ADVERTISEMENT

ರಾಯಚೂರು | ಮತದಾನಕ್ಕೆ ಊರಿಗೆ ತೆರಳಲು ಪರದಾಡಿದ ಪ್ರಯಾಣಿಕರು

ರಸ್ತೆ ಸಾರಿಗೆ ಸಂಸ್ಥೆಯ 245 ಬಸ್‍ಗಳ ಸಂಚಾರ ರದ್ದು

​ಪ್ರಜಾವಾಣಿ ವಾರ್ತೆ
Published 6 ಮೇ 2024, 15:48 IST
Last Updated 6 ಮೇ 2024, 15:48 IST
ರಾಯಚೂರು ಕೇಂದ್ರ ಬಸ್‌ ನಿಲ್ದಾಣದಲ್ಲಿ ಸೋಮವಾರ ಬಸ್ ಹತ್ತಲು ಪ್ರಯಾಣಿಕರ ನೂಕು ನುಗ್ಗಲು ಉಂಟಾಗಿತ್ತು
ರಾಯಚೂರು ಕೇಂದ್ರ ಬಸ್‌ ನಿಲ್ದಾಣದಲ್ಲಿ ಸೋಮವಾರ ಬಸ್ ಹತ್ತಲು ಪ್ರಯಾಣಿಕರ ನೂಕು ನುಗ್ಗಲು ಉಂಟಾಗಿತ್ತು   

ರಾಯಚೂರು: ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ನಡೆಯುವ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿರುವ ಅನೇಕ ಮತದಾರರು ತಮ್ಮ ಊರುಗಳಿಗೆ ತೆರಳಲು ಪರದಾಡಬೇಕಾಯಿತು.

ಉದ್ಯೋಗ, ಶಿಕ್ಷಣ ಹಾಗೂ ವಿವಿಧ ಕಾರಣಕ್ಕೆ ಜಿಲ್ಲಾ ಕೇಂದ್ರಗಳಲ್ಲಿ ವಾಸವಾಗಿರುವ ಅನೇಕರು ಮಂಗಳವಾರ ಮತದಾನ ಮಾಡಲು ಸಜ್ಜಾಗಿ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಾಗ ಅಚ್ಚರಿ ಕಾದಿತ್ತು. ಬಸ್‌ಗಳಲ್ಲಿ ನಿಲ್ಲಲು ಜಾಗವಿಲ್ಲದಷ್ಟು ಪ್ರಯಾಣಿಕರು ತುಂಬಿದ್ದರು.

ಜಿಲ್ಲೆಯ ಅನೇಕ ನಗರ ಪಟ್ಟಣಗಳ ಬಸ್‌ಗಳ ಸಂಚಾರ ರದ್ದುಗೊಳಿಸಿ ಚುನಾವಣಾ ಸಿಬ್ಬಂದಿ ಹಾಗೂ ಮತಯಂತ್ರಗಳನ್ನು ಸಾಗಿಸಲು ಕೊಡಲಾಗಿದೆ. ಹೀಗಾಗಿ ಬಸ್‌ಗಳ ಕೊರತೆ ಎದುರಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದರು.

ಸಂಜೆ ಬಾರಿ ಸಂಖ್ಯೆಯಲ್ಲಿ ಪ್ರಯಾಣಿಕರು ಸೇರಿದ್ದರಿಂದ ಬಸ್‌ನಲ್ಲಿ ಸೀಟು ಪಡೆಯಲು ಹರಸಾಹಸ ಪಡಬೇಕಾಯಿತು. ಬಸ್‌ ಏರಲು ನೂಕು ನುಗ್ಗಲು ಉಂಟಾಗಿತ್ತು. ಕೆಲ ಪ್ರಯಾಣಿಕರು ಚಾಲಕರು ಕುಳಿತುಕೊಳ್ಳುವ ಜಾಗದ ಬಳಿ ಇರುವ ಕಿಟಕಿಯಿಂದ ಬಸ್‌ ಒಳಗೆ ನುಗ್ಗಿದರು. ಕೆಲವರು ಮಕ್ಕಳನ್ನು ಕಿಟಕಿಯಿಂದಲೇ ಸೀಟಿನ ಮೇಳೆ ಕುಳಿಸಿ ನಂತರ ಪ್ರಯಾಸ ಪಟ್ಟು ಒಳಗೆ ಏರಿದರು.

ADVERTISEMENT

ಬೆಂಗಳೂರು, ಹೈದರಾಬಾದ್ ಮಹಾನಗರಗಳಿಗೆ ಕೆಲಸಕ್ಕೆ ತೆರಳಿದ್ದ ಕೂಲಿಕಾರ್ಮಿಕರು, ಕೃಷಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಪುಣೆಗೆ ತೆರಳಿರುವ ಕಾರ್ಮಿಕರು ಸಹ ಮತದಾನ ಮಾಡಲು ಊರಿಗೆ ಬರುತ್ತಿರುವುದು ಕಂಡು ಬಂದಿತು.

ಲಿಂಗಸುಗೂರು, ಕವಿತಾಳ, ಸಿರವಾರ, ಮುದಗಲ್, ದೇವದುರ್ಗದ ಪ್ರಯಾಣಿಕರೇ ಅಧಿಕ ಸಂಖ್ಯೆಯಲ್ಲಿ ಇದ್ದರು. ಬಸ್‌ಗಳ ಕೊರತೆಯಿಂದಾಗಿ ಬಹಳ ಹೊತ್ತಿನವರೆಗೂ ಬಸ್‌ ನಿಲ್ದಾಣಲ್ಲೇ ಕುಳಿತ್ತಿದ್ದ ಅನೇಕ ಮಹಿಳೆಯರು ಊರು ಸೇರುವುದು ಹೇಗೆ? ಎನ್ನುವ ಚಿಂತೆಯಲ್ಲಿದ್ದರು.

‘ಮೊದಲು ರಾಜಕೀಯ ಪಕ್ಷಗಳೇ ಪುಣೆ, ಹೈದರಾಬಾದ್ ಪಟ್ಟಣಗಳಿಗೆ ಕೆಲಸ ಹುಡಿಕೊಂಡು ಗುಳೇ ಹೋದವರನ್ನು ಲಾರಿ, ಬಸ್‌ಗಳಲ್ಲಿ ಕರೆ ತರುತ್ತಿದ್ದರು. ಇದೀಗ ಚುನಾವಣಾ ಆಯೋಗ ಬಿಗಿ ನಿಯಮ ಜಾರಿಗೊಳಿಸಿದ ನಂತರ ಬಸ್‌ಗಳಲ್ಲಿ ಬರುತ್ತಿದ್ದಾರೆ. ಆದರೆ, ಕೆಲ ರಾಜಕೀಯ ಮುಖಂಡರು ಬಸ್ಸಿಗೆ ಬಂದರೆ ಪ್ರಯಾಣ ವೆಚ್ಚ ಭರಿಸುವ ಭರವಸೆ ನೀಡಿದ್ದಾರೆ‘ ಎಂದು ಲಿಂಗಸುಗೂರಿನ ಪ್ರಯಾಣಿಕರೊಬ್ಬರು ಹೇಳಿದರು.

‘ಮತಗಟ್ಟೆ ಅಧಿಕಾರಿ, ಸಿಬ್ಬಂದಿಗೆ ಮತ್ತು ಮತಯಂತ್ರಗಳೊಂದಿಗೆ ಮತಗಟ್ಟೆಗಳಿಗೆ ಪ್ರಯಾಣಿಸಲು 245 ಬಸ್‍ಗಳನ್ನು ಕರಾರು ಒಪ್ಪಂದದ ಮೇಲೆ ಜಿಲ್ಲಾಡಳಿತಕ್ಕೆ ಒದಗಿಸಲಾಗಿದೆ. ಮೇ 7ರಂದು ಸಹ ಬಸ್‍ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ‘ ಎಂದು ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ರಾಯಚೂರು ವಿಭಾಗೀಯ ನಿಯಂತ್ರಣ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.