ADVERTISEMENT

ಆಶ್ರಯಕೊಟ್ಟ ಪಕ್ಷಕ್ಕೆ ಚೂರಿ ಹಾಕಿದ ಪ್ರತಾಪಗೌಡ: ಸಿದ್ದರಾಮಯ್ಯ

ಕಾಂಗ್ರೆಸ್‌ ಸಮಾವೇಶಕ್ಕೆ ಹರಿದುಬಂದ ಕಾರ್ಯಕರ್ತರು, ಬೆಂಬಲಿಗರು

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 17:15 IST
Last Updated 23 ನವೆಂಬರ್ 2020, 17:15 IST
ಮಸ್ಕಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಬಸನಗೌಡ ತುರುವಿಹಾಳ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಪಕ್ಷದ ಧ್ವಜವನ್ನು ಹಸ್ತಾಂತರಿಸಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು
ಮಸ್ಕಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಬಸನಗೌಡ ತುರುವಿಹಾಳ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಪಕ್ಷದ ಧ್ವಜವನ್ನು ಹಸ್ತಾಂತರಿಸಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು   

ರಾಯಚೂರು: ‘ಎರಡು ಸಲ ಶಾಸಕನಾಗಿ ಆಯ್ಕೆ ಮಾಡಿ ಆಶ್ರಯ ಕೊಟ್ಟಿರುವ ಪಕ್ಷದ ಬೆನ್ನಿಗೆ ಚೂರಿ ಹಾಕಿರುವ ಪ್ರತಾಪಗೌಡ ಪಾಟೀಲ, ಬಿಜೆಪಿ ಸೇರ್ಪಡೆಯಾಗಿ ಮಸ್ಕಿ ಕ್ಷೇತ್ರದ ಜನರಿಗೆ ಮೋಸ ಮಾಡಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹರಿಹಾಯ್ದರು.

ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನ ಪಕ್ಕದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ಹಾಗೂ ಬಸನಗೌಡ ತುರುವಿಹಾಳ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಸ್ಕಿ ವಿಧಾನಸಭೆ ಕ್ಷೇತ್ರವು ಹೊಸದಾಗಿ ರಚನೆಯಾಗಿದ್ದ ಕಾರಣದಿಂದ ನಾನು ಮುಖ್ಯಮಂತ್ರಿ ಆಗಿದ್ದಾಗ ಕೇಳಿದಷ್ಟು ಅನುದಾನ ಮಂಜೂರಿ ನೀಡಿದ್ದೇನೆ. ಯಾವುದೇ ಕಾರಣಯಿಲ್ಲದೆ ಪಕ್ಷಾಂತರ ಮಾಡಿದವರನ್ನು ಜನದ್ರೋಹಿಗಳು ಎಂದು ಕರೆಯುತ್ತಾರೆ. ಹಣದ ಆಸೆಯಿಂದ ತನ್ನನ್ನು ತಾನು ಮಾರಿಕೊಂಡು ಬಿಜೆಪಿ ಸೇರಿದ್ದಾರೆ’ ಎಂದರು.

ADVERTISEMENT

ಮಸ್ಕಿ ಕ್ಷೇತ್ರಕ್ಕೆ ಇನ್ನೂ ಹಲವು ಭಾರಿ ಭೇಟಿ ಮಾಡುತ್ತೇನೆ. ಎಲ್ಲರೂ ಸಂಕಲ್ಪ ಮಾಡಿ, ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು. ಕಾಂಗ್ರೆಸ್‌ ಪಕ್ಷದ ಸಿದ್ಧಾಂತವನ್ನು ಮೆಚ್ಚಿಕೊಂಡು ಬಸನಗೌಡ ತುರ್ವಿಹಾಳ ಮತ್ತು ಅವರ ಬೆಂಬಲಿಗರು ಪಕ್ಷಕ್ಕೆ ಬಂದಿದ್ದಾರೆ. ಗೆಲ್ಲುವ ಭರವಸೆ ಇರುವುದರಿಂದ ಮಸ್ಕಿ ಉಪಚುನಾವಣೆಯಲ್ಲಿ ಬಸನಗೌಡ ಅವರಿಗೇ ಟಿಕೆಟ್‌ ಕೊಡುತ್ತೇವೆ ಎಂದು ಹೇಳಿದರು.

ಬಿಜೆಪಿ ಸರ್ಕಾರ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿಲ್ಲ. ಅಧಿಕಾರಕ್ಕೆ ಬಂದ ನಂತರ ಯಾವುದೇ ಜನಪರ ಕೆಲಸ ಮಾಡಿಲ್ಲ. ಕೊರೊನಾ ಔಷಧಿ ಖರೀದಿಯಲ್ಲಿ ₹2 ಸಾವಿರ ಕೋಟಿ ಲಂಚ ಹೊಡೆದಿದ್ದಾರೆ. ಯಡಿಯೂರಪ್ಪ ಚೆಕ್ ಮೂಲಕ ಲಂಚ ಪಡೆದಿದ್ದಾರೆ. ವಿಜಯೇಂದ್ರ ಆರ್ ಟಿಜಿಎಸ್ ಮೂಲಕ ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಸರ್ಕಾರ ಹಾಳು ಮಾಡಿದೆ. ಐದು ತಿಂಗಳಾದರೂ ಮಾಸಾಶನಗಳನ್ನು ನೀಡಿಲ್ಲ.‌ ನನ್ನ ಅವಧಿಯಲ್ಲಿ ಒಂದೇ ಒಂದು ಚೆಕ್ ಬೌನ್ಸ್ ಆಗಿಲ್ಲ. ಮುಂದಿನ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕ ಬರುತ್ತದೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಮಸ್ಕಿ ಕ್ಷೇತ್ರದ ಕಾರ್ಯಕರ್ತರು ಇಡೀ ರಾಜ್ಯಕ್ಕೆ ಒಂದು ಶಕ್ತಿ ಕೊಡುತ್ತಿದ್ದಾರೆ. ಈ ಸಮಾವೇಶವನ್ನು ಮರೆಯಲು ಸಾಧ್ಯವಿಲ್ಲ. ರಾಯಚೂರು ಜಿಲ್ಲೆಯ ಎಲ್ಲ ಮುಖಂಡರೆಲ್ಲ ಸೇರಿ ಪ್ರತಾಪಗೌಡ ಅವರ ಸ್ಥಾನಕ್ಕೆ ಬಸನಗೌಡ ತುರುವಿಹಾಳ ಯೋಗ್ಯವಾದ ವ್ಯಕ್ತಿಯನ್ನು ತಂದುಕೊಟ್ಟಿದ್ದಾರೆ. ಪಕ್ಷಕ್ಕೆ ದ್ರೋಹ ಮಾಡಿ ಪ್ರತಾಪಗೌಡ ಹೋಗಿದ್ದಾರೆ. ಮುಂಬರುವ ಉಪಚುನಾವಣೆಯಲ್ಲಿ ಬಸನಗೌಡ ಶಾಸಕರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ 15 ತಿಂಗಳಲ್ಲಿ ಬಡವರಿಗೆ ಮನೆಗಳನ್ನು ಕಟ್ಟಿ ಕೊಡುವುದಕ್ಕೆ ಸಾಧ್ಯವಾಗದ ವಸತಿ ಸಚಿವ ಸೋಮಣ್ಣ ಅವರು ಈಗ ಮಸ್ಕಿಯಲ್ಲಿ 6 ಸಾವಿರ ಮನೆ ನಿರ್ಮಿಸುತ್ತೇವೆ ಎಂದು ಸುಳ್ಳು ಭರವಸೆ ನೀಡಿ ಹೋಗಿದ್ದಾರೆ. ಇದನ್ನು ನಂಬಬೇಡಿ. ಬಿಜೆಪಿಗೆ ಸ್ವಂತ ಬಲವಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿ, ಸಮಾವೇಶ ಆಯೋಜನೆಯಲ್ಲಿ ತೋರಿಸಿದ ಉತ್ಸಾಹವನ್ನು ಕಾರ್ಯಕರ್ತರು ಉಪಚುನಾವಣೆಯಲ್ಲಿ ತೋರಿಸಬೇಕು ಎಂದರು.

ಕಾಂಗ್ರೆಸ್ ಮುಖಂಡ ಹಂಪನಗೌಡ ಬಾದರ್ಲಿ ಮಾತನಾಡಿ, ಆಮಿಷಗಳಿಗೆ ಒಳಗಾಗಿ ಪ್ರತಾಪಗೌಡ ಬಿಜೆಪಿ ಸೇರಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಗುರಿಯೊಂದಿಗೆ ಎಲ್ಲರೂ ಕೆಲಸ ಮಾಡಬೇಕಿದೆ. ಮಸ್ಕಿ ಕ್ಷೇತ್ರಕ್ಕೆ ಅತಿಹೆಚ್ಚು ಅನುದಾನ ನೀಡಿರುವ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಉಪಚುನಾವಣೆ ಸವಾಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿರುವ ಪ್ರತಾಪಗೌಡ ಅವರಿಗೆ ತಕ್ಕಪಾಠ ಕಲಿಸಬೇಕು. ಕಾರ್ಯಕರ್ತರೆಲ್ಲ ಉತ್ಸಾಹದಿಂದ ಚುನಾವಣೆಯಲ್ಲಿ ಕೆಲಸ ಮಾಡಬೇಕು ಎಂದು ಕೋರಿದರು.

ಎಐಸಿಸಿ ಕಾರ್ಯದರ್ಶಿ ಎನ್.ಎಸ್. ಬೋಸರಾಜ, ಕೆಪಿಸಿಸಿ ವಕ್ತಾರ ವಸಂತಕುಮಾರ, ಶಾಸಕ ರಾಘವೇಂದ್ರ ಹಿಟ್ನಾಳ, ಬಸನಗೌಡ ತುರುವಿಹಾಳ ಅವರು ಮಾತನಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಪಕ್ಷದ ಧ್ವಜ ಹಸ್ತಾಂತರಿಸಿ ಅಧಿಕೃತವಾಗಿ ಬಸನಗೌಡ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.

ಮಸ್ಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಸ್ವಾಗತಿಸಿದರು.

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ, ಶಾಸಕರಾದ ಬಸನಗೌಡ ದದ್ದಲ, ಡಿ.ಎಸ್.ಹುಲಗೇರಿ, ವಿಧಾನ ಪರಿಷತ್ ಬಸವರಾಜ ಪಾಟೀಲ, ಮುಖಂಡರಾದ ಹಂಪಯ್ಯ ನಾಯಕ, ಪುಷ್ಪಾ ಅಮರನಾಥ, ದೊಡ್ಡ ಬಸವರಾಜ, ನಿಯಾಜ್ ಖಾನ್, ಮಲ್ಲಿಕಾರ್ಜುನ ನಾಗಪ್ಪ, ನಾಗರಾಜ, ಶರಣಪ್ಪ ಮಟ್ಟೂರ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.