ADVERTISEMENT

ನಾರಾಯಣಗುರು ವಸತಿ ಶಾಲೆ ಮಂಜೂರು ಮಾಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 14:08 IST
Last Updated 1 ಅಕ್ಟೋಬರ್ 2022, 14:08 IST
ರಾಯಚೂರು ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ್‌ ನಾಯಕ ಅವರಿಗೆ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಪದಾಧಿಕಾರಿಗಳು ಶನಿವಾರ ಮನವಿ ಸಲ್ಲಿಸಿದರು.
ರಾಯಚೂರು ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ್‌ ನಾಯಕ ಅವರಿಗೆ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಪದಾಧಿಕಾರಿಗಳು ಶನಿವಾರ ಮನವಿ ಸಲ್ಲಿಸಿದರು.   

ರಾಯಚೂರು: ರಾಜ್ಯ ಸರ್ಕಾರ ಮಂಜೂರು ಮಾಡಿದ ಶ್ರೀನಾರಾಯಣ ಗುರು ವಸತಿ ಶಾಲೆಗಳನ್ನು ಕಲ್ಯಾಣ ‌ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೂ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಪದಾಧಿಕಾರಿಗಳು ಶನಿವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಮಾನವಿಯತೆಯ, ಸಮಾನತೆಯ ಹರಿಕಾರ ಶ್ರೀ ನಾರಾಯಣ ಗುರುಗಳ ಸ್ಮರಣಾರ್ಥವಾಗಿ 'ನಾರಾಯಣ ಗುರು ವಸತಿ ಶಾಲೆ'ಗಳನ್ನು ಪ್ರಾರಂಭಿಸುವದಾಗಿ ರಾಜ್ಯ ಸರ್ಕಾರ 2022-23ನೇ ಸಾಲಿನ ಬಜೆಟ್‍ನಲ್ಲಿ ಘೋಷಿಸಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಾರಂಭಿಸಲು ಆದೇಶಿಸಲಾಗಿದೆ. ಹಿಂದುಳಿದ ವರ್ಗಗಳ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಂತೆ ಅನುಕೂಲವಾಗಲಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ಹಿಂದುಳಿದ ವರ್ಗಗಳ ಮಕ್ಕಳು‌ ವಾಸವಾಗಿದ್ದಾರೆ. ಈ‌ ಭಾಗದ ಅನೇಕರು ಬದುಕಿಗಾಗಿ ಮಹಾನಗರಗಳಿಗೆ ಗುಳೆ ಹೋಗುತ್ತಾರೆ. ಹೀಗಾಗಿ ಈ ಭಾಗದ ಅನೇಕ ಮಕ್ಕಳು ಶಾಲೆಯನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಾರೆ. ಈ ಭಾಗದ ಎಲ್ಲಾ ಜಿಲ್ಲೆಗಳಿಗೂ ಶ್ರೀ ನಾರಾಯಣ ಗುರು ವಸತಿ ಶಾಲೆಗಳನ್ನು ಮಂಜೂರು ಮಾಡಿದಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಮನವಿ ಮಾಡಿದರು.

ADVERTISEMENT

ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಸಂಚಾಲಕ ಡಾ.ರಝಾಕ ಉಸ್ತಾದ್, ಮುಖಂಡರಾದ ಬಾಬುರಾವ್, ಬಸನಗೌಡ ಮಟಮಾರಿ, ಮಹಮ್ಮದ್ ಉಸ್ಮಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.