ADVERTISEMENT

ಕವಿತಾಳ | ಭತ್ತ ಕಟಾವಿಗೆ ರೈತರ ಪರದಾಟ

ಭತ್ತದ ದರ ಇಳಿಕೆ, ಕಟಾವು ಯಂತ್ರದ ಬಾಡಿಗೆ ಏರಿಕೆ: ಸಂಕಷ್ಟದಲ್ಲಿ ಭತ್ತದ ಬೆಳೆಗಾರರು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2024, 6:01 IST
Last Updated 28 ನವೆಂಬರ್ 2024, 6:01 IST
ಕವಿತಾಳ ಸಮೀಪದ ಗೂಗೆಬಾಳ ಗ್ರಾಮದ ಹತ್ತಿರ ಯಂತ್ರಗಳಿಂದ ಭತ್ತ ಕಟಾವು ನೋಟ
ಕವಿತಾಳ ಸಮೀಪದ ಗೂಗೆಬಾಳ ಗ್ರಾಮದ ಹತ್ತಿರ ಯಂತ್ರಗಳಿಂದ ಭತ್ತ ಕಟಾವು ನೋಟ   

ಕವಿತಾಳ: ಅಕಾಲಿಕ ಮಳೆಯಿಂದ ನೆಲಕಚ್ಚಿದ ಭತ್ತ, ಕಟಾವು ಯಂತ್ರಗಳ ಕೊರತೆ, ಯಂತ್ರಗಳ ಬಾಡಿಗೆ ಹೆಚ್ಚಳ ಮತ್ತು ಭತ್ತದ ದರ ಕುಸಿತದಿಂದ ಭತ್ತದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

15 ದಿನಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದ ತೋರಣದಿನ್ನಿ, ಮಲ್ಲದಗುಡ್ಡ, ಹಾಲಾಪುರ, ಮರಕಮದಿನ್ನಿ, ಮಲ್ಕಾಪುರ ಮತ್ತು ಇರಕಲ್‌ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಬೆಳೆದು ನಿಂತ ಭತ್ತದ ಬೆಳೆ ನೆಲಕಚ್ಚಿದೆ.

ಒಂದು ವಾರದಿಂದ ಎಲ್ಲೆಡೆ ಭತ್ತ ಕಟಾವು ಕಾರ್ಯ ಶುರುವಾಗಿದೆ. ಯಂತ್ರಗಳ ಕೊರತೆಯಿಂದ ಕಟಾವು ಪ್ರಕ್ರಿಯೆ ವಿಳಂಬವಾಗುತ್ತಿದೆ. ನೆಲಕಚ್ಚಿದ ಬೆಳೆ ಕಟಾವು ಮಾಡಲು ಹೆಚ್ಚಿನ ಸಮಯ ಹಿಡಿಯುತ್ತಿದೆ. ಜೊತೆಗೆ ಕಟಾವಿ ಸಂದರ್ಭದಲ್ಲಿ ಮಣ್ಣು ಮಿಶ್ರಣವಾದರೆ ಯಂತ್ರ ಹಾಳಾಗುವುದು ಸಾಮಾನ್ಯ. ಮೊದಲೆಲ್ಲ ಒಂದೂವರೆ ತಾಸಿನಲ್ಲಿ ಒಂದು ಎಕರೆ ಭತ್ತ ಕಟಾವು ನಡೆಯುತ್ತಿತ್ತು. ಈಗ ಅದಕ್ಕೆ 3ರಿಂದ 4 ತಾಸು ಹಿಡಿಯುತ್ತಿದೆ. ಇದು ರೈತರ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ.

ADVERTISEMENT

‘ಸಾಮಾನ್ಯವಾಗಿ ಒಂದು ಎಕರೆ ಭತ್ತ ಕಟಾವಿಗೆ ಒಂದೂವರೆ ತಾಸು ಸಾಕಾಗಿತ್ತು. ನೆಲಕಚ್ಚಿದ ಬೆಳೆ ಮೇಲೆ ಎತ್ತಿ ಕಟಾವು ಮಾಡಲು 3 ರಿಂದ 4 ತಾಸು ಸಮಯವಾಗುತ್ತಿದೆ. ಒಂದು ತಾಸಿಗೆ ₹2,100 ಇದ್ದ ಯಂತ್ರದ ಬಾಡಿಗೆ ದರ ಈಗ ₹3 ಸಾವಿರಕ್ಕೆ ಏರಿಕೆಯಾಗಿದೆ. ದರ ಏರಿಕೆ ಮತ್ತು ಕಟಾವಿಗೆ ಹೆಚ್ಚಿನ ಸಮಯ ಹಿಡಿಯುವುದರಿಂದ ರೈತರಿಗೆ ನಷ್ಟ ಉಂಟಾಗುತ್ತಿದೆ. ಆರು ತಿಂಗಳ ಹಿಂದೆ 75 ಕೆ.ಜಿ ಭತ್ತಕ್ಕೆ ₹2,300 ದರವಿತ್ತು. ಈಗ ₹1,600ಕ್ಕೆ ಕುಸಿದಿದೆ. ವೆಚ್ಚ ಹೆಚ್ಚಿರುವುದು ಮತ್ತು ದರ ಕುಸಿತದಿಂದ ನಷ್ಟ ಅನುಭವಿಸುವಂತಾಗಿದೆ’ ಎಂಬುದು ಇರಕಲ್‌ ಗ್ರಾಮದ ರೈತ ಕರಿಯಪ್ಪ ಪಾಟೀಲ ಅಳಲು.

‘ಶೇ 30ರಷ್ಟು ಭತ್ತ ಕಟಾವು’

‘ಕವಿತಾಳ ಹೋಬಳಿ ವ್ಯಾಪ್ತಿಯಲ್ಲಿ 1490 ಹೆಕ್ಟೇರ್‌ ಪ್ರದೇಶ ಹಾಗೂ ಹಾಲಾಪುರ ಹೋಬಳಿ ವ್ಯಾಪ್ತಿಯಲ್ಲಿ 2900 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಈ ತನಕ ಶೇ 30ರಷ್ಟು ಭತ್ತ ಕಟಾವು ಮುಗಿದಿದೆ’ ಎಂದು ಕವಿತಾಳದ ಸಹಾಯಕ ಕೃಷಿ ಅಧಿಕಾರಿ ಮಾರುತಿ ತಿಳಿಸಿದ್ದಾರೆ.

ಅಕಾಲಿಕ ಮಳೆಯಿಂದ ತೊಂದರೆ ಉಂಟಾಗಿದೆ ಈಗ ಭತ್ತದ ದರ ಕುಸಿತದಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕರಿಯಪ್ಪ ಪಾಟೀಲ, ಇರಕಲ್‌ ರೈತ
ಏಕಕಾಲಕ್ಕೆ ನಾಟಿ ಮಾಡಿದ್ದರಿಂದ ತುಂಗಭದ್ರಾ ಅಚ್ಚುಕಟ್ಟು ಮತ್ತು ಕೃಷ್ಣಾ ಮೇಲ್ದಂಡೆ ವ್ಯಾಪ್ತಿಯಲ್ಲಿ ಒಟ್ಟಿಗೆ ಭತ್ತ ಕಟಾವಿಗೆ ಬಂದಿದೆ. ಹೀಗಾಗಿ ಯಂತ್ರಗಳ ಕೊರತೆಯಾಗಿದೆ.
ಮೌನೇಶ ಜವಳಗೇರ, ಮಲ್ಲದಗುಡ್ಡ ರೈತ
ಕವಿತಾಳ ಸಮೀಪದ ಗೂಗೆಬಾಳ ಗ್ರಾಮದ ಹತ್ತಿರ ಯಂತ್ರಗಳಿಂದ ಭತ್ತ ಕಟಾವು ನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.