ADVERTISEMENT

ಕವಿತಾಳ | ವಿದ್ಯುತ್ ವ್ಯತ್ತಯ: ಜೆಸ್ಕಾಂ ಕಚೇರಿಗೆ ರೈತರು ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 7:38 IST
Last Updated 10 ಜೂನ್ 2025, 7:38 IST
   

ಕವಿತಾಳ: ʼನಿರಂತರ ವಿದ್ಯುತ್ ವ್ಯತ್ತಯದಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆ ಉಂಟಾಗುತ್ತಿದೆʼ ಎಂದು ಆರೋಪಿಸಿದ ರೈತರು ಪಟ್ಟಣದ ಜೆಸ್ಕಾಂ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣ ಸೇರಿದಂತೆ ಸಮೀಪದ ಹುಸೇನಪುರ, ಕಡ್ಡೋಣಿ ತಿಮ್ಮಾಪುರ, ಸೈದಾಪುರ, ತೊಪ್ಪಲದೊಡ್ಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಅವಧಿಯಲ್ಲಿ ನಿರಂತರ ವಿದ್ಯುತ್ ಕಡಿತ ಮಾಡಲಾಗುತ್ತಿದೆ ಹೀಗಾಗಿ ಕೃಷಿ ಚಟುವಟಿಕೆಗೆ ಸಮಸ್ಯೆ ಎದುರಾಗಿದೆ ಮತ್ತು ಪಂಪ್ ಸೆಟ್ ಮೋಟರ್ ಗಳು ಹಾಳಾಗುತ್ತಿವೆ ಎಂದು ರೈತರು ಆರೋಪಿಸಿದರು.

ʼವಾರಾಬಂದಿ ನಿಯಮದಂತೆ ಹಗಲು ಹಾಗೂ ರಾತ್ರಿ ವೇಳೆ ಏಳು ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದ್ದು ಈ ಅವಧಿಯಲ್ಲಿ ಅನಿಯಮಿತವಾಗಿ ವಿದ್ಯುತ್ ಕಡಿತ ಮಾಡುವ ಮೂಲಕ ತೊಂದರೆ ನೀಡಲಾಗುತ್ತಿದೆ, ರೈತರು ಕೆಲಸ ಮಾಡುವುದನ್ನು ಬಿಟ್ಟು ವಿದ್ಯುತ್ ಗಾಗಿ ಕಾಯುವಂತಾಗಿದೆ, ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಕೂಲಿ ನೀಡುವ ಪ್ರಮೇಯ ಎದುರಾಗಿದೆʼ ಎಂದು ರೈತರಾದ ರಫಿ ಒಂಟಿಬಂಡಿ, ಮೌನೇಶ ನಾಯಕ, ಮೌಲಾಲಿ, ನಿಂಗಪ್ಪ, ಅಮರೇಶ, ಹಾಜೀಬಾಬಾ,ನಿಂಗಪ್ಪ, ಸಣ್ಣಪ್ಪ ಮತ್ತು ಮುಕ್ತಾರ್ ಪಾಶಾ ಮತ್ತಿತರರು ಆರೋಪಿಸಿದರು.

ADVERTISEMENT

ʼದುರಸ್ತಿ ನೆಪದಲ್ಲಿ ಎಲ್ಲಾ ಕಡೆ ವಿದ್ಯುತ್ ಸ್ಥಗಿತ ಮಾಡುವ ಬದಲಿಗೆ ಆಯಾ ಪ್ರದೇಶದಲ್ಲಿ ಕಡಿತ ಮಾಡಿ ದುರಸ್ತಿ ಕಾರ್ಯ ಮಾಡಬೇಕು ದೂರದ ಹೂಡಾ ಗ್ರಾಮದಲ್ಲಿ ದುರಸ್ತಿ ಇದೆ ಎಂದು ಹೇಳಿ ಕವಿತಾಳ ಸೇರಿದಂತೆ ಬಹುತೇಕ ಹಳ್ಳಿಗಳ ವ್ಯಾಪ್ತಿಯಲ್ಲಿ ಕಡಿತ ಮಾಡಲಾಗುತ್ತದೆʼ ಎಂದು ರೈತ ಮೌನೇಶ ಹಿರೇಕುರಬರ ಹೇಳಿದರು.

ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಸರಿಪಡಿಸಲಾಗುವುದು ಎಂದು ಜೆಸ್ಕಾಂ ಶಾಖಾಧಿಕಾರಿ ಜಲಾಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.