ADVERTISEMENT

ಆನ್ವರಿ ರಸ್ತೆ ಮಧ್ಯೆ ಬೊಂಗಾ: ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 14:38 IST
Last Updated 3 ಆಗಸ್ಟ್ 2024, 14:38 IST
ಆನ್ವರಿ– ಕವಿತಾಳ ಮುಖ್ಯ ರಸ್ತೆಯಲ್ಲಿ ಬೊಂಗಾ ಬಿದ್ದಿರುವುದು
ಆನ್ವರಿ– ಕವಿತಾಳ ಮುಖ್ಯ ರಸ್ತೆಯಲ್ಲಿ ಬೊಂಗಾ ಬಿದ್ದಿರುವುದು   

ಹಟ್ಟಿ ಚಿನ್ನದ ಗಣಿ: ಆನ್ವರಿ ಗ್ರಾಮದ ಸೇತುವೆಯಲ್ಲಿ ಬೊಂಗಾ ಬಿದ್ದಿದ್ದು, ವಾಹನ ಸವಾರರಿಗೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಈ ರಸ್ತೆಯು ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸಿದೆ. ಆನ್ವರಿ ಗ್ರಾಮದಿಂದ 2 ಕಿ.ಮೀ ದೂರದಲ್ಲಿ ಜೂಗಪ್ಪನ ಹಳ್ಳದ ಸೇತುವೆ ರಸ್ತೆ ಮಧ್ಯೆ ಗುಂಡಿ ಬಿದ್ದಿದೆ. ನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಾಗುತ್ತವೆ. ಕೆಲವರು ಗುಂಡಿ ತಪ್ಪಿಸಲು ಹೋಗಿ  ಬಿದ್ದು ಗಾಯವಾದ ಘಟನೆ ಜರುಗಿವೆ. ಜನರ ಸಮಸ್ಯೆ ಬಗೆಹರಿಸಬೇಕಾದ ಅಧಿಕಾರಿಗಳು ಇತ್ತ ಕಡೆ ಸುಳಿಯುತ್ತಿಲ್ಲ ಎಂದು ಗ್ರಾಮಸ್ಧ ನಾಗರಾಜ ನಾಯಕ ದೂರಿದ್ದಾರೆ.

ಒಂದು ವರ್ಷದ ಹಿಂದೆ 9 ಕಿ.ಮೀ ರಸ್ತೆ ದುರಸ್ತಿಗೆ ಅನುದಾನ ಬಿಡುಗಡೆಯಾಗಿದೆ. ಆದರೆ ಗುತ್ತಿಗೆದಾರ 7 ಕಿ.ಮೀ ರಸ್ತೆ ನಿರ್ಮಾಣ ಮಾಡಿ ಉಳಿದ 2ಕಿ.ಮೀ ರಸ್ತೆಗೆ ಡಾಂಬರ್‌ ಹಾಕದೆ ಹಾಗೆ ಬಿಟ್ಟಿದ್ದಾರೆ. ಇದರಿಂದ ಜನರಿಗೆ ಸಮಸ್ಯೆ ಎದುರಾಗಿದೆ ಎನ್ನುತ್ತಾರೆ ಗ್ರಾಮಸ್ಧರು.

ADVERTISEMENT

ಗುತ್ತಿಗೆದಾರರು ಸರ್ಕಾರದ ನಿಮಯಗಳನ್ನು ಗಾಳಿಗೆ ತೂರಿ ಅರ್ಧ ಕಾಮಗಾರಿ ಮಾಡಿ ಸರ್ಕಾರದ ಅನುದಾನವನ್ನು ಕೊಳ್ಳೆ ಹೊಡೆಯುವ ಹುನ್ನಾರ ನಡೆಸಿದ್ದಾರೆ. ರಸ್ತೆ ಕಾಮಗಾರಿಯ ಗುತ್ತಿಗೆ ಪಡೆದ ಗುತ್ತಿಗೆದಾರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಕರುನಾಡ ವಿಜಯ ಸೇನೆ ಸಂಘಟನೆಯ ಅಧ್ಯಕ್ಷ ಅಮರೇಶ ಒತ್ತಾಯಿಸಿದ್ದಾರೆ.

ಗ್ರಾ.ಪಂ.ಅಧಿಕಾರಿಗಳು ಹಾಗೂ ಸದಸ್ಯರಿಗೆ ತಿಳಿಸಿದರೂ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ರಸ್ತೆ ಮಧ್ಯ ಬಿದ್ದ ಗುಂಡಿಯನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ನಿರ್ಲಕ್ಷ್ಯ ಮಾಡಿದರೆ ಲೋಕೋಪಯೋಗಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಧರು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.