿಲ್ಲ. ಸಮಿತಿ ಅಧ್ಯಕ್ಷರಾದ ಸಹಾಯಕ ಆಯುಕ್ತರಿಗೆ ಸಭೆ ನಡೆಸಿ. ನಿಯಮ ಬಾಹಿರ ಓವರ್ ಲೋಡಗೆ ಕಡಿವಾಣ ಹಾಕಲು ಸೂಚಿಸಲಾಗುವುದು
ಕರೆಮ್ಮ ಜಿ. ನಾಯಕ ಶಾಸಕಿ ದೇವದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.