ಸಂಬಂಧಿಕರ ಆಕ್ರಂದನ
ಜಾಲಹಳ್ಳಿ (ರಾಯಚೂರು ಜಿಲ್ಲೆ): ದೇವದುರ್ಗ ತಾಲ್ಲೂಕಿನ ಬೋಮನಗುಂಡ ಗ್ರಾಮ ವ್ಯಾಪ್ತಿಯ ಕಾಲಂಗೇರ ದೊಡ್ಡಿ ವ್ಯಕ್ತಿಯನ್ನು ಭಾನುವಾರ ರಾತ್ರಿ ಕೊಲೆ ಮಾಡಲಾಗಿದೆ.
ಕಾಲಂಗೇರ ದೊಡ್ಡಿಯ ಬಸವರಾಜ ತಿಮ್ಮಯ್ಯ (35) ಕೊಲೆಯಾದವರು. ಭಾನುವಾರ ರಾತ್ರಿ ತಿಮ್ಮಯ್ಯ ಹಾಗೂ ಸಂಬಂಧಿಕರ ಮಧ್ಯೆ ಜಗಳ ಆರಂಭವಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಬಡಿದಾಡಿದ್ದಾರೆ. ಬಸವರಾಜ ತಿಮ್ಮಯ್ಯ ಗಂಭೀರವಾಗಿ ಗಾಯಗೊಂಡು ಕೊನೆಯುಸಿರೆಳೆದ್ದಾರೆ..
ಬಸವರಾಜ ತಿಮ್ಮಯ್ಯ ಅವರದ್ದು ಅವಿಭಕ್ತ ಕುಟುಂಬ. ಕೆಲ ವರ್ಷಗಳ ಹಿಂದೆ ಕುಟುಂಬದ ಸದಸ್ಯರು 3 ಎಕರೆ ಜಮೀನು ಖರೀದಿಸಿ ಚಿಕ್ಕಪ್ಪನ ಹೆಸರಲ್ಲಿ ನೋಂದಣಿ ಮಾಡಿಸಿದ್ದರು. ಚಿಕ್ಕಪ್ಪ ಸಾವಿಗೀಡಾದ ನಂತರ ಅವರ ಪತ್ನಿಯ ಹೆಸರಿಗೆ ಜಮೀನು ವರ್ಗಾವಣೆಯಾಗಿದೆ. ಬಸವರಾಜ ಅವರೇ ಜಮೀನು ಉಳುಮೆ ಮಾಡುತ್ತಿದ್ದರು. ಜಮೀನು ವಿಷಯವಾಗಿಯೇ ಎರಡು ಕುಟುಂಬಗಳ ಮಧ್ಯೆ ಆಗಾಗ ಕಲಹ ನಡೆಯುತ್ತಿತ್ತು.
ಬಸವರಾಜ ಅವರು ಭಾನುವಾರ ರಾತ್ರಿ ಬೋಮನಗುಂಡ ಗ್ರಾಮದಿಂದ ಕಾಲಂಗೇರ ದೊಡ್ಡಿಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಸೋದರ ಸಂಬಂಧಿಗಳೇ ಜಗಳ ತೆಗೆದು ಹಲ್ಲೆ ಮಾಡಿ ನಡೆಸಿ ಕೊಲೆ ಮಾಡಿದ್ದಾರೆ ಎಂದು ಬಸವರಾಜ ಅವರ ಸಂಬಂಧಿಕರು ದೂರಿದ್ದಾರೆ.
ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಗುಂಡೂರಾವ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.