ರಾಯಚೂರು: ಕಲ್ಯಾಣ ಜ್ಯುವೆಲರ್ಸ್ 20ನೇ ಚಿನ್ನಾಭರಣ ಮಳಿಗೆ ನಗರದ ರೈಲು ನಿಲ್ದಾಣ ರಸ್ತೆಯ ರಾಮ ಮಂದಿರ ಸಮೀಪ ಶುಕ್ರವಾರ ಆರಂಭವಾಯಿತು.
ಚಿತ್ರನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಅವರು ಚಿನ್ನಾಭರಣ ಮಳಿಗೆಯನ್ನು ಉದ್ಘಾಟಿಸಿದರು. ನಂತರ ಆಭರಣ ಪ್ರದರ್ಶನ ವೀಕ್ಷಿಸಿದರು. ಮುಂಬೈನಿಂದ ಹೈದರಾಬಾದ್‌ಗೆ ವಿಮಾನದಲ್ಲಿ ಆಗಮಿಸಿ ರಸ್ತೆ ಮಾರ್ಗವಾಗಿ ರಾಯಚೂರಿಗೆ ಬಂದ ಕಾರಣ ಸಂಜೆ 6 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ 7.45ಕ್ಕೆ ನಡೆಯಿತು.
ಶಿಲ್ಪಾ ಶೆಟ್ಟಿ ವೀಕ್ಷಿಸಲು ಭಾರಿ ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಹಾಗೂ ಯುವಕರು ಸೇರಿದ್ದರು. ಶಿಲ್ಪಾ ವೇದಿಕೆಯತ್ತ ಬರುತ್ತಲೇ ಅಭಿಮಾನಿಗಳು ಜೋರಾಗಿ ಶಿಳ್ಳೆ ಹೊಡೆದು, ಅವರತ್ತ ಕೈಬೀಸಿ ಕೂಗಿ ಸಂಭ್ರಮಿಸಿದರು. ಒಂದೂವರೆ ಗಂಟೆ ಕಾಲ ಅವರ ಚಲನಚಿತ್ರದ ಹಾಡುಗಳನ್ನೇ ಹಚ್ಚಲಾಗಿತ್ತು.
ಸಂಚಾರ ಒತ್ತಡ ನಿಯಂತ್ರಿಸಲು ಭಾರಿ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಭಾರತ ಸೇರಿದಂತೆ ದೇಶ ವಿದೇಶಗಳಲ್ಲಿ ಕಲ್ಯಾಣ ಜ್ಯವೆಲ್ಲರ್ಸ್‌ನ 310 ಮಳಿಗೆಗಳನ್ನು ಹೊಂದಿದೆ. ರಾಯಚೂರಿನಲ್ಲಿ ಆರಂಭವಾದ ಆಭರಣ ಮಳಿಗೆ ರಾಜ್ಯದ 20ನೇ ಮಳಿಗೆಯಾಗಿದೆ.
ಹೈದರಾಬಾದ್‌ನಿಂದ ಕಾರಿನಲ್ಲಿ ಬಂದಿಳಿದು ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಅಭಿಮಾನಿಗಳತ್ತ ಕೈಬೀಸಿದ ಶಿಲ್ಪಾ ಶೆಟ್ಟಿ ಅವರು ‘ಚೆನ್ನಾಗಿದ್ದೀರಾ?‘ ಎಂದು ಮಾತು ಆರಂಭಿಸಿ ನಂತರ ಹಿಂದಿಯಲ್ಲಿ ಮಾತನಾಡಿದರು.
‘ರಾಯಚೂರು ಹೈದರಾಬಾದ್ ಪ್ರದೇಶದಲ್ಲಿದೆ ಅಂದುಕೊಂಡಿದ್ದೆ. ಆದರೆ ಇದು ನಮ್ಮದೇ ನಾಡು ಎನ್ನುವುದು ತಿಳಿದು ಖಷಿ ಆಯಿತು. ನಾನು ಸಾಂಪ್ರದಾಯಿಕ ಆಭರಣಗಳನ್ನೇ ಹೆಚ್ಚು ಇಷ್ಟ ಪಡುತ್ತೇನೆ‘ ಎಂದು ತಿಳಿಸಿದರು.
‘ನಟ ಸೈಫ್‌ಅಲಿ ಖಾನ್ ಮೇಲೆ ದಾಳಿ ನಡೆದಿರುವುದು ದುರ್ದೈವ. ಮುಂಬೈ ಪೊಲೀಸರು ಈ ದಿಸೆಯಲ್ಲಿ ತಮ್ಮ ಕಾರ್ಯವನ್ನು ಮಾಡುತ್ತಿದ್ದಾರೆ. ಸೈಫ್‌ಅಲಿ ಖಾನ್ ಆದಷ್ಟು ಬೇಗ ಗುಣಮುಖರಾಗಲಿ‘ ಎಂದು ಹಾರೈಸುತ್ತೇನೆ‘ ಎಂದು ಹೇಳಿದರು.
‘ನನಗೆ ಊರಿಗೆ ಬಂದಷ್ಟೇ ಖುಷಿಯಾಗಿದೆ. ಖೇಡಿ ಹಾಗೂ ಡೆವಿನಲ್ ನನ್ನ ಮಂದಿನ ಸಿನಿಮೆಗಳು. ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ದ್ರುವ ಸರ್ಜಾ ಇದ್ದಾರೆ‘ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.