ADVERTISEMENT

ಮಾನ್ವಿ|ಭತ್ತದ ಎರಡನೇ ಬೆಳೆಗೆ ನೀರು ಹರಿಸಲು ಕ್ರಮಕೈಗೊಳ್ಳಿ: ರಾಜಾ ವೆಂಕಟಪ್ಪ ನಾಯಕ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 7:13 IST
Last Updated 28 ಅಕ್ಟೋಬರ್ 2025, 7:13 IST
<div class="paragraphs"><p>ರಾಜಾ ವೆಂಕಟಪ್ಪ ನಾಯಕ</p></div>

ರಾಜಾ ವೆಂಕಟಪ್ಪ ನಾಯಕ

   

ಮಾನ್ವಿ: ‘ರಾಜ್ಯ ಸರ್ಕಾರ ತುಂಗಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ನಡೆಸಿ ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಭತ್ತದ ಎರಡನೆಯ ಬೆಳೆಗೆ ನೀರು ಹರಿಸಲು ತೀರ್ಮಾನ ಕೈಗೊಳ್ಳಬೇಕು’ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಒತ್ತಾಯಿಸಿದರು.

ಸೋಮವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ 80 ಟಿಎಂಸಿ ಅಡಿ ನೀರಿನ ಸಂಗ್ರಹ, ಉತ್ತಮವಾದ ಒಳಹರಿವೂ ಇದೆ. ಆದರೆ ಜಲಾಶಯದಲ್ಲಿ ಹೊಸದಾಗಿ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸುವ ನೆಪದಲ್ಲಿ ರೈತರಿಗೆ ಎರಡನೆಯ ಬೆಳೆಗೆ ನೀರು ಬಿಡಲು ಸಾಧ್ಯವಿಲ್ಲ ಎನ್ನುವ ಸರ್ಕಾರದ ಹೇಳಿಕೆಯಿಂದಾಗಿ ಈ ಭಾಗದ ರೈತರಲ್ಲಿ ಗೊಂದಲ ಉಂಟಾಗಿದೆ’ ಎಂದರು.

ADVERTISEMENT

‘ತುಂಗಭದ್ರಾ ಜಲಾಶಯದಿಂದ ಕಾಲುವೆ ಮೂಲಕ ನೀರು ಹರಿಸುವ ಕುರಿತು ತೀರ್ಮಾನಿಸಲು ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ರೈತ ಮುಖಂಡರನ್ನು ಒಳಗೊಂಡ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯನ್ನು ಬೆಂಗಳೂರಿನಲ್ಲಿ ನಡೆಸದೆ ಮುನಿರಾಬಾದಿನಲ್ಲಿಯೇ ನಡೆಸಿ ಚರ್ಚಿಸಬೇಕು’ ಎಂದು ಅವರು ಹೇಳಿದರು.

‘ರಾಜ್ಯ ಸರ್ಕಾರ ಜಲಾಶಯದ ನಿರ್ವಹಣೆ ತಜ್ಞರನ್ನು ನೇಮಕ ಮಾಡಿ ಕ್ರಸ್ಟ್‌ಗೇಟ್ ಅಳವಡಿಕೆ ಹಾಗೂ ಜಲಾಶಯದ ಸುರಕ್ಷತೆ ಕುರಿತು ವರದಿ ಪಡೆದು ರೈತರ ಎರಡನೆಯ ಬೆಳೆಗೆ ನೀರು ಪೂರೈಸಬೇಕು’ ಎಂದು ಒತ್ತಾಯಿಸಿದರು.

‘ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ಹತ್ತಿ, ತೊಗರಿ, ಜೋಳ ಬೆಳೆಗಳು ಹಾನಿಗೀಡಾಗಿದ್ದು, ರೈತರಿಗೆ ಕೂಡಲೇ ಬೆಳೆ ನಷ್ಟ ಪರಿಹಾರ ನೀಡಬೇಕು. ಕಳಪೆ ಗುಣಮಟ್ಟದ ಬಿತ್ತನೆ ಬೀಜ ಮಾರಾಟ ಮಾಡುತ್ತಿರುವ ಕೃಷಿ ಪರಿಕರಗಳ ಅಂಗಡಿಗಳ ವಿರುದ್ಧ ಕೃಷಿ ಇಲಾಖೆಯ ಅಧಿಕಾರಿಗಳು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಈರಣ್ಣ ಮರ್ಲಟ್ಟಿ ಪೋತ್ನಾಳ, ಇತರ ಪದಾಧಿಕಾರಿಗಳಾದ ರಾಜಾ ರಾಮಚಂದ್ರ ನಾಯಕ, ಟಿ.ಮಲ್ಲಿಕಾರ್ಜುನ ಪಾಟೀಲ, ಪಿ.ರವಿಕುಮಾರ, ಶರಣಪ್ಪಗೌಡ ಮದ್ಲಾಪುರ, ಎಚ್. ಮೌನೇಶಗೌಡ, ಬಾಷಾ ಸಾಬ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.