
ರಾಯಚೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಯಚೂರು ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ ಅಂಗವಾಗಿ ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ‘ಮಿಸ್ಟರ್ ಕಲ್ಯಾಣ ಕರ್ನಾಟಕ’ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಕುಂದಾನಗರಿ ಬೆಳಗಾವಿಯ ಪ್ರಶಾಂತ ಕನ್ನೂರಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಪ್ರಶಾಂತ ಕನ್ನೂರಕರ್ ಅವರಿಗೆ ಸ್ವರ್ಣ ಪದಕ ₹30 ಸಾವಿರ ನಗದು ಬಹುಮಾನ ಹಾಗೂ ಪ್ರಮಾಣಪತ್ರ ಪ್ರದಾನ ಮಾಡಲಾಯಿತು. ರನ್ನರ್‌ಅಪ್ ಆದ ಬೆಳಗಾವಿಯವರೇ ಆದ ಪ್ರತಾಪ ಕಾಲಕುಂದ್ರಿಕರ್ ಅವರಿಗೆ ಬೆಳ್ಳಿ ಪದಕ ₹10 ಸಾವಿರ ನಗದು ಬಹುಮಾನ ಹಾಗೂ ಪ್ರಮಾಣಪತ್ರ ಕೊಡಲಾಯಿತು. ಬೆಸ್ಟ್ ಪೋಸರ್ ಗೌರವಕ್ಕೆ ಪಾತ್ರರಾದ ರಾಯಚೂರಿನ ವೃಷಭ ವಶಿಷ್ಷ. ಅವರಿಗೆ ₹ 5 ಸಾವಿರ ನಗದು ಹಾಗೂ ಪ್ರಮಾಣಪತ್ರ ನೀಡಲಾಯಿತು.
ರಾಯಚೂರು ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ ಸಹೋಗದಲ್ಲಿ ಆರು ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಬೆಳಗಾವಿ ಜಿಲ್ಲೆಯವರೇ 15 ದೇಹದಾರ್ಢ್ಯ ಪಟಗಳು ಪಾಲ್ಗೊಂಡಿದ್ದರು. ರಾಯಚೂರು ಜಿಲ್ಲೆಯ ರಾಮದುರ್ಗದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಪಾಲ್ಗೊಂಡು ಅಲ್ಲಿಯೂ ಪ್ರಶಸ್ತಿಗಳ ಬೇಟೆ ಆಡಿ ನಿರಂತರವಾಗಿ ಪ್ರಯಾಣ ಮಾಡಿ ರಾಯಚೂರಿಗೆ ಬಂದಿದ್ದರು.
55 ಕೆ.ಜಿ ವಿಭಾಗದಲ್ಲೇ ಮೊದಲ ಮೂರು ಪ್ರಶಸ್ತಿಗಳನ್ನು ಗೆದ್ದು ಉಳಿದ ಜಿಲ್ಲೆಯವರಿಗೆ ಸೋಲಿನ ರುಚಿ ತೋರಿಸಿದರು. ಎರಡನೇ ಸುತ್ತಿನಲ್ಲಿ ನಡೆದ 65 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ರಾಯಚೂರಿನ ವೃಷಭ ವಸಿಷ್ಠ ಹಾಗೂ ನವಿನಕುಮಾರ ಅವರು ಮೊದಲ ಹಾಗೂ ಮೂರನೇ ಸ್ಥಾನ ಗೆದ್ದು ರಾಯಚೂರಿನ ಗೌರವ ಉಳಿಸಿದರು.
ವಿವಿಧ ತೂಕದ ವಿಭಾಗಗಳಲ್ಲಿ ಬೆಳಗಾವಿಗೆ 4, ರಾಯಚೂರು, ಕೊಪ್ಪಳಕ್ಕೆ 1 ಚಿನ್ನದ ಪದಕಗಳು ಲಭಿಸಿದವು. ಒಂದರಿಂದ 5ನೇ ಸ್ಥಾನ ಪಡೆದವರಿಗೂ ಪ್ರಮಾಣಪತ್ರ ಕೊಡಲಾಯಿತು. ಬೆಳಗಾವಿಯ ದೇಹದಾರ್ಢ್ಯಪಟುಗಳು 14 ಹಾಗೂ ರಾಯಚೂರಿನವರು 8 ಸ್ಥಾನಗಳಲ್ಲಿ ಗೆಲವು ಸಾಧಿಸಿದರು.
ಬೆಳಗಾವಿ, ಕಲಬುರಗಿ, ವಿಜಯಪುರ, ಕೊಪ್ಪಳ, ಹಾಸನ, ಧಾರವಾಡ ಜಿಲ್ಲೆಗಳ ಕ್ರೀಡಾಪಟುಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಕಲ್ಯಾಣ ಕರ್ನಾಟಕ ಜಿಲ್ಲೆಗಳ ದೇಹದಾರ್ಢ್ಯ ಪಟುಗಳಿಗಾಗಿಯೇ ಸ್ಪರ್ಧೆ ಆಯೋಜಿಸಿದ್ದ ಭಾಗವಹಿಸುವಿಕೆಯಲ್ಲಿನ ಪ್ರಮಾಣ ಕಡಿಮೆ ಇತ್ತು.
ಮೂರೂವರೆ ತಾಸು ತಡವಾಗಿ ಆರಂಭ
‘ಮಿಸ್ಟರ್ ಕಲ್ಯಾಣ ಕರ್ನಾಟಕ’ ದೇಹದಾರ್ಢ್ಯ ಸ್ಪರ್ಧೆ ಸಂಜೆ 4 ಗಂಟೆಗೆ ಆರಂಭವಾಗಬೇಕಿತ್ತು. ಆದರೆ ರಾತ್ರಿ 7.30ಕ್ಕೆ ಆರಂಭವಾಯಿತು. ಸರ್ಧೆ ವೇಳೆಗೆ ವಿದ್ಯುತ್ ಕೈಕೊಟ್ಟ ಕಾರಣ ಮುಖ್ಯಕಟ್ಟಡದಲ್ಲಿ ಕತ್ತಲು ಆವರಿಸಿತ್ತು. ದೂರು ಜಿಲ್ಲೆಗಳಿಂದ ನಿದ್ದೆಗೆಟ್ಟು ಪ್ರವಾಸ ಮಾಡಿ ಬಂದಿದ್ದವರು ತೊಂದರೆ ಅನುಭವಿಸಬೇಕಾಯಿತು. ಆಯೋಜಕರು ವೇದಿಕೆ ಬಳಿ ಮೊದಲೇ ಜನರೇಟರ್ ವ್ಯವಸ್ಥೆ ಮಾಡಿಕೊಂಡಿದ್ದರಿಂದ ವೇದಿಕೆ ಕಾರ್ಯಕ್ರಮ ಹಾಗೂ ಸ್ಪರ್ಧೆಗೆ ಅಡತಡೆಗಳು ಉಂಟಾಗಲಿಲ್ಲ. ಜಿ.ಪಂ ಸಿಇಒ ಮಹಾನಗರ ಪಾಲಿಕೆಯ ಆಯುಕ್ತ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳೊಂದಿಗೆಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಪಂದ್ಯ ವೀಕ್ಷಕರ ಸಾಲಿನಲ್ಲಿ ಕುಳಿತು ಪಂದ್ಯ ಆರಂಭದಿಂದ ರಾತ್ರಿ 10.30ರವರೆಗೆ ಸತತ 3 ಗಂಟೆ ಸಮಯ ದೇಹದಾರ್ಢ್ಯ ಸ್ಪರ್ಧೆಯ ವೀಕ್ಷಣೆ ನಡೆಸಿ ಸ್ಪರ್ಧಾಳುಗಳಿಗೆ ಹುರಿದುಂಬಿಸಿದರು.
ಸಂವಹನದ ಕೊರತೆ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಏರ್ಪಡಿಸಿದ್ದರೂ ಸಂಘಟಕರು ಮಾಧ್ಯಮಗಳಿಗೆ ಸರಿಯಾದ ಮಾಹಿತಿ ಕೊಟ್ಟಿರಲಿಲ್ಲ. ದೇಹದಾರ್ಢ್ಯಪಟುಗಳು ಸಂಪರ್ಕಿಸಬೇಕಾದ ಆಯೋಜಕರ ನಂಬರ್ ಇಮೇಲ್ ವಿಳಾಸ ಸ್ಪರ್ಧೆಯ ವಿವರಣೆ ಇರುವ ಮಾಹಿತಿ ಪೂರೈಸಿರಲಿಲ್ಲ. ರಾಯಚೂರು ಬಾಡಿಬಿಲ್ಡಿಂಗ್ ಅಸೋಸಿಯೇಷನ್ ಸಂಪರ್ಕಿಸಿದ ಜಿಲ್ಲೆಗಳ ಸಂಸ್ಥೆಯ ದೇಹದಾರ್ಢ್ಯಪಟುಗಳು ಮಾತ್ರ ಬಂದಿದ್ದರು. ಉತ್ಸವಕ್ಕೆ ಜನ ಸೇರಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕಲಾಗುತ್ತಿದೆ. ಆದರೆ ಅದಕ್ಕೆ ಪೂರಕವಾದ ಮಾಹಿತಿ ಹಂಚಿಕೊಳ್ಳದಿರುವುದು ಜಿಲ್ಲೆಯಲ್ಲಿ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ. ‘ಸ್ಪರ್ಧೆಗೆ ಸಿದ್ಧತೆ ಮೊಡಿಕೊಡುವ ಹೊಣೆ ನಮ್ಮ ಸಂಸ್ಥೆಗೆ ವಹಿಸಲಾಗಿತ್ತು. ಅದನ್ನು ನಮ್ಮ ಸಂಸ್ಥೆ ಅಚ್ಚುಕಟ್ಟಾಗಿ ಮಾಡಿದೆ. ಸ್ಪರ್ಧೆ ಬಗ್ಗೆ ಪತ್ರಿಕಾಗೋಷ್ಠಿ ಹಾಗೂ ಪ್ರಚಾರ ಜಿಲ್ಲಾಡಳಿತಕ್ಕೆ ಬಿಟ್ಟಿದೆ’ ಎಂದು ರಾಯಚೂರು ಬಾಡಿ ಬಿಲ್ಡಿಂಗ್ ಅಸೋಸಿಯೇಷನ್ ಅಧ್ಯಕ್ಷ ಮಂಜುನಾಥ ಹಾನಗಲ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.