ADVERTISEMENT

Phone in: ನಿರ್ಭೀತಿಯಿಂದ ಪರೀಕ್ಷೆ ಬರೆಯಲು ಬನ್ನಿ- ರಾಜಶೇಖರ್‌ ಪಟ್ಟಣಶೆಟ್ಟಿ

ನಾಗರಾಜ ಚಿನಗುಂಡಿ
Published 13 ಏಪ್ರಿಲ್ 2022, 10:34 IST
Last Updated 13 ಏಪ್ರಿಲ್ 2022, 10:34 IST
ರಾಜಶೇಖರ ಪಟ್ಟಣಶೆಟ್ಟಿ
ರಾಜಶೇಖರ ಪಟ್ಟಣಶೆಟ್ಟಿ   

ರಾಯಚೂರು: ಬರುವ ಏಪ್ರಿಲ್‌ 22 ರಂದು ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗುತ್ತಿದ್ದು, ಈ ಸಂಬಂಧ ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಏನಾದರೂ ಗೊಂದಲಗಳಿದ್ದರೆ ನಿವಾರಣೆ ಮಾಡುವುದಕ್ಕಾಗಿ ’ಪ್ರಜಾವಾಣಿ‘ಯಿಂದ ‘ಕಾಲ್‌ ಮಾಡಿ ಸಮಸ್ಯೆ ಹೇಳ್ಕೊಳ್ಳಿ‘ ಫೋನ್‌ ಇನ್‌ ಕಾರ್ಯಕ್ರಮ ಬುಧವಾರ ಬೆಳಿಗ್ಗೆ 10 ರಿಂದ 11 ರವರೆಗೂ ಆಯೋಜಿಸಲಾಗಿತ್ತು.ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಜಶೇಖರ್‌ ಪಟ್ಟಣಶೆಟ್ಟಿ ಅವರು ಕರೆಗಳಿಗೆ ಸಮರ್ಪಕವಾಗಿ ಉತ್ತರ ನೀಡಿದರು. ಜಿಲ್ಲೆಯ ವಿವಿಧೆಡೆಯಿಂದ ವಿದ್ಯಾರ್ಥಿಗಳು ಮತ್ತು ಪಾಲಕರು ಕರೆ ಮಾಡಿದ್ದರು. ಒಟ್ಟಾರೆ ಫೋನ್‌ ಇನ್‌ ಕಾರ್ಯಕ್ರಮದ ಸಾರಾಂಶ ಇಲ್ಲಿದೆ.

* ಕೋವಿಡ್‌ ನಿಯಮ ಪಾಲನೆ ಕಡ್ಡಾಯ ಇದೆಯೇ?

– ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಇಲ್ಲದಿದ್ದರೂ ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿದ್ದು, ತಪ್ಪದೇ ಪಾಲನೆ ಮಾಡಬೇಕು. ಹಾಗೇ ಸ್ಯಾನಿಟೈಜರ್‌ ಬಳಸುವುದು, ಥರ್ಮಲ್‌ ಸ್ಕ್ಯಾನಿಂಗ್‌ ಮಾಡುವುದಕ್ಕೂ ವ್ಯವಸ್ಥೆ ಮಾಡಲಾಗಿದೆ. ಯಾವುದಾದರೂ ವಿದ್ಯಾರ್ಥಿಗೆ ತಲೆನೋವು, ಶೀತದಂತಹ ಸಣ್ಣ ಪ್ರಮಾಣದ ಕಾಯಿಲೆಗಳಿದ್ದರೆ ಚಿಕಿತ್ಸೆ ನೀಡುವುದಕ್ಕಾಗಿ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಪ್ರಥಮ ಚಿಕಿತ್ಸಾ ಕಿಟ್‌ ಇಡಲಾಗುತ್ತಿದೆ.

ADVERTISEMENT

* ಪರೀಕ್ಷೆ ಸಮೀಪಿಸುತ್ತಿದ್ದಂತೆ ಭಯವಾಗುತ್ತಿದೆ!

– ಓದಿಕೊಂಡಿದ್ದರೆ ಭಯಪಡುವ ಅಗತ್ಯ ಇರುವುದಿಲ್ಲ. ಪರೀಕ್ಷಾ ಕೇಂದ್ರದಲ್ಲಿ ಹುಲಿ, ಸಿಂಹಗಳಿರುವುದಿಲ್ಲ. ಎಲ್ಲರೂ ಮನಷ್ಯರೇ ಇರುತ್ತಾರೆ. ಆದರೂ ಪರೀಕ್ಷೆ ಭೀತಿ ಕಾಡುತ್ತಿದ್ದರೆ, ನಿಮ್ಮ ಮನೆಯ ದೇವರಿಗೆ ನಮಸ್ಕಾರ ಮಾಡಿಕೊಂಡು ಬನ್ನಿ. ಮುಖ್ಯವಾಗಿ ತಂದೆ–ತಾಯಿಗೆ ಪರೀಕ್ಷೆಗೆ ಬರುವ ಮುನ್ನ ಕಾಲುಮುಟ್ಟಿ ಆಶೀರ್ವಾದ ಪಡೆದುಕೊಳ್ಳಿ. ಪರೀಕ್ಷೆ ಎಂಬುದು ನಿಮ್ಮ ಉನ್ನತಿಗಾಗಿ ಇದೆ. ವಿದ್ಯಾರ್ಥಿಗಳನ್ನು ಭಯಪಡಿಸುವುದಕ್ಕಾಗಿ ಪರೀಕ್ಷೆ ಮಾಡುವುದಿಲ್ಲ. ಪ್ರಶ್ನೆಪತ್ರಿಕೆ ಕೂಡಾ ಮೊದಲಿಗಿಂತಲೂ ವಿಭಿನ್ನವಾಗಿದ್ದು, ನೀವು ಎಷ್ಟೇ ಓದಿಕೊಂಡು ಬಂದರೂ ನಿರ್ಭೀತಿಯಿಂದ ಬರೆಯುವುದಕ್ಕೆ ಅವಕಾಶವಿದೆ. ಪ್ರಶ್ನೆಗಳು ಬಹಳಷ್ಟಿದ್ದರೂ ಕೆಲವೊಂದಕ್ಕೆ ಮಾತ್ರ ಉತ್ತರ ಬರೆಯುವಂತೆ ಕೇಳಲಾಗುತ್ತಿದೆ.

* ಸಿರವಾರದ ಸರ್ಕಾರಿ ಪಪೂ ಕಾಲೇಜಿನಲ್ಲಿ ಇನ್ನೂ ಪಠ್ಯ ಬೋಧನೆ ಪೂರ್ಣ ಮಾಡಿಲ್ಲ?

– ಕೂಡಲೇ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಿ ಪಠ್ಯ ಬೋಧನೆ ಪೂರ್ಣಗೊಳಿಸಿದ್ದಾರೋ ಇಲ್ಲವೋ ಎಂಬುದರ ಮಾಹಿತಿ ಪಡೆದುಕೊಳ್ಳುತ್ತೇನೆ. ಭಾಷಾ ವಿಷಯದಲ್ಲಿ ಕೆಲವು ಭಾಗ ಪೂರ್ಣವಾಗಿರದಿದ್ದರೂ ಪ್ರಶ್ನೆಗಳನ್ನು ಹೆಚ್ಚಿಗೆ ಕೇಳುವುದರಿಂದ, ಬೋಧನೆ ಮಾಡಿರುವ ಪಾಠದ ಪ್ರಶ್ನೆಳಿಗಳಿಗೆ ಉತ್ತರ ಬರೆದರೂ ಸಾಕಾಗುತ್ತದೆ. ಒಟ್ಟಾರೆ ವಿದ್ಯಾರ್ಥಿಗಳಿಗೆ ಯಾವುದೇ ಅನಾನುಕೂಲ ಇರುವುದಿಲ್ಲ. ಇನ್ನೂ ಏಪ್ರಿಲ್‌ 22 ರಂದು ಪರೀಕ್ಷೆ ಇರುವುದರಿಂದ ಪಾಠದಲ್ಲಿ ಏನಾದರೂ ಸಂದೇಹಗಳಿದ್ದರೆ ಸಂಬಂಧಿಸಿದ ಉಪನ್ಯಾಸಕರಿಂದ ಪರಿಹಾರ ಮಾಡಿಕೊಳ್ಳಿ. ಓದಿಗೆ ಮಹತ್ವ ಕೊಡುವುದರಿಂದ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸುವುದಕ್ಕೆ ಸಾಧ್ಯವಾಗುತ್ತದೆ. ಪರೀಕ್ಷೆ ಬಗ್ಗೆ ಪೂರ್ವಾಗ್ರಹ ಭೀತಿ ಬೇಡ. ನಿಮ್ಮ ಕಾಲೇಜುಗಳಿಗೆ ಹಾಜರಾಗುವ ರೀತಿಯಲ್ಲೇ ಆರಾಮಾಗಿ ಬನ್ನಿ. ಏನಾದರೂ ಸಮಸ್ಯೆಯಿದ್ದರೆ ಪರೀಕ್ಷೆ ಆರಂಭವಾಗುವ ಪೂರ್ವದಲ್ಲಿ ಸಹಾಯ ಮಾಡುವುದಕ್ಕೆ ಪರೀಕ್ಷಾ ಕೇಂದ್ರದಲ್ಲಿ ಸಿಬ್ಬಂದಿ ಇರುತ್ತಾರೆ.

* ರಾಯಚೂರು ತಾಲ್ಲೂಕಿನ ಮಟಮಾರಿಯಿಂದ ಬೆಳಿಗ್ಗೆ 5 ಗಂಟೆಗೆ ಬಸ್‌ ಇದೆ. ಬೇಗನೆ ಬಂದರೆ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ

– ಪರೀಕ್ಷೆಗೆ ಬರೆಯುವುದಕ್ಕೆ ಗ್ರಾಮೀಣ ಭಾಗಗಳಿಂದ ಬರುವ ವಿದ್ಯಾರ್ಥಿಗಳಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಉಚಿತ ಬಸ್‌ ವ್ಯವಸ್ಥೆ ಮಾಡಿದೆ. ಈ ಸಂಬಂಧ ನಿಗಮದ ಅಧಿಕಾರಿಗಳು ಪತ್ರಿಕೆಗಳಲ್ಲಿ ಪ್ರಕಟಣೆಯನ್ನು ಕೊಟ್ಟಿದ್ದಾರೆ. ರಾಯಚೂರು ತಾಲ್ಲೂಕಿನ ಮಟಮಾರಿ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ನಸುಕಿನಲ್ಲಿಯೇ ಬಸ್‌ ಬಿಡುತ್ತದೆ ಎನ್ನುವ ಸಮಸ್ಯೆಗೆ ಪರಿಹಾರ ಮಾಡಲಾಗುವುದು. ಬೆಳಿಗ್ಗೆ 7 ಗಂಟೆಗೆ ರಾಜೋಳಿಯಿಂದ ಮಟಮಾರಿ ಮಾರ್ಗವಾಗಿ ಬಸ್‌ ಸಂಚರಿಸುವುದಕ್ಕೆ ತಿಳಿಸಲಾಗುವುದು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಹೆಚ್ಚುವರಿ ಬಸ್‌ಗಾಗಿಯೂ ಕೋರಿಕೆ ಸಲ್ಲಿಸಲಾಗುವುದು.

ಅನುಕೂಲತೆ ಹೊಂದಿರುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿರುವ ಕಡೆ ಕೆಲವು ದಿನಗಳಮಟ್ಟಿಗೆ ಬಾಡಿಗೆ ಕೋಣೆ ಪಡೆದು ಇರಬಹುದು.

* ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ, ಪೂರಕ ಪರೀಕ್ಷೆ ಇದೆಯೇ?

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಬಳಿಕ ಅನುತ್ತೀರ್ಣರಾದವರು ಪೂರಕ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಇರುತ್ತದೆ. ಫಲಿತಾಂಶದ ಜೊತೆಯಲ್ಲೇ ಪೂರಕ ಪರೀಕ್ಷೆಗೆ ಅರ್ಜಿ ನಮೂನೆಗಳು ಬಂದಿರುತ್ತವೆ. ಸಾಮಾನ್ಯವಾಗಿ ಆಗಸ್ಟ್‌ನೊಳಗೆ ಪೂರಕ ಪರೀಕ್ಷೆ ಮುಗಿಯುತ್ತದೆ. ಮುಖ್ಯವಾಗಿ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳು, ಅನುತ್ತೀರ್ಣರಾಗಿದ್ದರೂ ಸಿಇಟಿ, ಎನ್‌ಇಇಟಿ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಇರುತ್ತದೆ. ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಮುಂದಿನ ವಿದ್ಯಾಭ್ಯಾಸಕ್ಕೆ ಅವಕಾಶ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.