ADVERTISEMENT

‘ಪಾಪು ಜ್ಞಾಪಕಶಕ್ತಿಯ ಗಣಿ ಆಗಿದ್ದರು’

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 13:59 IST
Last Updated 17 ಮಾರ್ಚ್ 2020, 13:59 IST
ರಾಯಚೂರಿನ ಪತ್ರಿಕಾ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪಾಟೀಲ ಪುಟ್ಟಪ್ಪ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಪತ್ರಕರ್ತ ಚನ್ನಬಸವಣ್ಣ ಅವರು ಮಾತನಾಡಿದರು
ರಾಯಚೂರಿನ ಪತ್ರಿಕಾ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪಾಟೀಲ ಪುಟ್ಟಪ್ಪ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಪತ್ರಕರ್ತ ಚನ್ನಬಸವಣ್ಣ ಅವರು ಮಾತನಾಡಿದರು   

ರಾಯಚೂರು: ಪ್ರತಿಯೊಂದು ಘಟನೆಗಳನ್ನು ದಿನಾಂಕ ಸಹಿತ ನಿಖರವಾಗಿ ಉಲ್ಲೇಖಿಸುವ ವಯೋಸಹಜ ಮರೆವು ಮೀರಿದ ಜ್ಞಾಪಕಶಕ್ತಿಯ ಗಣಿ ಪಾಟೀಲ ಪುಟ್ಟಪ್ಪ ಅವರಾಗಿದ್ದರು ಎಂದು ಪತ್ರಕರ್ತ ಚನ್ನಬಸವಣ್ಣ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ, ರಿಪೋರ್ಟರ್ಸ್‌ ಗಿಲ್ಡ್‌ ಹಾಗೂ ಸ್ಥಳೀಯಪತ್ರಿಕೆಗಳ ಸಂಪಾದಕರ ಸಂಘದಿಂದ ಮಂಗಳವಾರ ಆಯೋಜಿಸಿದ್ದ ಪಾಟೀಪ ಪುಟ್ಟಪ್ಪ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ಕಾನೂನು ಪದವೀಧರರಾಗಿದ್ದ ಪಾಪು, ಮುಂಬೈನಲ್ಲಿ ವಕೀಲರಾಗಿದ್ದರು. ಇವರ ಬರವಣಿಗೆ ಗಮನಿಸಿದ್ದ ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ಅವರು ಪತ್ರಕರ್ತರಾಗುವಂತೆ ಸಲಹೆ ನೀಡಿದ್ದರು. ಸ್ವಾತಂತ್ರ್ಯನಂತರ ಪಾಪು ಅವರು ಕ್ಯಾಲಿಫೋರ್ನಿಯಾಗೆ ಹೋಗಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿದರು. ತಾಯ್ನಾಡಿಗೆ ವಾಪಸ್‌ ಬರುವಾಗಲೇ ಐನ್‌ಸ್ಟೀನ್‌ ಅವರಂತಹ ದಿಗ್ಗಜರ ಸಂದರ್ಶನ ಮಾಡಿದ್ದರು ಎಂದು ಸ್ಮರಿಸಿದರು.

ADVERTISEMENT

ರಾಜ್ಯದಲ್ಲಿ ‘ಪ್ರಪಂಚ’ ‘ವಿಶ್ವವಾಣಿ’ ಪತ್ರಿಕೆಗಳನ್ನು ಕಟ್ಟಿ ಬೆಳೆಸಿದರು. ‘ಪ್ರಪಂಚ’ ಪತ್ರಿಕೆ ಸಂಗ್ರಹ ಯೋಗ್ಯವಾಗಿತ್ತು. ಅಂದಿನ ಕಾಲದಲ್ಲಿಯೇ ಕುವೆಂಪು, ಬೇಂದ್ರೆ ಅವರಂತಹ ಕವಿಗಳನ್ನು ವಿಮರ್ಶಿಸಿ ವಿಶೇಷ ವರದಿಗಳನ್ನು ಬರೆಯುವಂತಹ ವ್ಯಕ್ತಿತ್ವ ಅವರದ್ದಾಗಿತ್ತು. ರಾಜಕೀಯ ವ್ಯಕ್ತಿಗಳಿಗೆ ನೇರವಾಗಿ ಕಟು ಟೀಕೆ ಮಾಡುತ್ತಿದ್ದರು ಎಂದರು.

ಅಖಂಡ ಕರ್ನಾಟಕ ಆಗಬೇಕು ಎಂದು ಕಲ್ಯಾಣ ಕರ್ನಾಟಕದಲ್ಲಿ ಮೊದಲು ಧ್ವನಿ ಮೊಳಗಿಸಿದ್ದು ಪಾಪು. ಅನೇಕ ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುತ್ತಿದ್ದರು. ನಾಡು, ನುಡಿಗಾಗಿ ಅನೇಕ ಲೇಖನಗಳನ್ನು ಬರೆದು, ನಾಡಿನ ಅಸ್ಮಿತೆ ಕಾಪಾಡಿಕೊಂಡು ಬಂದಿದ್ದರು. ಹೋರಾಟಕ್ಕೂ ಸ್ಫೂರ್ತಿ ಹಾಗೂ ಪತ್ರಕರ್ತರಿಗೆ ಸದಾ ಮಾರ್ಗದರ್ಶಿ ಆಗಿದ್ದರು ಎಂದು ಹೇಳಿದರು.

ಪತ್ರಕರ್ತ ಭೀಮರಾಯ ಹದ್ದಿನಾಳ ಮಾತನಾಡಿ, ಪತ್ರಕರ್ತರೊಂದಿಗೆ ಸಾಕಷ್ಟು ಒಡನಾಟ ಇಟ್ಟುಕೊಂಡಿದ್ದ ಪಾಪು ಅವರು ಅನೇಕ ಸಲಹೆಗಳನ್ನು ನೀಡುತ್ತಿದ್ದರು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದು, ಸದಾಕಾಲ ಎಲ್ಲರಿಗೂ ಮಾದರಿಯಾಗಿರುತ್ತಾರೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ನಾಗಡದಿನ್ನಿ, ವೀರನಗೌಡ ಹಾಗೂ ವಿವಿಧ ಪತ್ರಿಕೆಗಳ ವರದಿಗಾರರು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.